ಸಾರಾಂಶ
ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇತರೆ, ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗುತ್ತದೆ
ಗದಗ: ಕಟ್ಟಡ ಕಾರ್ಮಿಕರ ಮಕ್ಕಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದಿರುವುದು ಶ್ಲಾಘನೀಯ. ಇಲ್ಲಿ ಯಶಸ್ಸು ಸಾಧಿಸಿದರೆ ಮುಂದೆ ಸುಲಭವಾಗಿ ಗುರಿ ಮುಟ್ಟಬಹುದು ಎಂದು ಕಾಂಗ್ರೆಸ್ ಯುವ ಪ್ರದಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ ಹೇಳಿದರು.
ನಗರದಲ್ಲಿ ಕಾರ್ಮಿಕ ಕಲ್ಯಾಣ ಸಂಸ್ಥೆ, ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ವತಿಯಿಂದ ನಡೆದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಹಾಗೂ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇತರೆ, ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗುತ್ತದೆ. ಕೇವಲ ಅಂಕ ಗಳಿಸುವುದು ಮುಖ್ಯವಲ್ಲ ಕೌಶಲ್ಯ ಮತ್ತು ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು ಎಂದರು.ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕರ ಹಿತ ಕಾಪಾಡಲು ಹಾಗೂ ಅವರ ಸೇವೆಗೆ ಸದಾ ಸಿದ್ಧ ಸರ್ಕಾರದಿಂದ ಏನಾದರೂ ಸೌಲಭ್ಯ ಸಿಗಲು ನಿಮ್ಮ ಮತ್ತು ಸರ್ಕಾರ ನಡುವೆ ಕೊಂಡಿಯಾಗಿ ಶ್ರಮಿಸುತ್ತೇನೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಬಸವರಾಜ ಕಡೆಮನಿ ಮಾತನಾಡಿ, ಪ್ರತಿಯೊಂದು ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ. ಕಲಿತು ಉದ್ಯೋಗ ಪಡೆಯುವ ಪ್ರಯತ್ನ ಮಾಡುವುದಕ್ಕಿಂತ ಉದ್ಯೋಗ ಸೃಷ್ಟಿ ಮಾಡಬೇಕು ಸಂಘಟನೆಯ ಆರಂಭ ಮಾಡುವುದು ಸುಲಭ ಅದನ್ನು ಮುನ್ನೆಡೆಸಿಕೊಂಡು ಹೋಗುವುದು ಬಹಳ ಕಠಿಣ ಕಾರ್ಮಿಕ ಕಲ್ಯಾಣ ಸಂಸ್ಥೆ ಪ್ರತಿ ವರ್ಷ ಒಂದೊಂದು ರೀತಿ ಕಾರ್ಯಕ್ರಮ ಮಾಡಿ ಎಲ್ಲ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಪ್ರತಿಭಾವಂತ ವಿದ್ಯಾರ್ಥಿ ಸಮೃದ್ಧಿ ಶ್ರೀಧರ ಸಿದ್ದಲಿಂಗ ಮಾತನಾಡಿದರು.
ಕಾರ್ಮಿಕ ಕಲ್ಯಾಣ ಸಂಸ್ಥೆ ಅಧ್ಯಕ್ಷ ಮಹಮ್ಮದ್ ಇರ್ಫಾನ್ ಡಂಬಳ, ಗೀತಾ ಹಬೀಬ್, ಕಟ್ಟಡ ಕಾರ್ಮಿಕರ ಮಹಾಸಂಘದ ಮೆಹಬೂಬಖಾನ್ ಪಠಾಣ, ಝಡ್.ಡಿ.ಬೇಲೇರಿ, ಶಂಕರಗೌಡ ಭರಮಗೌಡ್ರ, ಚನ್ನವೀರಗೌಡ ಪಾಟೀಲ್, ಜಾಕಿರ ಕಲಬುರ್ಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ನಾಸೀರ್ ಚಿಕೇನಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು.