ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಕನ್ನಡ ಭಾಷೆ ಬಲಿಷ್ಠವಾಗುವುದು ಭಾಷೆಯನ್ನು ಬಳಸುವುದರಿಂದ ಹೊರತು ಭಾಷಣದಿಂದಲ್ಲ. ಕರುನಾಡು ಕಟ್ಟಲು ಕಂಕಣ ಕಟ್ಟಿ ಹೋರಾಡಿದ ಮಹನೀಯರನ್ನು, ಕನ್ನಡ ಭಾಷೆ ಶ್ರೀಮಂತಗೊಳಿಸಿದ ಸಾಹಿತಿಗಳನ್ನು ಎಂದಿಗೂ ಮರೆಯಬಾರದು ಎಂದು ಶಿಕ್ಷಕ ಡಿ.ವಿ.ಹಿರೇಮಠ ಹೇಳಿದರು.ಸ್ಥಳೀಯ ಕೆಎಲ್ಇ ಪಾಲಿಟೆಕ್ನಿಕ್‌ನಲ್ಲಿ ಕಾಲೇಜಿನ ಕನ್ನಡ ಸಂಘದ ಅಡಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹನುಮಂತ ಎದೆ ಸೀಳಿ ರಾಮನನ್ನು ತೋರಿಸಿದಂತೆ ಕನ್ನಡಿಗರ ಎದೆ ಸೀಳಿದರೇ ಕನ್ನಡಾಂಬೆ ಕಾಣುವಷ್ಟು ಭಾಷಾಭಿಮಾನ ಮೈದಳೆಯಬೇಕೆಂದು ಹಳೆಗನ್ನಡ ಶ್ಲೋಕ ಮತ್ತು ಮುಕ್ತಾಯದಲ್ಲಿ ಕುವೆಂಪು ಗೀತೆ ಹಾಡಿ ರಂಜಿಸಿದರು.
ಪ್ರಾಚಾರ್ಯ ಎಸ್.ಐ.ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಿಗರ ಔದಾರ್ಯ ಅತಿಯಾಗಿ ಭಾಷೆಯ ಮಾಧುರ್ಯ ಕಡಿಮೆಯಾಗುತ್ತಿದೆ. ಬೇರೆ ರಾಜ್ಯಗಳಷ್ಟು ಭಾಷಾ ಪ್ರೇಮ ನಮ್ಮ ರಾಜ್ಯದಲ್ಲಿ ವಿರಳವಾಗುತ್ತಿರುವುದು ವಿಷಾದಕರ ಸಂಗತಿ. ರಾಜಧಾನಿಯಲ್ಲಿ, ಗಡಿಯಲ್ಲಿ ಕನ್ನಡದ ಕಂಪು ಹೆಚ್ಚಾಗಬೇಕಿದೆ. ನಮ್ಮದು ತಾಂತ್ರಿಕ ಮಹಾವಿದ್ಯಾಲಯವಾದರೂ 10 ದಿನಗಳ ಕಾಲ ಕನ್ನಡಪರ ನಾನಾ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂಭ್ರಮದಿಂದ ಸಮಾರೋಪಗೊಳಿಸುತ್ತಿದ್ದೇವೆ. ನಮ್ಮಲ್ಲಿ ಕನ್ನಡ ಯಾವಾಗಲೂ ಜೀವಂತವಾಗಿದೆ ಎಂದು ತಿಳಿಸಿದರು.ಕಾಲೇಜಿನ ಕನ್ನಡ ಸಂಘದ ಅಧ್ಯಕ್ಷ ಯು.ಡಿ.ಹಾದಿಮನಿ ಪ್ರಾಸ್ತಾವಿಕ ಮಾತನಾಡಿ, ನಾಡು ಕಟ್ಟಿದವರಿಗೆ, ಭಾಷೆ ಬೆಳೆಸಿದವರಿಗೆ ನಾವು ನ್ಯಾಯ ನೀಡಲು ಭಾಷೆ ಬಳಸಿ, ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ರಾಜ್ಯೋತ್ಸವ ನಿಮಿತ್ತ ಕರ್ನಾಟಕ ನಕ್ಷೆಯಲ್ಲಿ ಐತಿಹಾಸಕ ಸ್ಥಳ ಗುರುತಿಸುವ, ಎಲೆ ಮತ್ತು ಹೂವಿನ ಚಿತ್ತಾರ ಬಿಡಿಸುವ, ಕನ್ನಡ ನಾಡು ನುಡಿ ಬಿಂಬಿಸುವ ನೃತ್ಯ, ರಸಪ್ರಶ್ನೆ, ಕನ್ನಡ ಗಾಯನ ಸ್ಪರ್ಧೆ, ಡೊಳ್ಳು ಬಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರ ಹೆಸರನ್ನು ಸುಮನ್ ಖೋತ್ ಘೋಷಿಸಿದರು.ನಾಡದೇವಿ ಭುವನೇಶ್ವರಿ ಭಾಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪವೃಷ್ಠಿ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪ್ರಾಚಾರ್ಯ, ಉಪನ್ಯಾಸಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಮೂಹಿಕವಾಗಿ ನಾಡಗೀತೆ ಹಾಡಿದ್ದು ವಿಶೆಷವಾಗಿತ್ತು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಲಕ್ಷ್ಮೀ ಅಂಗಡಿ ಸ್ವಾಗತಿಸಿದರು. ಮಹಾದೇವಿ ಅಂಬಿ ಪರಿಚಯಿಸಿದರು. ನಿರ್ಮಲಾ ಫಕೀರಪುರ ನಿರೂಪಿಸಿದರು. ಅಂಜನಾ ಮಲಾಜ್ ವಂದಿಸಿದರು. ಸುಭಾಸ್ ಮೂಶಿ, ವಂದನಾ ಪಸಾರ, ಸವಿತಾ ಗೊಂದಿ, ಮಂಜುನಾಥ ಅರಕೇರಿ, ಅಮೀತ ಜಾಧವ, ಚೈತ್ರಾ ಹುದ್ದಾರ, ಸವಿತಾ ಬೀಳಗಿ, ವಿಶಾಲ ಮೆಟಗುಡ, ಈಶ್ವರ ಹೂಲಿ, ಗುರುರಾಜ ಅಥಣಿ ಸೇರಿದಂತೆ ಸಿಬ್ಬಂದಿ ಇದ್ದರು.