ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿಯ ಟಿಎಪಿಸಿಎಂಎಸ್ ಆಡಳಿತ ಮಂಡಳಿಯ 12 ಸ್ಥಾನಗಳ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತರು 7 ಸ್ಥಾನಗಳನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದ್ದರೂ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಬೆಂಬಲಿತರು ಸೋತರೂ ಗದ್ದುಗೆ ಹಿಡಿಯುವುದರಲ್ಲಿ ಯಶಸ್ವಿಯಾಗಿದೆ. ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಪಡೆದಿದೆ. ಆದರೆ ಕಾಂಗ್ರೆಸ್ ಬೆಂಬಲಿತರಿಗೆ ಒಂದು ನಾಮನಿರ್ದೇಶಿತರ ಮತ, ಡಿಸಿಸಿ ಬ್ಯಾಂಕ್‌ನ ಒಂದು ಮತ ಹಾಗೂ ಸಹಕಾರಸಂಘದ ಸಹಾಯಕ ರಿಜಿಸ್ಟ್ರಾರ್ ಮತ ದೊರೆಯುವ ಕಾರಣ ಒಟ್ಟು 8 ಮತಗಳಿಂದಾಗಿ ಅಧಿಕಾರ ಹಿಡಿಯಲು ಅವಕಾಶ ದೊರೆತಂತಾಗಿದೆ.ಗೆದ್ದ ಅಭ್ಯರ್ಥಿಗಳು
12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 5ರಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲವು ಸಾಧಿಸಿದರೆ, ಎನ್‌ಡಿಎ 7ರಲ್ಲಿ ಗೆದ್ದಿದೆ. ಕಾಂಗ್ರೆಸ್ ಬೆಂಬಲಿತರಾಗಿ ಬಿ.ವೆಂಕಟೇಶಪ್ಪ, ಎಂ.ಕೃಷ್ಣೇಗೌಡ, ಬಿ.ನಾರಾಯಣಸ್ವಾಮಿ, ಎ.ಹರೀಶ ಮತ್ತು ಮಹಿಳಾ ಮೀಸಲು ಸ್ಥಾನದಿಂದ ಎಂ.ಮೀನಾಕ್ಷಿ ಜಯಗಳಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದಿಂದ ಕೆಸಿ. ಸೀತಾರಾಮಪ್ಪ, ಆರ್.ಸತೀಶ್ ಕುಮಾರ್‌ಗೌಡ, ಡಿ.ಬಾಲಚಂದ್ರ, ವಿ.ಮಾರ್ಕಂಡೇಗೌಡ, ಎಚ್.ಆರ್ ಶ್ರೀನಿವಾಸ್, ವಿ.ರಾಮಯ್ಯ, ಆರ್.ರಮ್ಯ ಗೆಲುವು ಸಾಧಿಸಿದ್ದಾರೆ.ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿವಿ. ಮಹೇಶ್ ಟಿಎಪಿಸಿಎಂಎಸ್‌ನ ೮ ಕ್ಷೇತ್ರದಲ್ಲಿ ೭ ಅಭ್ಯರ್ಥಿಗಳನ್ನು ಗೆಲ್ಲುವ ಮೂಲಕ ಮೈತ್ರಿ ಕೂಟದ ಪವರ್ ಅನ್ನು ತೋರಿಸಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ನವರು ಮತಯಾಚಿಸಲು ಎನ್‌ಡಿಎಗೆ ಅವಕಾಶ ನೀಡಲಿಲ್ಲ. ಆದರೆ ಮತದಾರರು ನಮ್ಮ ಪರವಾಗಿ ಇದ್ದ ಕಾರಣ ನಾವು ಗೆದ್ದೇ ಗೆಲ್ಲುವ ವಿಶ್ವಾಸವಿತ್ತು ಎಂದರು.
ಶಾಸಕರಿಗೆ ಕೌಂಟ್‌ಡೌನ್ ಆರಂಭಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಶಾಸಕರ ಜೊತೆಯಲ್ಲಿ ಕೂತಿದ್ದವರೆಲ್ಲಾ ಎನ್.ಡಿ.ಎ ಮೈತ್ರಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ 7 ಸ್ಥಾನಗಳಲ್ಲಿ ಗೆಲುವನ್ನು ತಂದುಕೊಟ್ಟಿದ್ದಾರೆ. ಮುಂಬರುವ ವಿಧಾನ ಸಬಾ ಚುನಾವಣೆಗಳಲ್ಲಿ ಈಗಿನ ಶಾಸಕ ಎಸ್.ಎನ್ ನಾರಾಯಣಸ್ವಾಮಿರನ್ನು ೪೫ ರಿಂದ ೫೦ ಸಾವಿರ ಮತಗಳ ಅಂತರದಲ್ಲಿ ಸೋಲಿಸೋದು ಗ್ಯಾರಂಟಿ. ಶಾಸಕ ಎಸ್.ಎನ್ ನಾರಾಯಣಸ್ವಾಮಿಯವರಿಗೆ ಇಂದಿನ ಚುನಾವಣೆಯ ಫಲಿತಾಂಶ ಕೌಂಟ್‌ಡೌನ್ ಶುರುವಾಗಿದೆ, ಇನ್ನು ಮುಂದೆ ನಿಮ್ಮ ಆಟ ನಡೆಯೋದಿಲ್ಲವೆಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಾಜಿ ಶಾಸಕ ವೆಂಕಟಮುನಿಯಪ್ಪ,ಪಕ್ಷದ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ, ಪುರಸಭೆ ಸದಸ್ಯ ಕಪಾಲಿಶಂಕರ್, ಬಿಂಧು ಮಾದವ ಇತರರು ಇದ್ದರು.