ಸ್ಪರ್ಧಾತ್ಮಕ ಯುಗದಲ್ಲಿ ಹಳ್ಳಿಗಾಡಿನ ಮಕ್ಕಳೂ ಸಹ ಉತ್ತಮ ವ್ಯಾಸಂಗ ಮಾಡಬೇಕು. ಪೋಷಕರು ಇಡೀ ಬದುಕಿನಲ್ಲಿ ಡೈರಿಗೆ ಹಾಲು ಹಾಕುವುದರಲ್ಲಿ ಜೀವನ ಸವೆಸುತ್ತಾರೆ. ಜೊತೆಗೆ ತಮ್ಮ ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲಿ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸತತ ಪರಿಶ್ರಮ, ಜೀವನದಲ್ಲಿ ಒಳ್ಳೆಯ ಸಂಸ್ಕಾರಗಳನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎನ್.ಅಪ್ಪಾಜಿಗೌಡ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮತ್ತು ನೌಕರರ ಕಲ್ಯಾಣ ಟ್ರಸ್ಟ್, ಹಾಲು ಉತ್ಪನ್ನ ಘಟಕದಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ 2024-25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಯ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಧ್ಯಯನಕ್ಕೆ ಒಂದು ಘಟ್ಟ. ನಂತರ ಐದು ವರ್ಷಗಳ ಕಾಲ ಸತತವಾಗಿ ಕಠಿಣ ಶ್ರಮ ವಹಿಸಿ ಅಧ್ಯಯನ ಮಾಡಿದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಈ ಅವಧಿಯಲ್ಲಿ ಹುಡುಗಾಟಿಕೆಯಿಂದ ಸಣ್ಣ ಪುಟ್ಟ ಆಸೆಗಳಿಗೆ ಒಳಗಾದಲ್ಲಿ ಇಡೀ ಜೀವನ ನರಕವಾಗುತ್ತದೆ ಎಂಬುದನ್ನು ಯಾರೂ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಹಳ್ಳಿಗಾಡಿನ ಮಕ್ಕಳೂ ಸಹ ಉತ್ತಮ ವ್ಯಾಸಂಗ ಮಾಡಬೇಕು. ಪೋಷಕರು ಇಡೀ ಬದುಕಿನಲ್ಲಿ ಡೈರಿಗೆ ಹಾಲು ಹಾಕುವುದರಲ್ಲಿ ಜೀವನ ಸವೆಸುತ್ತಾರೆ. ಜೊತೆಗೆ ತಮ್ಮ ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಯು.ಸಿ.ಶಿವಕುಮಾರ್ (ಶಿವಪ್ಪ) ಮಾತನಾಡಿ, ರೈತಾಪಿ ಮಕ್ಕಳು ನಗರ ಪ್ರದೇಶದ ಮಕ್ಕಳೊಂದಿಗೆ ಪೈಪೋಟಿ ಎದುರಿಸಿ ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂದರು.

ನಮ್ಮ ಮಕ್ಕಳೂ ಸಹ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳಿಗೆ ಹೋದರೆ ಪೋಷಕರಿಗೂ ಮತ್ತು ನಮಗೂ ಸಹ ಸಂತಸ ತರುತ್ತದೆ. ವಿದ್ಯಾರ್ಥಿಗಳನ್ನು ಪೋತ್ಸಾಹಿಸುವ ನಿಟ್ಟಿನಲ್ಲಿ ನಾವು ಪ್ರತೀ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಮನ್‌ಮುಲ್ ನಿರ್ದೇಶಕರಾದ ಬಿ.ಬೋರೇಗೌಡ, ಎಂ.ಬಿ.ಹರೀಶ್, ರಘುನಂದನ್.ಎಂ.ಎಸ್, ಕೆ.ರವಿ, ಎಸ್.ಪಿ.ಸ್ವಾಮಿ, ಲಕ್ಷ್ಮೀ ನಾರಾಯಣ್, ಸಿ.ಶಿವಕುಮಾರ್, ಎಂ.ಕೆ.ಹರೀಶ್‌ಬಾಬು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಪಿ.ಆರ್.ಮಂಜೇಶ್, ಜಂಟಿ ಕಾರ್ಯ ನಿರ್ವಹಣಾಧಿಕಾರಿ ಡಾ.ಅಕ್ಕಲಪ್ಪರೆಡ್ಡಿ, ಖಜಾಂಚಿ ಪುಷ್ಪಲತಾ ಸೇರಿದಂತೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.