ರಾಮಲಲ್ಲಾನಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ

| Published : Jan 23 2024, 01:48 AM IST

ಸಾರಾಂಶ

ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಸೋಮವಾರ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹಬ್ಬದ ವಾತಾವರಣ ಕಂಡು ಬಂತು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಸೋಮವಾರ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹಬ್ಬದ ವಾತಾವರಣ ಕಂಡು ಬಂತು. ಶ್ರೀರಾಮ, ಆಂಜನೇಯ, ವಿನಾಯಕ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಹವನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂಡ ಸಡಗರ, ಸಂಭ್ರಮದಿಂದ ಜರುಗಿದವು.

ನಗರದ ಕೋಟೆ ಪ್ರದೇಶದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಬ್ರಾಹ್ಮಣ ಸಂಘ ಹಾಗೂ ವಿವಿಧ ಹಿಂದೂ ಸಂಘಟನೆಗಳ ಸಹಯೋಗದಲ್ಲಿ ಬೆಳಗ್ಗೆ 9ರಿಂದ ಶ್ರೀ ರಾಮತಾರಕ ಹೋಮ ಪ್ರಾರಂಭಿಸಿ 11.30ಕ್ಕೆ ಪೂರ್ಣಾಹುತಿ ನೆರವೇರಿಸಲಾಯಿತು. ವಿಕ್ರಮ ಜೋಶಿ, ಸುಬ್ಬಣ್ಣ ದೀಕ್ಷಿತ್, ಶ್ರೀಧರ ವಿಶ್ವರೂಪ ನೇತೃತ್ವದ ಪುರೋಹಿತರ ತಂಡ ಪೂಜಾ ಕಾರ್ಯ ನಡೆಸಿಕೊಟ್ಟರು. ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ದತ್ತಾತ್ರೇಯ ನಾಡಿಗೇರ, ಮನೋಜ ನರಗುಂದ, ಜಿ.ಎಲ್. ನಾಡಿಗೇರ, ಗೋವಿಂದ ಚಿಮ್ಮಲಗಿ, ಮಧು ಸಾತೇನಹಳ್ಳಿ, ಶ್ರೀಪಾದ ಕುಲಕರ್ಣಿ, ಉಮೇಶ ವಿಶ್ವರೂಪ, ಸಂಜೀವ ಶಿರಹಟ್ಟಿ, ಶ್ರೀಪಾದ ಜೋಶಿ, ಗಣೇಶ ನಾಡಿಗೇರ, ಸುಧೀರ ನಾಯ್ಕ್, ವಾದಿರಾಜ ಗಲಗಲಿ, ವಿಶ್ವನಾಥ ಹೊಳೆಬಾಗಿಲ, ವಾಸುದೇವ ಲದ್ವಾ, ಇಲಕಲ್ಲ, ರಾಜೇಂದ್ರ ಬಾಕಳೆ, ಅಜಯ ಮಠದ, ಸಂದೇಶ ಮೆಹರವಾಡೆ ಮತ್ತಿತರರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿದ್ದ ಬೃಹತ್ ಗಾತ್ರದ ಎಲ್‌ಇಡಿ ಟಿವಿ ಮೂಲಕ ಭಕ್ತರು ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರವನ್ನು ಕಣ್ತುಂಬಿಕೊಂಡರು. ನಂತರ ಭಕ್ತಾದಿಗಳಿಗೆ ಕೊಸಂಬರಿ, ಪಾನಕ ವಿತರಿಸಲಾಯಿತು.

ಕೋಟೆ ಹಾಗೂ ಸಂಗಮ ಸರ್ಕಲ್ ಬಳಿಯ ಶ್ರೀರಾಮ ದೇವಸ್ಥಾನಗಳಲ್ಲಿಯೂ ಕೂಡ ದೇವರಿಗೆ ವಿಶೇಷ ಪೂಜೆ, ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಗಲ್ಲಿ ಗಲ್ಲಿಗಳಲ್ಲಿ ಪ್ರಸಾದ, ಶರಬತ್ ವಿತರಣೆ:

ಶ್ರೀರಾಮೋತ್ಸವ ಹಿನ್ನೆಲೆ ನಗರದ ಗಲ್ಲಿ ಗಲ್ಲಿಗಳಲ್ಲಿ, ವಾಣಿಜ್ಯ ಮಳಿಗೆಗಳ ಕಾಂಪ್ಲೇಕ್ಸ್‌ಗಳ ಮುಂಭಾಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಸಿರಾ, ಉಪ್ಪಿಟ್ಟು, ಪಲಾವ್, ಇಡ್ಲಿ-ವಡಾ, ಶರಬತ್ ವಿತರಿಸಲಾಯಿತು.

ಗಮನ ಸೆಳೆದ ಮಕ್ಕಳು:

ಇಲ್ಲಿನ ಮಾರುತಿ ನಗರದಲ್ಲಿ ಪುಟ್ಟ ಮಕ್ಕಳು ರಾಮ, ಸೀತೆ, ಲಕ್ಷ್ಮಣನ ವೇಷ ಧರಿಸಿ ಎಲ್ಲರ ಗಮನ ಸೆಳೆದರು. ಇದಲ್ಲದೆ ಕೆಲವು ಪೋಷಕರು ತಮ್ಮ ಪುಟ್ಟ ಕಂದಮ್ಮಗಳಿಗೆ ಬಾಲರಾಮನ ಪೋಷಾಕು ಹಾಕಿಸಿ ಅವರ ಕೈಯಲ್ಲಿ ಬಿಲ್ಲು ಬಾಣ ನೀಡುವ ಮೂಲಕ ರಾಮಭಕ್ತಿ ಪ್ರದರ್ಶಿಸಿದರು.