ಸೂರ್ಯ ಫೌಂಡೇಶನ್‌ನಿಂದ ಸರ್ಕಾರಿ ಶಾಲೆ ದುರಸ್ತಿ

| Published : Oct 27 2025, 12:15 AM IST

ಸೂರ್ಯ ಫೌಂಡೇಶನ್‌ನಿಂದ ಸರ್ಕಾರಿ ಶಾಲೆ ದುರಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಸರ್ಕಾರಿ ಶಾಲೆ ಶಿಥಿಲಗೊಂಡಿದೆ. ಇದನ್ನು ಲಕ್ಷಾಂತರ ಲಕ್ಷ ರು. ವೆಚ್ಚದಲ್ಲಿ ಬೆಂಗಳೂರಿನ ಸೂರ್ಯ ಫೌಂಡೇಷನ್ ವತಿಯಿಂದ ನವೀಕರಿಸಲಾಗಿದ್ದು ಮಧುವಣಗಿತ್ತಿಯಂತೆ ಶಾಲೆಯು ಸಿಂಗಾರಗೊಂಡಿದೆ.

ಕನ್ನಡಪ್ರಭ ವಾರ್ತೆ, ಯಳಂದೂರು

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಸರ್ಕಾರಿ ಶಾಲೆ ಶಿಥಿಲಗೊಂಡಿದೆ. ಇದನ್ನು ಲಕ್ಷಾಂತರ ಲಕ್ಷ ರು. ವೆಚ್ಚದಲ್ಲಿ ಬೆಂಗಳೂರಿನ ಸೂರ್ಯ ಫೌಂಡೇಷನ್ ವತಿಯಿಂದ ನವೀಕರಿಸಲಾಗಿದ್ದು ಮಧುವಣಗಿತ್ತಿಯಂತೆ ಶಾಲೆಯು ಸಿಂಗಾರಗೊಂಡಿದೆ.

ಈ ಶಾಲೆಯನ್ನು ದುರಸ್ತಿ ಮಾಡಲು ಹತ್ತಾರು ಬಾರಿ ಇಲಾಖೆಗೆ ಮನವಿ ಮಾಡಿದ್ದರೂ ಅನುದಾನ ಬಿಡುಗಡೆಯಾಗಿರಲಿಲ್ಲ. ಒಟ್ಟು ಮೂರು ಕಟ್ಟಡಗಳಿರುವ ಈ ಶಾಲೆಗೆ ಭೇಟಿ ನೀಡಿದ ಸೂರ್ಯ ಫೌಂಡೇಷನ್ ಸದಸ್ಯರಿಗೆ ಶಿಕ್ಷಕರು ಇದನ್ನು ದುರಸ್ತಿ ಮಾಡಿಸುವಂತೆ ಇಲ್ಲಿನ ಸಂಸ್ಥಾಪಕ ಎಂ. ಶರವಣಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೂರು ಕಟ್ಟಡಗಳಲ್ಲಿನ ೭ ಕೊಠಡಿಗಳ ಗಾರೆ ಚಕ್ಕೆಯನ್ನು ತೆರವುಗೊಳಿಸಿ ಗಾರೆ ಹಾಕಿಸಿ, ಶಾಲೆಯ ಮೇಲ್ಭಾವಣಿ ದುರಸ್ತಿ ಮಾಡಿಸಲಾಗಿದೆ. ಕಿಟಕಿ, ಬಾಗಿಲುಗಳನ್ನು ದುರಸ್ತಿಗೊಳಿಸಿ ಸುಣ್ಣ, ಬಣ್ಣ ಬಳಿಸಿ, ವಿದ್ಯುತ್ ಸಂಪರ್ಕಕ್ಕೆ ವೈರಿಂಗ್ ಮಾಡಿಸಿ ಸಿಂಗರಿಸಿದ್ದಾರೆ.

ಅಲ್ಲದೆ ವೇದಿಕೆಯ ನಿರ್ಮಾಣ, ಶಾಲೆಗೆ ನೂತನವಾಗಿ ೧೫ ಡೆಸ್ಕ್ ಹಾಗೂ ಶಾಲೆಯಲ್ಲಿರುವ ೫೮ ವಿದ್ಯಾರ್ಥಿಗಳಿಗೂ ಜರ್ಕಿನ್, ಶೂ, ಬ್ಲಾಂಕೆಟ್ಸ್ ಹಾಗೂ ಲೇಖನ ಸಾಮಗ್ರಿಗಳನ್ನು ನೀಡಲಾಗಿದೆ. ಬುಡಕಟ್ಟು ಸೋಲಿಗ ಜನಾಂಗವೂ ಶಿಕ್ಷಣದಿಂದ ವಂಚಿತರಾಗಬಾದೆಂದು ಇವರು ವ್ಯಾಸಂಗ ಮಾಡುವ ಶಾಲೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ.

ಯರಗನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಜಯಶಂಕರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಸೋಲಿಗ ಮಕ್ಕಳೇ ಹೆಚ್ಚು ವ್ಯಾಸಂಗ ಮಾಡುತ್ತಾರೆ. ಶಾಲೆಯ ಮೂರು ಕಟ್ಟಡಗಳೂ ಶಿಥಿಲವಾಗಿತ್ತು. ಇದನ್ನು ದುರಸ್ತಿ ಮಾಡಿಸುವಂತೆ ಸೂರ್ಯ ಫೌಂಡೇಷನ್‌ನ ಶರವಣಗೆ ಮನವಿ ಮಾಡಿದ್ದೆ. ದುರಸ್ತಿ ಮಾಡಿಸಿದ್ದಾರೆ. ಶಾಲೆಗೆ ಹಲವು ಪರಿಕರಗಳನ್ನು ನೀಡಿದ್ದಾರೆ. ಅವರಿಗೆ ನಮ್ಮ ಶಾಲೆಯ ಶಿಕ್ಷಕ ಸಿಬ್ಬಂಧಿ, ಇಲಾಖೆ, ಎಸ್‌ಡಿಎಂಸಿ, ವಿದ್ಯಾರ್ಥಿಗಳು ಹಾಗೂ ಪೋಷಕರು, ಗ್ರಾಮಸ್ಥರ ವತಿಯಿಂದ ಧನ್ಯವಾದ ಅರ್ಪಿಸುತ್ತೇವೆ ಎಂದರು.

ಶಾಲೆ ದುರಸ್ತಿ ಬಗ್ಗೆ ಮುಖ್ಯ ಶಿಕ್ಷಕ ಜಯಶಂಕರ್ ಮನವಿ ಮಾಡಿದ್ದರು. ಇದಕ್ಕೆ ನಮ್ಮ ಫೌಂಡೇಷನ್ ಸ್ಪಂದಿಸಿ ಅಂದಾಜು ೧೫ ಲಕ್ಷ ರು. ವೆಚ್ಚದಲ್ಲಿ ಇದನ್ನು ದುರಸ್ತಿ ಮಾಡಿಸಿದ್ದೇವೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯ ಶಿಕ್ಷಕರೇ ವಹಿಸಿದ್ದು. ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಸೋಲಿಗ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಮ್ಮ ಫೌಂಡೇಷನ್ ಸದಾ ಸಿದ್ಧವಾಗಿರುತ್ತದೆ.

ಶರವಣ, ಸಂಸ್ಥಾಪಕರು ಸೂರ್ಯಪೌಂಡೇಷನ್, ಬೆಂಗಳೂರು