ಕನ್ನಡಪ್ರಭವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಪಟ್ಟಣ ಹೋಬಳಿಯಾಗಿದ್ದರೂ ಪತ್ರಾಂಕಿತ ಅಧಿಕಾರಿ (ಗಜೆಟೆಡ್)ಅಧಿಕಾರಿ ಇಲ್ಲದ ಕಾರಣ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕುಶಾಲನಗರ ಮತ್ತು ಮಡಿಕೇರಿ ತೆರಳಬೇಕಾದ ಅನಿವಾರ್ಯತೆ ತಲೆದೋರಿದೆ.ಸುಂಟಿಕೊಪ್ಪದಲ್ಲಿ ಚೆಸ್ಕಾಂ ಕಚೇರಿ, ಪದವಿಪೂರ್ವ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶುಚಿಕಿತ್ಸಾಲಯ, ಕಂದಾಯ ಕಚೇರಿ, ಪ್ರಾಥಮಿಕ, ಪ್ರೌಢಶಾಲೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳು, ಕೃಷಿ ಇಲಾಖೆ, ಸೇರಿದಂತೆ ಹಲವು ಇಲಾಖೆಗಳು ಕಾರ್ಯನಿರ್ವಹಿಸುತ್ತಿದೆ. ಆದರೆ ಉದ್ಯೋಗ, ಶಿಕ್ಷಣಕ್ಕೆ ಸಂಬಂಧಿಸಿದ ಕೆಲ ದಾಖಲಾತಿಗಳಿಗೆ ವೈದ್ಯಾಧಿಕಾರಿ ಹಾಗೂ ಪ್ರೌಢಶಾಲಾ ಉಪಪ್ರಾಂಶುಪಾಲರು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಮಾತ್ರ ಸಹಿ ಮಾಡುವ ಅಧಿಕಾರ ಇರುತ್ತದೆ. ಆದರೆ ಇಲ್ಲಿ ನೇಮಕಗೊಂಡಿರುವ ವೈದ್ಯಾಧಿಕಾರಿಗಳು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವುದರಿಂದ ಅವರಿಗೆ ಸಹಿ ಮಾಡಲು ಸಾಧ್ಯವಿಲ್ಲ. ಇದರಿಂದ ಜನರು ಉನ್ನತ ಅಧಿಕಾರಿಗಳ ಸಹಿಗಾಗಿ ಮಡಿಕೇರಿ ಅಥವಾ ಕುಶಾಲನಗರಕ್ಕೆ ನೂರಾರು ರೂಪಾಯಿ ವ್ಯಯಿಬೇಕಾಗಿದೆ. ‘ಸಹಿ ಮಾಡಲು ಸಾಧ್ಯವಿಲ್ಲ’ ಎಂದು ಓರ್ವ ಅಧಿಕಾರಿ ತಮ್ಮ ಕಚೇರಿಯ ಮುಂದೆಯೇ ಫಲಕವನ್ನು ಅಂಟಿಸಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯಾಗಿದ್ದು ಅಂದಾಜು ಸುಮಾರು 12,000 ಕ್ಕೂ ಮಿಕ್ಕಿ ಜನ ಸಂಖ್ಯೆ ಹೊಂದಿದೆ. ಈ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಕುಗ್ರಾಮಗಳ ಜನತೆ ಹಾಗೂ ಮಕ್ಕಳು ಉನ್ನತ ಶಿಕ್ಷಣ, ಉದ್ಯೋಗಗಳಿಗೆ ತೆರಳುವ ವೇಳೆ ಕೆಲವು ದಾಖಲಾತಿಗಳಿಗೆ ಉನ್ನತ ಅಧಿಕಾರಿಗಳಿಂದ ದೃಢೀಕರಿಸಿದ ಪತ್ರವನ್ನು ನೀಡುವ ಅನಿವಾರ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಉನ್ನತ ಅಧಿಕಾರಿಗಳ ಸಹಿಗಾಗಿ ದೂರದ ಊರುಗಳಿಗೆ ತೆರಬೇಕಾದ ಸ್ಥಿತಿಯಿದೆ.
ಸುಂಟಿಕೊಪ್ಪ ಹೋಬಳಿ ಕೇಂದ್ರವಾಗಿರುವ ಹಿನ್ನಲೆಯಲ್ಲಿ ಯಾವುದೇ ಸರ್ಕಾರಿ ಕಚೇರಿ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಉನ್ನತ ಶಿಕ್ಷಣಗಳಿಗೆ ತೆರಳುವ ಮಕ್ಕಳಿಗೆ ಉನ್ನತ ಅಧಿಕಾರಗಳ ಮೊಹರು ಸಹಿ ಬೇಕಾಗುತ್ತದೆ. ಇಲ್ಲಿ ಉನ್ನತ ಮಟ್ಟದ ಹುದ್ದೆಯಲ್ಲಿರುವ ಅಧಿಕಾರಿಗಳು ಬೆರಳೆಣಿಕೆಯ ಸಂಖ್ಯೆಯಲ್ಲಿ ಇದ್ದಾರೆ. ಕೆಲವು ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಅವರಿಗೆ ರುಜು ಮಾಡುವ ಅಧಿಕಾರವು ಇರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಿಸಿದ ಇಲಾಖೆ ಪೂರ್ಣ ಪ್ರಮಾಣದ ಉನ್ನತ ಅಧಿಕಾರಿಗಳನ್ನು ನೇಮಕಗೊಳಿಸಬೇಕು.-ಬಿ.ಕೆ.ಪ್ರಶಾಂತ್, (ಕೋಕಾ) ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ.