ಪಂಚ ಭೂತಗಳಲ್ಲಿ ಲೀನರಾದ ಶತಾಯುಷಿ ಅಡಿವೆಪ್ಪ ಮಹಾರಾಜರು

| Published : Nov 07 2025, 03:15 AM IST

ಪಂಚ ಭೂತಗಳಲ್ಲಿ ಲೀನರಾದ ಶತಾಯುಷಿ ಅಡಿವೆಪ್ಪ ಮಹಾರಾಜರು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಸುಕ್ಷೇತ್ರ ಬೂದಿಹಾಳ ಗ್ರಾಮದ ಕರಿಸಿದ್ದೇಶ್ವರ ಮಠದ ಪೂಜ್ಯರಾದ ಅಡಿವೆಪ್ಪ ಮಹಾರಾಜರು (106) ಬುಧವಾರ ರಾತ್ರಿ ಲಿಂಗೈಕ್ಯರಾದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಸುಕ್ಷೇತ್ರ ಬೂದಿಹಾಳ ಗ್ರಾಮದ ಕರಿಸಿದ್ದೇಶ್ವರ ಮಠದ ಪೂಜ್ಯರಾದ ಅಡಿವೆಪ್ಪ ಮಹಾರಾಜರು (106) ಬುಧವಾರ ರಾತ್ರಿ ಲಿಂಗೈಕ್ಯರಾದರು. ಗುರುವಾರ ಅಂತಿಮ ವಿಧಿ-ವಿಧಾನಗಳೊಂದಿಗೆ ಮಹಾರಾಜರು ಪಂಚಭೂತಗಳಲ್ಲಿ ಲೀನರಾದರು. ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಕಳೆದ ೧೦ ದಿನಗಳ ಕಾಲ ಯಾವುದೇ ಆಹಾರ ಸ್ವೀಕರಿಸಿರಲಿಲ್ಲ.

ಬೂದಿಹಾಳ ಗ್ರಾಮದ ಗದಿಗೆಪ್ಪ ಹಾಗೂ ಶಂಕ್ರೆಮ್ಮ ದಂಪತಿ ಉದರಲ್ಲಿ ಜನಿಸಿದ ಮಹಾರಾಜರು, ಬೀಳಗಿ ತಾಲೂಕಿನ ಕಮದಾಳ ಗ್ರಾಮದ ಕರಿಸಿದ್ದೇಶ್ವರ ಶ್ರೀಗಳ ಪರಮ ಶಿಷ್ಯರಾಗಿದ್ದರು. ನಾಡಿನಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿದ್ದ ಮಹಾರಾಜರು, ನೂರಾರು ವರ್ಷಗಳ ಕಾಲ ತಮ್ಮ ಶಿಷ್ಯಂದಿರಿಗೆ ಒಳಿತು ಮಾಡಿ ಹಲವು ಮಠ-ಮಂದಿರಗಳನ್ನು ಕಟ್ಟುವಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ನೆರವೇರಿತು. ವಿಜಯಪುರ, ಬಾಗಲಕೋಟೆ, ಗದಗ ಸೇರಿದಂತೆ ನಾಡಿನ ಹಲವು ಕಡೆಯಿಂದ ಆಗಮಿಸಿದ ಭಕ್ತರು ದರ್ಶನ ಪಡೆದುಕೊಂಡರು. ಇಂಗಳೇಶ್ವರ- ವಡವಡಗಿಯ ಭೃಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಲದ ಹುಲಜಂತಿಯ ಪಟ್ಟದ ದೇವರು ಮಾಲಿಂಗರಾಯ ಮಹಾರಾಜರು, ಬಸವನಬಾಗೇವಾಡಿ ಶಿವಾನಂದ, ಈರಕಾರ ಮುತ್ಯಾ ಸೇರಿದಂತೆ ನಾಡಿನ ಹಲವರು ಭಾಗವಹಿಸಿದ್ದರು. ಶ್ರೀಗಳ ಅಂತಿಮ ಧಾರ್ಮಿಕ ವಿಧಿವಿಧಾನದಲ್ಲಿ ನಾಡಿನ ಹಲವರು ಡೊಳ್ಳಿನ ಗಾಯನ ಸಂಘದವರು ಅಡಿವೆಪ್ಪ ಮಹಾರಾಜರ ಕುರಿತು ಡೊಳ್ಳಿನ ಹಾಡುಗಳನ್ನು ಹಾಡಿದರು.

ಸಂತಾಪ ಸೂಚನೆ:

ಯರನಾಳದ ಸಂಗನಬಸವ ಸ್ವಾಮೀಜಿ, ಹಾಲುಮತ ಗುರುಪೀಠ ಸರೂರದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ, ಸಿದ್ದಾಶ್ರಮ ಮಮ್ಮಟಗುಡ್ಡ ಅರಕೇರಿಯ ಅವದೂತಸಿದ್ದ ಮಹಾರಾಜರು, ಅರಳಿಚಂಡಿಯ ಅವಪ್ಪ ಮುತ್ಯಾ, ಅಭಿನವ ಪುಂಡಲಿಕ ಶ್ರೀಗಳು, ರೂಡಗಿಯ ಯಲ್ಲಾಲಿಂಗ ಮಹಾರಾಜರು, ಬಸವಸಂಗೊಗಿಯ ಮದಗೊಂಡ ಮಹಾರಾಜರು, ಸಚಿವ ಶಿವಾನಂದ ಪಾಟೀಲ, ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಎ.ಎಸ್. ಪಾಟೀಲ ನಡಹಳ್ಳಿ, ಮುಖಂಡರಾದ ಗೌರಮ್ಮ ಮುತ್ತತ್ತಿ, ಡಾ.ಪ್ರಭುಗೌಡ ಲಿಂಗದಳ್ಳಿ, ಅಶೋಕಗೌಡ ಪಾಟೀಲ, ಸಚೀನಗೌಡ ಪಾಟೀಲ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ನಾಡಿನ ಹರ-ಗುರು ಚರಮೂರ್ತಿಗಳು ಹಾಗೂ ರಾಜಕಾರಣಿಗಳು ಮಹಾರಾಜರ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ.