ಶಿಮುಲ್ ಚುನಾವಣೆ: ಕುಮಾರ್-ಆನಂದ್ ಮಧ್ಯೆ ಪೈಪೋಟಿ

| Published : Aug 13 2024, 12:51 AM IST

ಸಾರಾಂಶ

ಲೋಕಸಭೆ, ವಿಧಾನಸಭೆ ಸಾರ್ವಜನಿಕ ಚುನಾವಣೆಗಳನ್ನು ಮೀರಿಸುವಂತೆಯೇ ಶಿಮುಲ್‌ ಚುನಾವಣೆ ಕಂಡು ಬರುತ್ತಿದ್ದು, ಮತದಾರರನ್ನು ಸೆಳೆಯಲು ತೀವ್ರ ಪೈಪೋಟಿ ನಡೆಯುತ್ತಿದೆ.

* ಅನಂತಕುಮಾರ್

ಕನ್ನಡಪ್ರಭ ವಾರ್ತೆ ಭದ್ರಾವತಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್) ಚುನಾವಣೆಗೆ ಈ ಬಾರಿ ಸಹ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಕುಮಾರ್ ಹಾಗೂ ಒಕ್ಕೂಟದ ಮಾಜಿ ಅಧ್ಯಕ್ಷ ಡಿ.ಆನಂದ್ ಸ್ಪರ್ಧಿಸಿದ್ದು, ಈ ಇಬ್ಬರ ನಡುವೆ ಈ ಬಾರಿ ಸಹ ಪೈಪೋಟಿ ನಡೆಯುವುದು ಬಹುತೇಕ ಖಚಿತವಾಗಿದೆ. ೫ ವರ್ಷಗಳ ಅವಧಿಗೆ ನಡೆಯುವ ಚುನಾವಣೆಯಲ್ಲಿ ಈ ಹಿಂದೆ ತಾಲೂಕಿನ ಕೆಂಚೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಎಸ್.ಕುಮಾರ್ ಸ್ಪರ್ಧಿಸಿದ್ದರು. ಇವರಿಗೆ ಎದುರಾಳಿಯಾಗಿ ಕಾಂಚಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರದಿಂದ ಡಿ. ಆನಂದ್ ಸ್ಪರ್ಧಿಸಿದ್ದರು. ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಒಟ್ಟು ೨೬೪ ಹಾಲು ಉತ್ಪಾಕರ ಸಹಕಾರ ಸಂಘಗಳಿದ್ದು, ೩ ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಕಳೆದ ಬಾರಿ ಚುನಾವಣೆಯಲ್ಲಿ ಎಸ್. ಕುಮಾರ್ ವಿರುದ್ಧ ಡಿ. ಆನಂದ್ ಗೆಲುವು ಸಾಧಿಸಿದ್ದರು. ಅಲ್ಲದೆ ಡಿ. ಆನಂದ್ ಒಕ್ಕೂಟದ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು. ಇವರ ಗೆಲುವಿಗೆ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಕಾರಣಕರ್ತರಾಗಿದ್ದರು. ಈ ಹಿಂದೆ ಎಸ್.ಕುಮಾರ್ ಅಪ್ಪಾಜಿಯವರ ಆಪ್ತ ಬೆಂಬಲಿಗರಲ್ಲಿ ಒಬ್ಬರಾಗಿದ್ದರು. ಆದರೂ ಸಹ ಕುಮಾರ್ ಅಪ್ಪಾಜಿ ನಿಲುವಿಗೆ ವಿರುದ್ಧವಾಗಿ ಈ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಹಿನ್ನಲೆಯಲ್ಲಿ ಅಂದಿನಿಂದ ಅಪ್ಪಾಜಿ ಮತ್ತು ಕುಮಾರ್ ನಡುವೆ ವೈಷಮ್ಯ ಮೂಡಲು ಕಾರಣವಾಯಿತು ಎನ್ನಲಾಗಿದೆ. ಕೆಲವು ಬಾರಿ ವೇದಿಕೆಗಳಲ್ಲಿ ಕುಮಾರ್ ಬಹಿರಂಗವಾಗಿ ಅಪ್ಪಾಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಪ್ಪಾಜಿ ನಿಧನದ ಬಳಿಕ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಗೆಲುವಿಗೆ ಶ್ರಮಿಸಿದ್ದರು. ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದಂತೆ ಡಿ. ಆನಂದ್ ಇಂದಿಗೂ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ಉಳಿದು ಕೊಂಡಿದ್ದಾರೆ. ಅಲ್ಲದೆ ಬಿಜೆಪಿ ಮತ್ತು ಜೆಡಿಎಸ್ ಎರಡು ಹೊಂದಾಣಿಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಡಿ.ಆನಂದ್ ಗೆಲುವು ಸುಲಭವಾಗಲಿದೆ ಎನ್ನಲಾಗಿದೆ. ೧ ಸ್ಥಾನ ಅವಿರೋಧ ಆಯ್ಕೆ :ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ಕ್ಷೇತ್ರಗಳ ಒಟ್ಟು ೩ ಸ್ಥಾನಕ್ಕೆ ಈಗಾಗಲೇ ತೀರ್ಥಹಳ್ಳಿಯಿಂದ ಸಹಕಾರ ಧುರೀಣ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥಗೌಡ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ೨ ಸ್ಥಾನಗಳಿಗೆ ಆ.೧೪ರಂದು ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿ ಯಾಗಿರುವ ಎಸ್.ಕುಮಾರ್‌ರವರು ಆರ್.ಎಂ. ಮಂಜುನಾಥಗೌಡರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಜುನಾಥಗೌಡರು ಎಸ್. ಕುಮಾರ್‌ರವರ ಗೆಲುವಿಗೆ ಶ್ರಮಿಸುವುದು ಖಚಿತವಾಗಿದೆ. ಮತ್ತೊಂದೆಡೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಜಿಲ್ಲಾ ಬಿಜೆಪಿ ಸಹ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇದರಿಂದಾಗಿ ಆನಂದ್ ಗೆಲುವಿಗೆ ಹೆಚ್ಚಿನ ಬಲ ಬಂದಿದೆ.ಮತದಾರರ ಸೆಳೆಯಲು ಪೈಪೋಟಿ: ಲೋಕಸಭೆ, ವಿಧಾನಸಭೆ ಸಾರ್ವಜನಿಕ ಚುನಾವಣೆಗಳನ್ನು ಮೀರಿಸುವಂತೆ ಈ ಚುನಾವಣೆ ಕಂಡು ಬರುತ್ತಿದ್ದು, ಮತದಾರರನ್ನು ಸೆಳೆಯಲು ತೀವ್ರ ಪೈಪೋಟಿ ನಡೆಯುತ್ತಿದ್ದು, ಹಣ, ಉಡುಗೊರೆ ಸೇರಿದಂತೆ ನಾನಾ ಅಮಿಷಗಳ ಮೂಲಕ ಮತದಾರರನ್ನು ಸೆಳೆಯುತ್ತಿರುವುದು ಕಂಡು ಬರುತ್ತಿದೆ. ಮತದಾರರ ಒಲವು ಯಾರ ಕಡೆ ಎಂಬುದನ್ನು ಕಾದು ನೋಡಬೇಕಾಗಿದೆ.