ಬುರುಡೆ ಸಂಚು ನಡೆದಿದ್ದು ದಿಲ್ಲಿ ವಕೀಲನ ಮನೆಲಲ್ಲ!

| Published : Sep 18 2025, 01:10 AM IST

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ಮೃತದೇಹಗಳ ಹೂತ ಪ್ರಕರಣದ ‘ತಲೆಬರುಡೆ’ ಕತೆ ಹೆಣೆಯುವಲ್ಲಿ ಕರ್ನಾಟಕದ ನಂಟು ಹೊಂದಿರುವ ದೆಹಲಿ ಮೂಲದ ಓರ್ವ ವ್ಯಕ್ತಿ ಪ್ರಮುಖ ಪಾತ್ರವಹಿಸಿದ್ದು, ಈತನ ಮನೆಯಲ್ಲಿ ಸಂಚಿನ ಸಭೆ ನಡೆದಿತ್ತು ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ವಿಚಾರಣೆಯಲ್ಲಿ ಆರೋಪಿ ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಗಿರೀಶ್ ಮಾದೇನಹಳ್ಳಿಕನ್ನಡಪ್ರಭ ವಾರ್ತೆ ಬೆಂಗಳೂರು

ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ಮೃತದೇಹಗಳ ಹೂತ ಪ್ರಕರಣದ ‘ತಲೆಬರುಡೆ’ ಕತೆ ಹೆಣೆಯುವಲ್ಲಿ ಕರ್ನಾಟಕದ ನಂಟು ಹೊಂದಿರುವ ದೆಹಲಿ ಮೂಲದ ಓರ್ವ ವ್ಯಕ್ತಿ ಪ್ರಮುಖ ಪಾತ್ರವಹಿಸಿದ್ದು, ಈತನ ಮನೆಯಲ್ಲಿ ಸಂಚಿನ ಸಭೆ ನಡೆದಿತ್ತು ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ವಿಚಾರಣೆಯಲ್ಲಿ ಆರೋಪಿ ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ತಲೆಬುರಡೆ ಸುಳ್ಳಿನ ಕತೆ ರೂಪಿಸುವಲ್ಲಿ ದೆಹಲಿ ಮೂಲದ ವ್ಯಕ್ತಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಮೂವರು ಸಾಮಾಜಿಕ ಕಾರ್ಯಕರ್ತರು, ಇಬ್ಬರು ಯೂಟ್ಯೂಬರ್‌ಗಳು ಹಾಗೂ ಉತ್ತರ ಕರ್ನಾಟಕದ ವ್ಯಕ್ತಿ ಸೇರಿ ಒಟ್ಟು ಏಳು ಮಂದಿ ಪಾತ್ರಧಾರಿಗಳಾಗಿದ್ದು, ಇದರಲ್ಲಿ ಉಜಿರೆಯವರೇ ‘ಪ್ರಮುಖ’ ಸೂತ್ರಧಾರಿಗಳಾಗಿದ್ದಾರೆ.ಅಲ್ಲದೆ, ತಲೆಬುರುಡೆ ಕಥಾ ಸರಣಿಯಲ್ಲಿ ಹೇಗೆಲ್ಲ ಸಾರ್ವಜನಿಕವಾಗಿ ನಡೆದುಕೊಳ್ಳಬೇಕು ಹಾಗೂ ಪೊಲೀಸರ ತನಿಖೆಯನ್ನು ಹೇಗೆ ಎದುರಿಸಬೇಕು ಎಂಬುದು ಸೇರಿ ಪ್ರತಿ ಹಂತದ ಬಗ್ಗೆ ಚಿನ್ನಯ್ಯನಿಗೆ ದೊಡ್ಡ ಬಿಳಿ ಹಾಳೆ ಮೇಲೆ ನೀಲ ನಕ್ಷೆ ರೂಪಿಸಿ ಸಂಚುಕೋರರು ವಿವರಿಸಿದ್ದರು. ಎಸ್‌ಐಟಿ ದಾಳಿ ವೇಳೆ ಪ್ರಮುಖ ಸಂಚುಕೋರನ ಮನೆಯಲ್ಲಿ ಆ ನೀಲನಕ್ಷೆ ಸಹ ಸಿಕ್ಕಿದೆ.

ಅಲ್ಲದೆ, ತನಗೆ ಬೆಂಗಳೂರಿನ ದೊಡ್ಡಬಿದರಕಲ್ಲು ಸಮೀಪದ ಸಾಮಾಜಿಕ ಕಾರ್ಯಕರ್ತ ಹಾಗೂ ಉಜಿರೆಯ ಸಾಮಾಜಿಕ ಕಾರ್ಯಕರ್ತನ ಜತೆ ಸ್ನೇಹ ಹೊಂದಿರುವ ದೆಹಲಿಯ ವ್ಯಕ್ತಿಯ ಮನೆಯಲ್ಲಿ ಸಭೆ ನಡೆಸಿ ‘ಮಾರ್ಗದರ್ಶನ’ ಮಾಡಿದ್ದರು ಎಂದು ಎಸ್‌ಐಟಿ ವಿಚಾರಣೆಯಲ್ಲಿ ಚಿನ್ನಯ್ಯ ಬಹಿರಂಗಪಡಿಸಿರುವುದಾಗಿ ಉನ್ನತ ಮೂಲಗಳು ’ಕನ್ನಡಪ್ರಭ’ಕ್ಕೆ ತಿಳಿಸಿವೆ.

ದೆಹಲಿಯಲ್ಲಿರುವ ಕರ್ನಾಟಕ ಮೂಲದ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿಯೊಬ್ಬರ ಮನೆಯಲ್ಲಿ ಸಭೆ ನಡೆದಿತ್ತು ಎಂಬ ಚರ್ಚೆ ಈ ಹಿಂದೆ ಕೇಳಿಬಂದಿತ್ತು. ಆದರೆ, ಆ ಚರ್ಚೆ ನಡೆದಿದ್ದು ನ್ಯಾಯವಾದಿಯ ಮನೆಯಲ್ಲಿ ಅಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸೋದರನ ಮೂಲಕ ಚಿನ್ನಯ್ಯಗೆ ಗಾಳ:

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಸಂಚಿನ ಆರೋಪಿತ ವ್ಯಕ್ತಿ ಅಂಗಡಿ ಇಟ್ಟಿದ್ದರು. ಹೀಗಾಗಿ ಹಲವು ವರ್ಷಗಳಿಂದ ಆತನಿಗೆ ಧರ್ಮಸ್ಥಳದಲ್ಲಿ ಪೌರ ಕಾರ್ಮಿಕರಾಗಿದ್ದ ಚಿನ್ನಯ್ಯ ಹಾಗೂ ಆತನ ಸೋದರರ ಜತೆ ಸ್ನೇಹವಿತ್ತು. 2023ರಲ್ಲಿ ಒಂದು ದಿನ ಚಿನ್ನಯ್ಯನ ಬಗ್ಗೆ ಆತನ ಸೋದರನ ಬಳಿ ವಿಚಾರಿಸಿದ್ದ ಅವರು, ಏನೋ ಮಾತನಾಡಬೇಕಿದೆ ಎಂದು ಚಿನ್ನಯ್ಯನನ್ನು ಆತನ ಅಣ್ಣನ ಮೂಲಕ ಸಂಪರ್ಕಿಸಿದ್ದರು. ಆದರೆ ತಲೆಬುರಡೆ ಕತೆ ಬಗ್ಗೆ ಚಿನ್ನಯ್ಯನ ಸೋದರನಿಗೆ ಮಾಹಿತಿ ಇರಲಿಲ್ಲ. ಆನಂತರ ಚಿನ್ನಯ್ಯನನ್ನು ಭೇಟಿಯಾಗಿ ಇನ್ನುಳಿದವರು ಷಡ್ಯಂತ್ರ ರೂಪಿಸಿದರು. 2024ರ ಅಕ್ಟೋಬರ್‌ನಲ್ಲಿ ತಲೆಬರುಡೆ ಕತೆ ಸಿದ್ಧವಾಯಿತು. ಆಗಲೇ ದೆಹಲಿ ಹಾಗೂ ಬೆಂಗಳೂರಿನಲ್ಲಿ ಸಭೆಗಳು ನಡೆದಿವೆ ಎಂದು ಮೂಲಗಳು ಹೇಳಿವೆ.ಎಎನ್‌ಎಫ್‌ ಕಣ್ಣಿಗೆ ಬಿದ್ದಿದ್ದ ಗ್ಯಾಂಗ್:

ಬಂಗ್ಲೆಗುಡ್ಡದಲ್ಲಿ ಸಿಕ್ಕಿದ್ದ ತಲೆಬರುಡೆಯನ್ನು ಬೆಂಗಳೂರಿಗೆ ಉಜಿರೆ ವ್ಯಕ್ತಿ ಪಾರ್ಸೆಲ್ ಮಾಡಿದ್ದರು. ಅಲ್ಲಿಂದ ಎರಡು ಕೈ ಬದಲಾಗಿ ಅದು ಚಿನ್ನಯ್ಯನಿಗೆ ತಲುಪಿತು. ಅಲ್ಲದೆ ತಾನು ‘ಚಿನ್ನಯ್ಯನಿಗೆ ನನ್ನ ಮನೆಗೆ ಬಂದಿದ್ದ ಪಾರ್ಸೆಲ್‌ ಅನ್ನು ಕೊಟ್ಟಿದ್ದೇನೆ’ ಎಂದು ವಿಚಾರಣೆ ವೇಳೆ ಸಂಚು ಆರೋಪ ಹೊತ್ತಿರುವ ಒಬ್ಬರು ಒಪ್ಪಿಕೊಂಡಿದ್ದಾರೆ. ಜು.11ರಂದು ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಗುಂಡಿ ಅಗೆದು ತಲೆಬರುಡೆ ಹಾಗೂ ಮೂಳೆ ತೆಗೆಯುವಂತೆ ಚಿನ್ನಯ್ಯನನ್ನು ಬಳಸಿಕೊಂಡು ದೃಶ್ಯವನ್ನು ಚಿತ್ರೀಕರಿಸಲಾಯಿತು. ಈ ಚಿತ್ರೀಕರಣಕ್ಕೆ ಪ್ರಮುಖ ಯೂಟ್ಯೂಬರ್‌ವೊಬ್ಬರಿಗೆ ಸೇರಿದ ಕ್ಯಾಮೆರಾ ಬಳಕೆಯಾಗಿದ್ದು, ಈ ವೇಳೆ ಅಲ್ಲಿ ಆತ ಸಹ ಇದ್ದ ಎನ್ನಲಾಗಿದೆ.ಅಲ್ಲದೆ ತಲೆಬುರುಡೆ ಇಟ್ಟು ಪ್ರಾತ್ಯಕ್ಷಿಕೆ ತೋರಿಸಲು ಹಿಂದಿನ ರಾತ್ರಿ ಚಿನ್ನಯ್ಯನನ್ನು ಸಂಚುಕೋರರ ತಂಡ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿತ್ತು. ಅದೇ ವೇಳೆ ಕಾಡಿನಲ್ಲಿ ಗಸ್ತು ತಿರುಗುತ್ತಿದ್ದ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್‌)ಯ ಸಿಬ್ಬಂದಿ ಕಣ್ಣಿಗೆ ಈ ಗ್ಯಾಂಗ್ ಬಿದ್ದಿದೆ. ಆಗ ಓರ್ವ ಸಿಬ್ಬಂದಿ ಕೂಗಿಕೊಂಡಾಗ ಯಾವುದೇ ಪ್ರತಿಕ್ರಿಯೆ ನೀಡದೆ ಅವಸರ ಅವಸರವಾಗಿ ಅರಣ್ಯದಿಂದ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಎಸ್‌ಐಟಿ ಮುಂದೆ ಎಎನ್‌ಎಫ್‌ನ ಓರ್ವ ಸಿಬ್ಬಂದಿ ಹೇಳಿಕೆ ನೀಡಿರುವುದಾಗಿ ಮೂಲಗಳು ಹೇಳಿವೆ.ಮೊಬೈಲ್, ನೀಲನಕ್ಷೆ ಸಾಕ್ಷ್ಯ

ಈ ತಲೆಬರುಡೆ ಪ್ರಕರಣದಲ್ಲಿ ಸಂಚಿಗೆ ಆರೋಪಿತರ ಮೊಬೈಲ್‌ ಹಾಗೂ ಪ್ರಮುಖ ಸಂಚುಕೋರನ ಮನೆಯಲ್ಲಿ ಸಿಕ್ಕಿದ ದಾಖಲೆಗಳು ಮಹತ್ವದ ಪುರಾವೆ ಒದಗಿಸಿವೆ. ಒಬ್ಬರಿಂದ ಒಬ್ಬರಿಗೆ ವಾಟ್ಸಾಪ್‌ ಮೂಲಕ ರವಾನೆಯಾಗಿರುವ ಸಂದೇಶಗಳು ಹಾಗೂ ವಿಡಿಯೋಗಳಲ್ಲಿ ತಲೆಬರುಡೆ ಕತೆ ನಿರೂಪಣೆ ಇದೆ ಎಂದು ತಿಳಿದು ಬಂದಿದೆ.ಏಳು ಮಂದಿ ಪೈಕಿ ಓರ್ವ ಸಾಕ್ಷಿದಾರ?

ಸಂಚಿನ ಪಾತ್ರ ವಹಿಸಿರುವ ಸಂಬಂಧ ಏಳು ಜನರ ಹೆಸರನ್ನು ವಿಚಾರಣೆ ವೇಳೆ ಚಿನ್ನಯ್ಯ ಕೊಟ್ಟಿದ್ದಾನೆ. ಈ ಏಳು ಜನರ ಪೈಕಿ ಇದುವರೆಗೆ ಅಧಿಕೃತವಾಗಿ ಯಾರೊಬ್ಬರಿಂದಲೂ ಹೇಳಿಕೆ ದಾಖಲಾಗಿಲ್ಲ. ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಯಲ್ಲಿ ಬೇರೆ ಬೇರೆ ಪ್ರಕರಣಗಳ ಸಂಬಂಧ ಕೆಲವರನ್ನು ಪ್ರಶ್ನಿಸಿ ಹೇಳಿಕೆ ಪಡೆಯಲಾಗಿದೆ. ಆದರೆ ಸಂಚಿನ ಬಗ್ಗೆ ಅಧಿಕೃತವಾಗಿ ಹೇಳಿಕೆ ಪಡೆದಿಲ್ಲ. ಅಲ್ಲದೆ ಏಳು ಜನರ ಪೈಕಿ ಓರ್ವ ವ್ಯಕ್ತಿಯನ್ನು ಸಾಕ್ಷಿದಾರನಾಗಿ ಪರಿಗಣಿಸುವ ಬಗ್ಗೆ ಎಸ್‌ಐಟಿ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.

ಸಂಚಿನ ಪಾತ್ರ ವಹಿಸಿದ್ದಾತನೇ ಸಾಕ್ಷಿಯಾದರೆ ಆರೋಪ ರುಜುವಾತಿಗೆ ಮಹತ್ವದ ಪುರಾವೆಯಾಗಲಿದೆ. ಹೀಗಾಗಿ ಅಪ್ರೋವರ್ ಆಗುವವನ ಬಗ್ಗೆ ಪ್ರಾಥಮಿಕ ಹಂತದ ತನಿಖೆ ಸಹ ನಡೆಸಲಾಗಿದೆ. ಈ ಪ್ರಕರಣದಲ್ಲಿ ಆತ ‘ಸಂದೇಶ ವಾಹಕ’ ನಂತರೆ ಕೆಲಸ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ.