ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಉತ್ಸವದ ಜೀವಾಳವಾಗಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಈ ಬಾರಿಯ ಉತ್ಸವದಲ್ಲೂ ನಡೆಯಲಿದ್ದು, ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜೊತೆಗೆ ವಿಜಯನಗರ ಜಿಲ್ಲಾಡಳಿತ ಪತ್ರ ವ್ಯವಹಾರ ನಡೆಸಿದೆ.ವಿಜಯನಗರ ಸಾಮ್ರಾಜ್ಯದ ಸ್ಥಾಪನೆ, ಸುವರ್ಣ ಯುಗ, ಸಾಮ್ರಾಜ್ಯದ ಪತನ ಸೇರಿದಂತೆ ವಿಜಯನಗರ ನೆಲದ ಕಥನವನ್ನು ಈ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಕಟ್ಟಿಕೊಡುತ್ತದೆ. ಈ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ವೈಭವವನ್ನು ಕಣ್ಣದುಂಬಿಕೊಳ್ಳಲು ಪ್ರೇಕ್ಷಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅದರಲ್ಲೂ ಉತ್ಸವ ಮುಗಿದರೂ ಅತ್ಯುತ್ಸಾಹದಿಂದ ಈ ಕಾರ್ಯಕ್ರಮ ವೀಕ್ಷಣೆ ಮಾಡುತ್ತಾರೆ.
ಧ್ವನಿ ಮತ್ತು ಬೆಳಕು ಏಳು ದಿನಹಂಪಿ ಉತ್ಸವ ಫೆಬ್ರವರಿ 28, ಮಾರ್ಚ್ 1,2ರಂದು ಮೂರು ದಿನಗಳವರೆಗೆ ನಡೆಯಲಿದೆ. ಆದರೆ, ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಫೆಬ್ರವರಿ 28ರಿಂದ ಮಾರ್ಚ್ 6ರ ವರೆಗೆ ಏಳು ದಿನಗಳ ವರೆಗೆ ನಡೆಯಲಿದೆ. ಫೆಬ್ರವರಿ 27ರಂದು ಅಂತಿಮ ತಾಲೀಮಿನ ನಿಮಿತ್ತ ಕಾರ್ಯಕ್ರಮ ಕೂಡ ನಡೆಯಲಿದೆ. ಅಲ್ಲದೇ, ಅದಕ್ಕೂ ಮುನ್ನ ಕಲಾವಿದರು ತಾಲೀಮು ನಡೆಸಲಿದ್ದಾರೆ.
ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಭಾರೀ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇ ಮುತುವರ್ಜಿ ವಹಿಸಿ, ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜೊತೆಗೆ ಪತ್ರ ವ್ಯವಹಾರ ನಡೆಸುತ್ತಿದೆ. ಈ ಕಾರ್ಯಕ್ರಮಕ್ಕೆ ಬೇಕಾದ ಅನುದಾನ ಒದಗಿಸಲು ಕೂಡ ಮುಂದಾಗಿದೆ. ಈಗಾಗಲೇ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರು ಕಚೇರಿಯಿಂದ ದಿಲ್ಲಿಯ ಕೇಂದ್ರ ಕಚೇರಿಗೂ ಪತ್ರ ರವಾನೆಯಾಗಿದೆ. ಅಲ್ಲಿಂದ ಗ್ರೀನ್ ಸಿಗ್ನಲ್ ದೊರೆತ ಕೂಡಲೇ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.110 ಕಲಾವಿದರುಹಂಪಿ ಗಜ ಶಾಲೆ ಆವರಣದಲ್ಲಿ 12 ಕಿರು ವೇದಿಕೆಗಳನ್ನು ನಿರ್ಮಾಣ ಮಾಡಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ 110 ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಒಂದು ಆನೆ ಭಾಗಿಯಾಗಲಿದೆ. ಇನ್ನು ತಂತ್ರಜ್ಞರು ಇತರೆ ಸಿಬ್ಬಂದಿ ಸೇರಿ ಒಟ್ಟು 130 ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿಜಯನಗರ ಸಾಮ್ರಾಜ್ಯದ ಕಥನವನ್ನು ಈ ಕಾರ್ಯಕ್ರಮ ಕಟ್ಟಿಕೊಡಲಿದೆ. ಈ ಕಾರ್ಯಕ್ರಮ ವೀಕ್ಷಣೆಗೆ ಚಳಿಯನ್ನು ಲೆಕ್ಕಿಸದೇ ಜನರು ಆಗಮಿಸುತ್ತಾರೆ.
ಕಲಾವಿದರ ಅಭಿನಯಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರೇ ನಟನೆ ಮಾಡುತ್ತಾರೆ. ವಿಜಯನಗರ ಸಾಮ್ರಾಜ್ಯವನ್ನು ಕಣ್ಣಿಗೆ ಕಟ್ಟುವಂತೇ ಅಭಿನಯದ ಮೂಲಕ ಕಲಾವಿದರು ಕಟ್ಟಿಕೊಡುತ್ತಾರೆ. ಶ್ರೀ ವಿದ್ಯಾರಣ್ಯರು, ಹಕ್ಕ-ಬುಕ್ಕರು, ಪ್ರೌಢದೇವರಾಯ, ಶ್ರೀಕೃಷ್ಣ ದೇವರಾಯ, ಅಳಿಯ ರಾಮರಾಯ, ಬಹುಮನಿ ಸುಲ್ತಾನರು, ಜಟ್ಟಿಗಳು, ಸೈನಿಕರು, ದಂಡ ನಾಯಕರು, ಮಂತ್ರಿಗಳು, ಮಠಾಧೀಶರು ಪಾತ್ರಗಳಲ್ಲಿ ಸ್ಥಳೀಯ ಕಲಾವಿದರು ಅಭಿನಯಿಸುತ್ತಾರೆ. ಯುದ್ಧ, ಪಟ್ಟಾಭಿಷೇಕ ಸಂದರ್ಭದಲ್ಲಿ ಜೀವಂತ ಆನೆ ಬಳಕೆ ಮಾಡಲಾಗುತ್ತದೆ. ಭರತ ನಾಟ್ಯ ಕಲಾವಿದೆಯರು ಕೂಡ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಹಂಪಿ ಉತ್ಸವದಲ್ಲಿ ಈ ಕಾರ್ಯಕ್ರಮ ಕರ್ನಾಟಕ ಇತಿಹಾಸದ ದರ್ಶನ ಮಾಡಿಸುತ್ತದೆ. ಜೊತೆಗೆ ಈ ನೆಲದ ಗತ ವೈಭವ ಮರುಕಳಿಸುತ್ತದೆ.ವಿಶೇಷ ಅಧಿಕಾರಿ ನಿಯೋಜನೆಹಂಪಿ ಉತ್ಸವದಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಸಲು ಈಗಾಗಲೇ ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜೊತೆಗೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಈ ಸಂಬಂಧ ವಿಶೇಷ ಅಧಿಕಾರಿಯನ್ನಾಗಿ ಎಲ್.ಡಿ. ಜೋಶಿ ಅವರನ್ನು ನಿಯೋಜನೆ ಮಾಡಲಾಗಿದೆ. ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಈ ಬಾರಿಯೂ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಸಲು ಪ್ರಯತ್ನ ನಡೆದಿದೆ.
ಎಂ.ಎಸ್. ದಿವಾಕರ್ ಜಿಲ್ಲಾಧಿಕಾರಿ, ವಿಜಯನಗರ.