ವಿಶ್ವ ಆನೆ ದಿನ ವಿಶೇಷ ಅಂಚೆ ಲಕೋಟೆ ಬಿಡುಗಡೆ

| Published : Aug 14 2025, 01:01 AM IST

ಸಾರಾಂಶ

ವಿಶೇಷ ಅಂಚೆ ಲಕೋಟೆಯನ್ನು ಕೊಡಗು ವಿಭಾಗದ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ದುಬಾರೆ ಸಾಕಾನೆ ಶಿಬಿರದಲ್ಲಿ ಬಿಡುಗಡೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತೀಯ ಅಂಚೆ ಇಲಾಖೆ ವತಿಯಿಂದ ವಿಶ್ವ ಆನೆ ದಿನ-2025 ಪ್ರಯುಕ್ತ ವಿಶೇಷ ಅಂಚೆ ಲಕೋಟೆಯನ್ನು ಕೊಡಗು ವಿಭಾಗದ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ದುಬಾರೆ ಸಾಕಾನೆ ಶಿಬಿರದಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು.

ಈ ವಿಶೇಷ ಅಂಚೆ ಲಕೋಟೆಯನ್ನು ಹರ್ಷ ಎಂಬ ಆನೆ ಹೊತ್ತಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಸಿಸಿಎಫ್ ಕೊಡಗು ವೃತ್ತ, ಡಿಸಿಎಫ್ ಮಡಿಕೇರಿ ವಿಭಾಗ, ಎಸಿಎಫ್ ಮಡಿಕೇರಿ, ಆರ್‍ಎಫ್‍ಒ ಕುಶಾಲನಗರ ವಿಭಾಗ ಹಾಗೂ ಅಂಚೆ ಇಲಾಖೆಯ ಕೊಡಗು ವಿಭಾಗದ ಅಧೀಕ್ಷಕರು, ಸಹಾಯಕ ಅಂಚೆ ಅಧೀಕ್ಷಕರು ಮತ್ತು ಎರಡು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊಡಗು ಜಿಲ್ಲೆಯ ಮಡಿಕೇರಿ ವಿಭಾಗದ ಕುಶಾಲನಗರದಲ್ಲಿರುವ ದುಬಾರೆ ಸಾಕಾನೆ ಶಿಬಿರವು ಸುಮಾರು 34 ಏಷ್ಯಾಟಿಕ್ ಆನೆಗಳನ್ನು ಹೊಂದಿದೆ. ಸಂಘರ್ಷದಲ್ಲಿರುವ ಕಾಡಾನೆಗಳನ್ನು ರಕ್ಷಿಸುವುದು, ಸೆರೆಹಿಡಿಯುವುದು, ಸ್ಥಳಾಂತರ ಮಾಡುವುದು ಮತ್ತು ಪಳಗಿಸುವುದು ಈ ದುಬಾರೆ ಸಾಕಾನೆ ಶಿಬಿರದ ಉದ್ದೇಶವಾಗಿದೆ.

ಇದರ ಜೊತೆಗೆ ಗಾಯಗೊಂಡ ಕಾಡಾನೆಗಳು ಹಾಗೂ ತಾಯಿ ಕಳೆದುಕೊಂಡ ಆನೆ ಮರಿಗಳನ್ನು ಸಹ ಈ ಶಿಬಿರಕ್ಕೆ ತರಲಾಗುತ್ತದೆ. ಅವುಗಳನ್ನು ಪೋಷಿಸಲು ಮತ್ತು ಬೆಳೆಸಲು ಬಳಸಲಾಗುತ್ತದೆ. ಇದು ವನ್ಯಜೀವಿ ಉತ್ಸಾಹಿಗಳು ಮತ್ತು ಆನೆಗಳ ಗುಣ ಲಕ್ಷಣಗಳು ಮತ್ತು ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವ ನಗರ ಸ್ಥಳೀಯರಿಗೆ ಸಂರಕ್ಷಣೆ ಶಿಕ್ಷಣದ ಕೇಂದ್ರವಾಗಿದೆ. ಇದು ಪರಿಸರ ಪ್ರವಾಸೋದ್ಯಮದ ಕೇಂದ್ರವೂ ಆಗಿದೆ. ವಿಶ್ವ ಪ್ರಸಿದ್ಧ ಮೈಸೂರು ದಸರಾ ಅಂಬಾರಿಗಾಗಿ ಆನೆಗಳನ್ನು ಸಹ ಈ ಶಿಬಿರದಿಂದಲೇ ಕಳುಹಿಸಲಾಗುತ್ತದೆ ಎಂದು ಕೊಡಗು ವಿಭಾಗದ ಅಂಚೆ ಅಧೀಕ್ಷರು ತಿಳಿಸಿದ್ದಾರೆ.