ರಾಜ್ಯ ಸರ್ಕಾರ ತಿಗಣಿಯಂತೆ ಜನರ ರಕ್ತ ಹೀರುತ್ತಿದೆ: ಪಿ.ರಾಜೀವ

| Published : Jan 25 2025, 01:00 AM IST

ರಾಜ್ಯ ಸರ್ಕಾರ ತಿಗಣಿಯಂತೆ ಜನರ ರಕ್ತ ಹೀರುತ್ತಿದೆ: ಪಿ.ರಾಜೀವ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲ ಮಹಿಳೆಯರು ತಾಳಿ ಮಾರಾಟ ಮಾಡಿ ಬಡ್ಡಿ ತುಂಬಿದ್ದಾರೆ.

ಗದಗ: ರಾಜ್ಯ ಸರ್ಕಾರ ತಿಗಣೆಯಂತೆ ಜನರ ರಕ್ತ ಹೀರುತ್ತಿದೆ, ಅದರ ಮಧ್ಯ ಫೈನಾನ್ಸ್‌ ಕಾರ್ಪೊರೇಷನ್‌, ಮೈಕ್ರೋ ಫೈನಾನ್ಸ್‌ಗಳು ಅಮಾಯಕ ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಾಯ ಮಾಡುವ ಆಸೆ ತೋರಿಸಿ ಜೀವ ಹಿಂಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಪಿ. ರಾಜೀವ ಆರೋಪಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಅಲ್ಪಸ್ವಲ್ಪ ಸಾಲ ಪಡೆದು ಜೀವನ ಪೂರ್ತಿ ಬಡ್ಡಿ ಕಟ್ಟಿ ಸಾಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲ ಮಹಿಳೆಯರು ತಾಳಿ ಮಾರಾಟ ಮಾಡಿ ಬಡ್ಡಿ ತುಂಬಿದ್ದಾರೆ. ರಾಜ್ಯದಲ್ಲಿ ಸರ್ಕಾರ ಜೀವಂತ ಇದೆಯೇ ? ಮನುಷ್ಯತ್ವ ಇದೆಯೇ? ರಾಜ್ಯದಲ್ಲಿ ಏನು ನಡೆಯುತ್ತಿದೆ ಎನ್ನುವುದು ಸರ್ಕಾರಕ್ಕೆ ಗೊತ್ತಿಲ್ಲ ಎಂದರು.

ಫೈನಾನ್ಸ್‌ , ಮೈಕ್ರೊ ಕಂಪನಿಗಳು ಯಾವ ರೀತಿ ಜನರ ಜೀವ ಹಿಂಡುತ್ತಿವೆ ಎನ್ನುವುದರ ಬಗ್ಗೆ ಸರ್ಕಾರ ಕಿಂಚಿತ್ತು ಗಮನ ನೀಡುತ್ತಿಲ್ಲ. ಸಿಎಂ ಅವರನ್ನು ಕೇಳಿದರೆ ಗೃಹ ಮಂತ್ರಿಗಳನ್ನು ಕೇಳುತ್ತೇನೆ ಎನ್ನುತ್ತಾರೆ. ಕುರ್ಚಿ ಗುದ್ದಾಟದಲ್ಲಿ ರಾಜ್ಯದ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜನಸಾಮಾನ್ಯರಿಗೆ ಯಮನ ರೀತಿಯಲ್ಲಿ ಮೈಕ್ರೋ ಫೈನಾನ್ಸ್, ಚಿಟ್ ಫಂಡ್ ಗಳು ಕಾಡುತ್ತಿವೆ. ಈ ಬಗ್ಗೆ ಸರ್ಕಾರ ತಕ್ಷಣ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಶ್ರೀರಾಮುಲು, ಜನಾರ್ದನ ರೆಡ್ಡಿ ಕುಚಿಕು ಸ್ನೇಹಿತರು: ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಕುಚಿಕು ಸ್ನೇಹಿತರು, ಗಂಡ ಹೆಂಡತಿ, ಸ್ನೇಹಿತರ ಮಧ್ಯ ಜಗಳ ಸಹಜ, ಬಹಳ ದಿನ ಜಗಳ ಇರೋದಿಲ್ಲ, ಅವರದ್ದು ಮಕ್ಕಳ ಜಗಳ ಇದ್ದ ಹಾಗೆ ಎಂದು ಬಿಜೆಪಿ ನಾಯಕ ಪಿ.ರಾಜೀವ ಹೇಳಿದರು.

ರಾಮುಲು, ರೆಡ್ಡಿ ನಡುವೆ ಸ್ನೇಹದ ಜಗಳವಿದೆ. ಆದಷ್ಟು ಬೇಗ ಹಳೆಯ ಗೆಳೆತನ ಮುಂದುವರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ವಿಚಾರವಾಗಿ ಮಾತನಾಡಿದ ಅವರು, ಗೆಳೆಯರ ಮಧ್ಯದಲ್ಲಿ ಕಾಂಗ್ರೆಸ್ ರಾಜಕೀಯ ಬೆಳೆ ಬೇಯಿಸಿಕೊಳ್ಳೋದು ಒಳ್ಳೆಯದಲ್ಲ. ಸ್ನೇಹಿತರ ಮಧ್ಯದ ಜಗಳ ಬಳಕೆ ಮಾಡಿಕೊಳ್ಳುವಷ್ಟು ಕಾಂಗ್ರೆಸ್ ಗೆ ದುರ್ಗತಿ ಬಂದಿದೆ.

ಶ್ರೀರಾಮುಲು ವಾಲ್ಮೀಕಿ ಸಮಾಜದ ಅಗ್ರಗಣ್ಯ ನಾಯಕ. ಈ ಜಗಳದ ಮೂಲಕ ಡಿ.ಕೆ.ಶಿವಕುಮಾರ್ ಲಾಭ ಮಾಡಿಕೊಳುವ ವಿಚಾರ ಮಾಡಿದ್ದರೆ, ಅದು ಡಿಕೆಶಿಯ ನೈತಿಕ ದಿವಾಳಿತನ ತೋರಿಸುತ್ತದೆ. ಬಿಜೆಪಿ ಶಿಸ್ತಿನ ಪಕ್ಷ, ಹೈಕಮಾಂಡ್‌ ಎಲ್ಲವನ್ನು ಗಮನಿಸುತ್ತದೆ ಎಂದರು.