ಮೇ ೩೦ರ ಹೋರಾಟಕ್ಕೆ ದಲಿತ ಸಂಘಟನೆಗಳ ಬೆಂಬಲ

| Published : May 28 2024, 01:01 AM IST

ಸಾರಾಂಶ

ಮೇ ೩೦ ರಂದು ಜನಪರ ಚಳುವಳಿಗಳ ಒಕ್ಕೂಟದ ವತಿಯಿಂದ ಕರೆ ನೀಡಿರುವ ಬೃಹತ್ ಪ್ರತಿಭಟನೆಗೆ ಡಾ.ಬಿ.ಆರ್ ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟ ಬಾಹ್ಯ ಬೆಂಬಲ ನೀಡಲಿದೆ ಎಂದು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಶ್ರೀಧರ ಕಲಿವೀರ ತಿಳಿಸಿದರು. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟದ ಶ್ರೀಧರ ಕಲಿವೀರ ಹೇಳಿಕೆ

ಕನ್ನಡಪ್ರಭ ವಾರ್ತೆ ಹಾಸನ

ಹಲವು ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಲು ಆಗ್ರಹಿಸಿ ಮೇ ೩೦ ರಂದು ಜನಪರ ಚಳುವಳಿಗಳ ಒಕ್ಕೂಟದ ವತಿಯಿಂದ ಕರೆ ನೀಡಿರುವ ಬೃಹತ್ ಪ್ರತಿಭಟನೆಗೆ ಡಾ.ಬಿ.ಆರ್ ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟ ಬಾಹ್ಯ ಬೆಂಬಲ ನೀಡಲಿದೆ ಎಂದು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಶ್ರೀಧರ ಕಲಿವೀರ ತಿಳಿಸಿದರು.

ನಗರದ ಖಾಸಗಿ ಹೋಟೆಲೊಂದರಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜವಾಬ್ದಾರಿಯುತ ಸ್ಥಾನದಲ್ಲಿ ಇರಬೇಕಾದ ಸಂಸದ ಪ್ರಜ್ವಲ್ ರೇವಣ್ಣ ಮಾಡಿರುವ ದುಷ್ಕೃತ್ಯದಿಂದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಸನದ ಮರ್ಯಾದೆ ಹರಾಜಾಗುತ್ತಿದೆ. ಈ ಪ್ರಕರಣದಲ್ಲಿ ನೂರಾರು ಮಹಿಳೆಯರ ಖಾಸಗಿತನವನ್ನು ಬಹಿರಂಗಪಡಿಸಲಾಗಿದೆ, ಮಹಿಳೆಯರ ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ದೇಶದ ಇತಿಹಾಸದಲ್ಲೇ ಇಂತಹ ಒಂದು ದೊಡ್ಡ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದರೂ ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಕೂಡಲೇ ಕೇಂದ್ರ ಸರ್ಕಾರ ಅತ್ಯಾಚಾರಿಯ ಬಂಧನಕ್ಕೆ ರಾಜ್ಯಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅತ್ಯಾಚಾರಿಯ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬಾರದು. ಕೂಡಲೇ ಆರೋಪಿ ಯಾವ ರಾಜ್ಯದಲ್ಲೇ ಇದ್ದರೂ ಆತನನ್ನು ಬಂಧಿಸಿ ಕಾನೂನಿನ ಅಡಿಯಲ್ಲಿ ಇರುವ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿರುವ ಮಹಿಳೆಯರ ಪೈಕಿ, ದಲಿತ ಮಹಿಳೆಯರು, ಹಿಂದುಳಿದ ವರ್ಗಗಳ ಮಹಿಳೆಯರು ಸೇರಿದಂತೆ ವಿವಿಧ ಸಮುದಾಯಗಳ ಮಹಿಳೆಯರು ಇದ್ದಾರೆ, ಕೂಡಲೇ ಸಂತ್ರಸ್ತ ಮಹಿಳೆಯರಿಂದ ಮಾಹಿತಿ ಪಡೆದು ಪ್ರಜ್ವಲ್ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಅತ್ಯಾಚಾರಕ್ಕೆ ಒಳಗಾಗಿರುವ ಇನ್ನಷ್ಟು ಮಹಿಳೆಯರು ಹೊರ ಬಂದು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ, ಅವರಿಂದ ಗೌಪ್ಯವಾಗಿ ಮಾಹಿತಿ ಕಲೆ ಹಾಕಿ ಅತ್ಯಾಚಾರಕ್ಕೆ ಒಳಗಾಗಿರುವ ಮಹಿಳೆಯರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು’ ಎಂದು ಹೇಳಿದರು.

ದಲಿತ ಸಂಘಟನೆಗಳ ಮುಖಂಡ ಎಂ.ಗುರುಮೂರ್ತಿ ಮಾತನಾಡಿ, ಲೈಂಗಿಕ ದೌರ್ಜನ್ಯ ನಡೆದಿರುವ ಮಹಿಳೆಯರ ಬಗ್ಗೆ ಕುಮಾರಸ್ವಾಮಿ ಅವರು ಚಿಂತನೆ ಮಾಡುತ್ತಿಲ್ಲ. ಲೈಂಗಿಕ ದೌರ್ಜನ್ಯದ ವಿಡಿಯೋ ಯಾರು ಮಾಡಿದ್ದು, ಯಾರು ಅದನ್ನು ಬಿಡುಗಡೆ ಮಾಡಿದ್ದಾರೆ? ಏಕೆ ಅವರನ್ನು ಇದುವರೆಗೂ ಬಂಧಿಸಿಲ್ಲ ಎನ್ನುವ ಪ್ರಶ್ನೆಯನ್ನು ಜನತೆ ಮುಂದೆ ಇಟ್ಟಿದ್ದಾರೆ. ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಇದಾಗಿದೆಯೇ ಹೊರತು ಬೇರೆ ಏನು ಅಲ್ಲ. ತನಿಖೆ ಸರಿಯಾದ ದಿಕ್ಕಿನಲ್ಲಿ ಹೋಗಿ ಕಾರಣಕರ್ತ ಪ್ರಜ್ವಲ್ ರೇವಣ್ಣಗೆ ಸರಿಯಾದ ಶಿಕ್ಷೆ ಆಗಬೇಕು. ಪ್ರಜ್ವಲ್ ಎಲ್ಲೇ ಇದ್ದರೂ ಆತನನ್ನು ಬಂಧಿಸಬೇಕು ಎಂದರು.

ಚೆನ್ನಬಸಪ್ಪ, ಕಾಟಿಗೇ, ಅಂಬುಗ ಮಲ್ಲೇಶ್, ನಾರಾಯಣದಾಸ್, ಕೆ.ಈರಪ್ಪ, ಕೃಷ್ಣಾದಾಸ್, ಸಿದ್ದಪ್ಪ, ಬಲರಾಮ್, ಸುನಿಲ್, ಜಗದೀಶ್, ಪ್ರಸನ್ನ ಕುಮಾರ್, ಅಂಬೂಗ ಮಲ್ಲೇಶ್, ಅಶ್ವಥ್, ಗೋವಿಂದರಾಜು, ಪ್ರಸನ್ನಕುಮಾರ್ ಇದ್ದರು. ಮೇ ೩೦ರ ಪ್ರತಿಭಟನೆ ಯಶಸ್ವಿಗೆ ಹಿರಿಯ ಸಾಹಿತಿ ರೂಪ ಹಾಸನ್ ಮನವಿ

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯನಾರೋಪದಲ್ಲಿ ನೊಂದಿರುವ ಮಹಿಳೆಯರ ಘನತೆ ಉಳಿಸಿ ಹಾಸನ ಜಿಲ್ಲೆಯ ಗೌರವ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಜನಪರ ಚಳುವಳಿಗಳ ಒಕ್ಕೂಟದಿಂದ ಮೇ.೩೦ ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಾಹಿತಿ ರೂಪ ಹಾಸನ್ ಹೇಳಿದರು.ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಈ ಪ್ರಕರಣದಲ್ಲಿ ವಿಡಿಯೋ ಮಾಡಿದ ಆರೋಪಿ ಹಾಗೂ ವಿಡಿಯೋ ಹರಿಬಿಟ್ಟ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಈ ಹೋರಾಟ ಪಕ್ಷಾತೀತವಾಗಿ ನಡೆಯುತ್ತಿದ್ದು ಇದನ್ನು ಕೆಲವರು ಜೆಡಿಎಸ್ ವಿರುದ್ಧದ ಹೋರಾಟ ಎಂದು ಬಿಂಬಿಸಿ ದಿಕ್ಕು ತಪ್ಪಿಸಲಾಗುತ್ತಿದೆ. ಜನರು ಇಂತಹ ಮತುಗಳಿಗೆ ಕಿವಿ ಕೊಡದೆ ಜಿಲ್ಲೆಯ ಮಹಿಳೆಯರ ಘನತೆ ರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಿಗೆ ಪ್ರತಿಭಟನೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.ಒಕ್ಕೂಟದ ಡಾ.ಭಾರತಿ ರಾಜಶೇಖರ್, ಮಹಿಳಾ ಮುಖಂಡರಾದ ಡಾ. ರಂಗಲಕ್ಷ್ಮಿ, ಪ್ರಮಿಳಾ, ಸುವರ್ಣ ಶಿವಪ್ರಸಾದ್, ಭಾರತಿ ರಾಜಶೇಖರ್, ಮಮತಾ ಶಿವು, ಇಂದ್ರಮ್ಮ ಇದ್ದರು.