ಬರ ಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ: ಆರೋಪ

| Published : May 22 2024, 12:46 AM IST

ಸಾರಾಂಶ

ಮಂಡ್ಯ ಜಿಲ್ಲೆಯ ರೈತರಿಗೆ ನಿರಂತರವಾಗಿ ಅನ್ಯಾಯವನ್ನು ಎಸಗುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ ಬರ ಪರಿಹಾರದಲ್ಲಿ ತಾರತಮ್ಯ ಮಾಡಿದೆ. ತಮಿಳುನಾಡಿಗೆ ನೀರು ಹರಿಸುವ ಮೂಲಕ, ರಾಜ್ಯ ರೈತರಿಗೆ ಅನ್ಯಾಯ ಮಾಡಿದ್ದ ಸರ್ಕಾರ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ ಎಂದು ರೈತರು ಯಾವುದೇ ಬೆಳೆ ಬೆಳೆಯದಂತೆ ಸೂಚಿಸಿ ದ್ರೋಹ ಮಾಡಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಾಜ್ಯ ಸರ್ಕಾರ ಘೋಷಣೆ ಮಾಡಿದ ಬರ ಪರಿಹಾರದಲ್ಲಿ ರೈತರಿಗೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಸೇರಿದಂತೆ ನೂರಾರು ರೈತರು ಒಣ ತೆಂಗಿನ ಗರಿ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೇಶಕ್ಕೆ ಅನ್ನ ಕೊಟ್ಟ ರೈತ ಸಮುದಾಯವನ್ನು ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಅನ್ಯಾಯ ಮಾಡುತ್ತಾ ರೈತರ ವಿಚಾರದಲ್ಲಿಯೂ ಸಹ ರಾಜಕೀಯ ಮಾಡುತ್ತಿದೆ ಎಂದು ಧಿಕ್ಕಾರದ ಘೋಷಣೆ ಕೂಗಿದರು.

ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ಮಂಡ್ಯ ಜಿಲ್ಲೆಯ ರೈತರಿಗೆ ನಿರಂತರವಾಗಿ ಅನ್ಯಾಯವನ್ನು ಎಸಗುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ ಬರ ಪರಿಹಾರದಲ್ಲಿ ತಾರತಮ್ಯ ಮಾಡಿದೆ ಎಂದು ದೂರಿದರು.

ತಮಿಳುನಾಡಿಗೆ ನೀರು ಹರಿಸುವ ಮೂಲಕ, ರಾಜ್ಯ ರೈತರಿಗೆ ಅನ್ಯಾಯ ಮಾಡಿದ್ದ ಸರ್ಕಾರ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ ಎಂದು ರೈತರು ಯಾವುದೇ ಬೆಳೆ ಬೆಳೆಯದಂತೆ ಸೂಚಿಸಿ ದ್ರೋಹ ಮಾಡಿತು ಎಂದು ಆರೋಪಿಸಿದರು.

ನಿರಂತರ ಐದಾರು ತಿಂಗಳು ಕಾಲುವೆಗಳಿಗೆ ನೀರು ಹರಿಸದೆ ಕೃತಕ ಬರ ಸೃಷ್ಟಿಸಿದೆ. ಕಾಲುವೆಗಳಿಗೆ ನೀರಿಲ್ಲದೇ ಸಕಾಲದಲ್ಲಿ ಮಳೆಯೂ ಆಗದೆ ರೈತರ ದೀರ್ಘಾವಧಿ ಬೆಳೆಗಳು ಸೇರಿದಂತೆ ಇತರೆ ಬೆಳೆಗಳು ಒಣಗಿ ಹೋಗಿವೆ. ಸರ್ಕಾರ ಪರಿಶೀಲನೆ ನಡೆಸದೆ, ಘೋಷಣೆ ಮಾಡಿದ ಬರ ಪರಿಹಾರವನ್ನು ಸಹ ನೀಡಿಲ್ಲ ಎಂದು ಕಿಡಿಕಾರಿದರು.

ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ಮಾತನಾಡಿ, ರೈತ ಪರ ಎನ್ನುವ ಕಾಂಗ್ರೆಸ್, ಬೆಂಬಲಿಸುವವರು ಬರದಿಂದ ನೊಂದ ರೈತರ ಪರ ದ್ವನಿ ಎತ್ತದೇ ಇರುವುದು ವಿಪರ್ಯಾಸ. ಕೇವಲ ನಾವು ರೈತರ ಪರ, ರೈತರ ಪರವಾಗಿ ಧ್ವನಿ ಎತ್ತುತ್ತೇವೆ ಎನ್ನುವ ನಾಟಕದಿಂದ ರೈತ ಸಮುದಾಯಕ್ಕೆ ಯಾವುದೇ ನ್ಯಾಯ ಸಿಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನೊಂದ ರೈತರಿಗೆ ಬದುಕುವ ಹಕ್ಕಿನ ರಕ್ಷಣೆ ನೀಡುವುದಕ್ಕಾಗಿ ಬರದ ಗಂಭೀರ ಪರಿಸ್ಥಿತಿ ಅರಿತು ಪರಿಹಾರ ನೀಡಲು ಮುಂದಾಗಿಲ್ಲ. ನಾವು ರೈತ ಪರ ಎಂದು ತೋರಿಕೆಗೆ ಬಿಡಿಗಾಸು ನೀಡುವ ನಿಮ್ಮ ಸರ್ಕಾರದ ನಿಲುವಿನಿಂದ ರೈತರು ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ದೂರಿದರು.

ಕೂಡಲೇ ನೀರಾವರಿ, ಮಳೆ ಆಶ್ರಯದ ಬೇಸಾಯ ಎಂಬ ಹೆಸರಿನಲ್ಲಿ ತಾರತಮ್ಯ-ಮಾಡದೆ ಎಲ್ಲಾ ರೈತರಿಗೆ ಹೆಕ್ಟೇರ್‌ಗೆ ಕನಿಷ್ಠ 50 ಸಾವಿರ ರು. ಘೋಷಣೆ ಮಾಡಿ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿ ನಂತರ ತಹಸೀಲ್ದಾರ್ ಪರುಸುರಾಮ್ ಸತ್ತಿಗೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಮಹದೇವಪುರ ಕೃಷ್ಣ, ಕಡತನಾಳು ಶ್ರೀಧರ್, ಕೆ.ಜಯರಾಮು, ಮಹೇಶ್, ರಾಮಕೃಷ್ಣ, ಸಿದ್ದೇಗೌಡ, ಉಂಡವಾಡಿ ಮಹದೇವು, ಮಹಾಲಿಂಗು, ಕೆಂಪೇಗೌಡ, ರಮೇಶ್, ಶಂಕರ್, ಚಾಮೇಗೌಡ, ನಾಗಣ್ಣ, ಮಹೇಶ್, ಸಿದ್ದೇಗೌಡ, ಶಂಕರೇಗೌಡ, ರಾಮಚಂದ್ರು, ಸ್ವಾಮಿ, ಬಾಬು, ಹನಿಯಂಬಾಡಿ ನಾಗರಾಜು, ಕೃಷ್ಣ, ಪುರುಷೋತ್ತಮ, ಎಚ್.ಡಿ. ಕೃಷ್ಣ ಸೇರಿದಂತೆ ಇತರ ನೂರಾರು ಮಂದಿ ರೈತರು ಭಾಗವಹಿಸಿದ್ದರು.