ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ಬೃಹತ್‌ ಉದ್ಯೋಗ ಮೇಳದ ಅಭ್ಯರ್ಥಿಗಳ ನೋಂದಣಿ ಕುರಿತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಯುವ ಜನರಿಗೆ ಉದ್ಯೋಗ ಕೈಗೊಂಡು ಆರ್ಥಿಕ ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.26, 27ರಂದು ಆಯೋಜಿಸಲಾಗಿದ್ದು, ಯುವ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಲು ಹೆಚ್ಚಿನ ಪ್ರಚಾರ ಕೈಗೊಂಡು ಹೆಚ್ಚಿನ ನೋಂದಣಿ ಪ್ರಮಾಣ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ಬೃಹತ್‌ ಉದ್ಯೋಗ ಮೇಳದ ಅಭ್ಯರ್ಥಿಗಳ ನೋಂದಣಿ ಕುರಿತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಯಾದಗಿರಿ ಜಿಲ್ಲೆಯು ಹಿಂದುಳಿದ ಪ್ರದೇಶವಾಗಿದ್ದರಿಂದ ಬೇರೆ ಸ್ಥಳಗಳಿಗೆ ಉದ್ಯೋಗ ಅರಸಿ ಹೋಗುವ ನಿರುದ್ಯೋಗಿ ಯುವಜನರ ಪ್ರಮಾಣ ಹೆಚ್ಚಾಗಿದ್ದು, ಅಧಿಕಾರಿಗಳು ಹಾಗೂ ಕಾಲೇಜಿನ ಎಲ್ಲಾ ಮುಖ್ಯಸ್ಥರು ಹೆಚ್ಚಿನ ಗಮನಹರಿಸಿ, ಶಿಕ್ಷಣ ಪಡೆದ ಅನುಸಾರವಾಗಿ ಉದ್ಯೋಗ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ಹಾಗೂ ಅಗತ್ಯದ ಪ್ರಚಾರ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗ ನೀಡುವಂತಹ ಎಲ್ಲಾ ಸಂಸ್ಥೆಗಳು ತಮ್ಮಲ್ಲಿ ಅವಶ್ಯಕತೆ ಇರುವಂತಹ ಅರ್ಹ ಉದ್ಯೋಗಿಗಳನ್ನು ಪಡೆಯಲು ಇದೊಂದು ಸುವರ್ಣ ಅವಕಾಶವಾಗಿದೆ. ಸ್ಥಳದಲ್ಲೇ ಹುದ್ದೆಗಳಿಗೆ ಅಭ್ಯರ್ಥಿ ಆಯ್ಕೆ ನಡೆಯಲಿದೆ. ಆಸಕ್ತರು https://skillconnect.kaushalkar.com/ಮೂಲಕ ನೋಂದಣಿ ಮಾಡಿ ಭಾಗವಹಿಸಬಹುದು ಎಂದು ತಿಳಿಸಿದರು

ಈಗಾಗಲೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರು, ಈ ವರ್ಷ ಪದವಿಯಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು, ಅಷ್ಟೇ ಅಲ್ಲದೇ ಈ ಬೃಹತ್ ರಾಜ್ಯಮಟ್ಟದ ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮುಗಿಸಿದವರಿಗೂ ಕೂಡ ಕೌಶಲ್ಯ ತರಬೇತಿ ಪಡೆಯಲು ಇಚ್ಛಿಸಿದವರು ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡು. ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ, ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಿಲ್ಲಾ ಉದ್ಯೋಗಾಧಿಕಾರಿ ಪ್ರಭಾಕರ್ ವಿ, ಕೌಶಲ್ಯ ಇಲಾಖೆಯ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ್ ಪಾಟೀಲ್, ಡಾ. ವಿಠೋಬ ಯಾದವ್, ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ ಸೇರಿ ಇತರರಿದ್ದರು.