ವಾರದೊಳಗೆ ಬಾಕಿ ಹಣ ನೀಡದಿದ್ರೆ ಹೋರಾಟ: ಕಾಂಬಳೆ

| Published : Jan 16 2025, 12:45 AM IST

ಸಾರಾಂಶ

ಸಕ್ಕರೆ ಕಾರ್ಖಾನೆಯವರು ಒಂದು ವಾರದೊಳಗೆ ರೈತರ ಬಾಕಿ ಹಣ ನೀಡಬೇಕು. ಇಲ್ಲದಿದ್ದರೆ ಬಾಕಿ ಹಣ ವಸೂಲಾತಿಗಾಗಿ ಕಾರ್ಖಾನೆಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವುದು ಅನಿವಾರ್ಯ

ಕನ್ನಡಪ್ರಭ ವಾರ್ತೆ ಮುಧೋಳ

2018-19ನೇ ಸಾಲಿನ ₹175 ಮತ್ತು 2021-22ನೇ ಸಾಲಿನ ₹62 ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ಒಂದು ವಾರದೊಳಗೆ ರೈತರ ಬಾಕಿ ಹಣ ನೀಡಬೇಕು. ಇಲ್ಲದಿದ್ದರೆ ಬಾಕಿ ಹಣ ವಸೂಲಾತಿಗಾಗಿ ಕಾರ್ಖಾನೆಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದು ಕಬ್ಬು ಬೆಳೆಗಾರರ ಹಾಗೂ ರೈತ ಸಂಘದ ಮುಖಂಡ ಬಸವಂತಪ್ಪ ಕಾಂಬಳೆ ಹೇಳಿದರು.

ನಗರದ ಕಾನಿಪ ಸಂಘದ ಕಾರ್ಯಾಲಯದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024 ಡಿಸೆಂಬರ್ ಮಾಸಾಂತ್ಯದೊಳಗೆ ರೈತರ ಖಾತೆಗೆ ಜಮೆ ಮಾಡಿಸುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತೆಗೆದುಕೊಂಡಿದ್ದರು. ಆದರೆ 2025 ಜ.15 ಮುಗಿದರೂ ಇನ್ನೂ ಕೆಲವು ಕಾರ್ಖಾನೆಯವರು ಬಾಕಿ ಹಣ ಪಾವತಿಸಿಲ್ಲ. ಕಾರಣ ಜವಾಬ್ದಾರಿ ತೆಗೆದುಕೊಂಡ ಸಚಿವರು ಮತ್ತು ಎಸ್ಪಿಯವರು ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿ ವಾರದೊಳಗೆ ರೈತರ ಬಾಕಿ ಹಣವನ್ನು ಕೊಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಕಬ್ಬು ಪೂರೈಸಿದ ರೈತರ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳ ವಿರುದ್ಧ ತಾವು ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಸಚಿವರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಧ್ಯಸ್ಥಿಕೆ ವಹಿಸಿ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಯವರಿಂದ ತಾವು ಹಣ ಕೊಡಿಸುವ ಜವಾಬ್ದಾರಿ ತೆಗೆದುಕೊಂಡಿದ್ದರಿಂದ ನಾವು ಪ್ರತಿಭಟನೆ ಹಿಂಪಡೆದವು. ಈಗ ಸಚಿವರ ಮತ್ತು ಎಸ್ಪಿ ಮಾತಿಗೆ ಕಾರ್ಖಾನೆಯವರು ಕವಡೆ ಕಾಸಿನ ಕಿಮ್ಮತ್ತೂ ನೀಡಿಲ್ಲ. ಇದರಿಂದ ರೈತರು ಕಾರ್ಖಾನೆಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ ಎಂದು ಕಾಂಬಳೆ ಹೇಳಿದರು.

ರೈತ ಮುಖಂಡ ದುಂಡಪ್ಪ ಯರಗಟ್ಟಿ ಮಾತನಾಡಿ, 2024-25ನೇ ಸಾಲಿಗೆ ಕಬ್ಬು ಪೂರೈಸಿದ ಹದಿನೈದು ದಿನದೊಳಗೆ ಮೊದಲನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡುವುದಾಗಿ ಕಾರ್ಖಾನೆಯ ಮಾಲೀಕರು ತಿಳಿಸಿದ್ದರು. ಆದರೆ ಕೆಲವು ಕಾರ್ಖಾನೆಯವರು ತಿಂಗಳು ಕಳೆದರೂ ಮೊದಲನೇ ಕಂತಿನ ಬಿಲ್‌ ನೀಡಿಲ್ಲ. ಅದಕ್ಕಾಗಿ ಶೇ.18ರಷ್ಟು ಬಡ್ಡಿ ಸೇರಿಸಿ ರೈತರ ಖಾತೆಗೆ ಕಬ್ಬಿನ ಬಿಲ್ಲ ಪಾವತಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಬಸವಂತಪ್ಪ ಕಾಂಬಳೆ, ಮಹೇಶ ಪಾಟೀಲ, ಸುಭಾಷ ಶಿರಬೂರ, ದುಂಡಪ್ಪ ಯರಗಟ್ಟಿ, ಹನಮಂತ ಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.