ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಜನಸಾಮಾನ್ಯರ ಬದುಕು ಸಂಕೀರ್ಣವಾಗಿದ್ದ ಕಾಲಘಟ್ಟದಲ್ಲಿ ಹೊರ ಬಂದಂತಹ ವಚನಗಳು ಹಾಗೂ 12ನೇ ಶತಮಾನದ ಶರಣರ ಚಿಂತನೆಗಳು ಮನುಷ್ಯರ ಉತ್ತಮ ಬದುಕಿಗೆ ಸಿಕ್ಕಂತಹ ದಾರಿದೀಪಗಳಾಗಿವೆ. ಮೂಢನಂಬಿಕೆ, ಕಂದಾಚಾರ, ಬಡವ-ಬಲ್ಲಿದ, ಮೇಲು - ಕೀಳು ಬೇಧಗಳು ಜನಸಾಮಾನ್ಯರ ಜೀವ ಹಿಂಡುತ್ತಿದ್ದ ಕಾಲದಲ್ಲಿ ಬಸವಾದಿ ಶರಣರ ವಚನಗಳು ಮನುಷ್ಯನಿಗೆ ಲೌಕಿಕ ಜೀವನ ದರ್ಶನ ಕೊಟ್ಟ ಮಾಣಿಕ್ಯಗಳು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ಬಣ್ಣಿಸಿದ್ದಾರೆ.ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಮಠದ 23 ನೇ ಜಗದ್ಗುರು ಡಾ.ರಾಜೇಂದ್ರ ಸ್ವಾಮೀಜಿ 109 ನೇ ಪುಣ್ಯಸ್ಮರಣೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಮನುಷ್ಯನ ಆಯುಷ್ಯದ ಬಹುತೇಕ ಸಮಯ ನಿದ್ದೆಯಲ್ಲಿಯೇ ಕಳೆಯುತ್ತದೆ. ಆದರೆ ಉಳಿವ ಅಲ್ಪ ಅವಧಿಯನ್ನು ಶರಣರ ತತ್ವಗಳು ಹಾಗೂ ಸಮಾಜಮುಖಿ ಚಿಂತನೆಗಳಿಗೆ ಬಳಸುವ ಮೂಲಕ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.ಸುತ್ತೂರು ಮಠದ 23 ನೇ ಜಗದ್ಗುರು ಡಾ.ರಾಜೇಂದ್ರ ಸ್ವಾಮೀಜಿ ಅವರ ಅನ್ನ, ಅರಿವು, ಆರೋಗ್ಯ ಎಂಬ ತ್ರಿವಿಧ ದಾಸೋಹದ ಫಲವಾಗಿ ಇಡೀ ನಾಡು ಸಾಕಷ್ಟು ಸುಶಿಕ್ಷಿತವಾಗಿದೆ. ಸಾವಿರ ವರ್ಷಗಳ ಪರಂಪರೆ ಇರುವ ಸುತ್ತೂರು ಮಠ ಇಂದು ಜಗದಗಲ 400 ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳನ್ನು ತೆರೆದುಕೊಂಡಿದೆ ಎಂದರು.
ಡಾ.ರಾಜೇಂದ್ರ ಶ್ರೀಗಳ ಜೀವನ ದರ್ಶನದ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಹಾಗೂ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿದರು.ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಪರಮೇಶ್, ಕುಶಾಲನಗರ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ ವಿರೂಪಾಕ್ಷ, ಮಾಜಿ ಅಧ್ಯಕ್ಷೆ ಲೇಖನಾ ಧರ್ಮೇಂದ್ರ ಇದ್ದರು.
ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಪುಟ್ಟರಾಜು ಅಲ್ಲಮಪ್ರಭುಗಳ ವಚನಗಳನ್ನು ಹಾಡಿದರು.ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅವರನ್ನು ಪರಿಷತ್ತು ವತಿಯಿಂದ ಗೌರವಿಸಲಾಯಿತು.