ಸಾರಾಂಶ
ಹೊಸಪೇಟೆ ನಗರಸಭೆ ಶೇಕ್ಷಾವಲಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಮಹಮ್ಮದ್ ಅಲಿ ಅಕ್ರಂ ಶಾ ಅವರು ಅವಿರೋಧ ಆಯ್ಕೆ ಘೋಷಿಸಿದರು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಸ್ಥಳೀಯ ನಗರಸಭೆ ಉಪಾಧ್ಯಕ್ಷರಾಗಿ ಶೇಕ್ಷಾವಲಿ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.ನಗರಸಭೆ ಉಪಾಧ್ಯಕ್ಷರಾಗಿದ್ದ ರೂಪೇಶ್ ಕುಮಾರ ಅವರು ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸದಸ್ಯ ಶೇಕ್ಷಾವಲಿ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಸದಸ್ಯರೆಲ್ಲರೂ ಒಮ್ಮತದಿಂದ ಶೇಕ್ಷಾವಲಿ ಅವರ ಆಯ್ಕೆಗೆ ಅನುಮೋದಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.
ನಗರಸಭೆಯ 35 ಸದಸ್ಯರಲ್ಲಿ 30 ಸದಸ್ಯರು ಹಾಜರಿದ್ದರು. ಸಂಸದ ವೈ. ದೇವೇಂದ್ರಪ್ಪ ಹಾಗೂ ಶಾಸಕ ಎಚ್.ಆರ್. ಗವಿಯಪ್ಪನವರು ಕೂಡ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಒಟ್ಟು 37 ಮತದಾರರಲ್ಲಿ 30 ಮತದಾರರು ಹಾಜರಿದ್ದರು. ಶೇಕ್ಷಾವಲಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಮಹಮ್ಮದ್ ಅಲಿ ಅಕ್ರಂ ಶಾ ಅವರು ಅವಿರೋಧ ಆಯ್ಕೆ ಘೋಷಿಸಿದರು. ಪೌರಾಯುಕ್ತ ಚಂದ್ರಪ್ಪ, ತಹಸೀಲ್ದಾರ್ ಕಚೇರಿ ಶಿರಸ್ತೇದಾರ ಶ್ರೀಧರ ಇದ್ದರು.ಈ ಹಿಂದೆ ಶೇಕ್ಷಾವಲಿ ಅವರು ಆಮ್ ಆದ್ಮಿ ಪಾರ್ಟಿಯಿಂದ ಗೆಲುವು ಸಾಧಿಸಿ ಮಾಜಿ ಸಚಿವ ಆನಂದ ಸಿಂಗ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ಅವರಿಗೆ ಉಪಾಧ್ಯಕ್ಷ ಸ್ಥಾನ ಒಲಿದು ಬಂದಿದೆ.