ಆಹಾರಗಳಿಗೆ ಕೃತಕ ಬಣ್ಣ, ರಾಸಾಯನಿಕ ಬಳಸಿದ್ರೆ ಕಠಿಣ ಕ್ರಮ

| Published : Jan 12 2024, 01:45 AM IST

ಆಹಾರಗಳಿಗೆ ಕೃತಕ ಬಣ್ಣ, ರಾಸಾಯನಿಕ ಬಳಸಿದ್ರೆ ಕಠಿಣ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಅಶುದ್ಧ ನೀರು ಹಾಗೂ ಕೃತಕ ಬಣ್ಣ, ರಾಸಾಯನಿಕ ಬಳಸಿದ ಆಹಾರ ಪದಾರ್ಥಗಳ ಸೇವಿಸುವುದರಿಂದ ಜನರು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೀಡಾಗುತ್ತಾರೆ. ಜನರೂ ಕೂಡ ರುಚಿಗಿಂತ ಹೆಚ್ಚಾಗಿ ಆರೋಗ್ಯಕರ ಆಹಾರ ಸೇವಿಸುವತ್ತ ಗಮನಹರಿಸಬೇಕು.ಈ ಬಾರಿ ಸ್ವಚ್ಛತೆ ಕಾಪಾಡದ ಇಬ್ಬರು ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಆಹಾರ ಸುರಕ್ಷತೆ ಇಲಾಖೆ ಅಧಿಕಾರಿ ಡಾ.ನಾಗರಾಜ್ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಹರಿಹರ

ಹೋಟೆಲ್ ಹಾಗೂ ರಸ್ತೆಬದಿ ತಳ್ಳುಗಾಡಿಗಳಲ್ಲಿನ ಆಹಾರ ತಯಾರಿಕೆಗೆ ಕೃತಕ ಬಣ್ಣ ಹಾಗೂ ರಾಸಾಯನಿಕಗಳ ಬಳಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ ಜೆ.ಎಸ್.ಡಾ.ನಾಗರಾಜ್ ಎಚ್ಚರಿಕೆ ನೀಡಿದರು.

ನಗರದ ಹೋಟೆಲ್ ಹಾಗೂ ರಸ್ತೆ ಬದಿ ವಿವಿಧ ತಿಂಡಿ ಮಾರುವ ಗೂಡಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ಧಪಡಿಸುವ ಆಹಾರಗಳು ಗ್ರಾಹಕರಿಗೆ ಆಕರ್ಷಕ ಹಾಗೂ ರುಚಿಕರವಾಗಿಸುವ ಭರಾಟೆಯಲ್ಲಿ ಕೆಲವರು ಆರೋಗ್ಯಕ್ಕೆ ಧಕ್ಕೆಯಾಗುವ ಪದಾರ್ಥಗಳ ಬಳಸುವುದು ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ನಗರದ ಗಾಂಧಿ ಸರ್ಕಲ್, ಹಳೆ ಪಿ.ಬಿ.ರಸ್ತೆ ಹಾಗೂ ಸುತ್ತಲಿನ ಹೋಟೆಲ್, ತಳ್ಳುಗಾಡಿಗಳಿಗೆ ಭೇಟಿ ನೀಡಿದ್ದೇವೆ. ಎಗ್‌ರೈಸ್, ಮೀನು, ಚಿಕನ್, ಗೋಬಿ ಮಂಚೂರಿ, ಪಾನಿಪುರಿ ಇತರೆ ತಿಂಡಿಗಳ ಮಾರುವ ವ್ಯಾಪಾರಿಗಳು ಗ್ರಾಹಕರಿಗೆ ಶುದ್ಧ ನೀರು ವಿತರಣೆ, ಸ್ವಚ್ಛತೆ ಬಗ್ಗೆ ನಿಗಾ, ಆಹಾರ ತಯಾರಿಕೆಗೆ ಕೃತಕ ಬಣ್ಣ, ರಾಸಾಯನಿಕಗಳ ಬಳಸದಂತೆ ಎಚ್ಚರಿಕೆ ನೀಡಲಾಗಿದೆ.

ಇಬ್ಬರು ಹೋಟೆಲ್ ಮಾಲೀಕರಿಗೆ ನೋಟಿಸ್:

ಅಶುದ್ಧ ನೀರು ಹಾಗೂ ಕೃತಕ ಬಣ್ಣ, ರಾಸಾಯನಿಕ ಬಳಸಿದ ಆಹಾರ ಪದಾರ್ಥಗಳ ಸೇವಿಸುವುದರಿಂದ ಜನರು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೀಡಾಗುತ್ತಾರೆ. ಜನರೂ ಕೂಡ ರುಚಿಗಿಂತ ಹೆಚ್ಚಾಗಿ ಆರೋಗ್ಯಕರ ಆಹಾರ ಸೇವಿಸುವತ್ತ ಗಮನಹರಿಸಬೇಕು.

ಈ ಬಾರಿ ಸ್ವಚ್ಛತೆ ಕಾಪಾಡದ ಇಬ್ಬರು ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ, ಉಳಿದವರಿಗೆ ಕೇವಲ ಎಚ್ಚರಿಕೆ ನೀಡಲಾಗಿದೆ. ಶೀಘ್ರವೇ ಮತ್ತೊಮ್ಮೆ ನಗರಸಭೆ, ಪೊಲೀಸ್ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಭೇಟಿ ನೀಡಲಾಗುವುದು, ಆಗಲೂ ಪರಿಸ್ಥಿತಿ ಹೀಗೆ ಇದ್ದಲ್ಲಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಆಹಾರ ಸುರಕ್ಷತಾಧಿಕಾರಿ ಹರಪನಹಳ್ಳಿ ಕೊಟ್ರೇಶ್ ಹಾಗೂ ಸಿಬ್ಬಂದಿಗಳಿದ್ದರು.