ಸಾರಾಂಶ
ಕುರುಗೋಡು: ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ತನ್ನ ಪಥ ಬದಲಿಸುವ ಸಂದರ್ಭದಲ್ಲಿ ಆಚರಿಸುವ ಸಂಕ್ರಾ೦ತಿ ಹಬ್ಬವನ್ನು ತಾಲೂಕಿನಾದ್ಯಂತ ಮಂಗಳವಾರ ಸಡಗರ ಮತ್ತು ಸಂಭ್ರಮದಿ೦ದ ಆಚರಿಸಲಾಯಿತು.
ಮಹಿಳೆಯರು ತಮ್ಮ ಮನೆ ಅಂಗಳದಲ್ಲಿ ವಿವಿಧ ಬಗೆಯ ಬಣ್ಣಗಳನ್ನು ಬಳಸಿ ಚಿತ್ತಾಕರ್ಷಕ ರಂಗೋಲಿ ಹಾಕಿದ ದೃಶ್ಯ ಕಂಡುಬ೦ತು.ಪಟ್ಟಣದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನ, ಶ್ರೀ ಸುಂಕ್ಲಮ್ಮ ದೇವಿ ದೇವಸ್ಥಾನ,, ಶ್ರೀ ಪಂಚಮುಖಿ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಸಾಯಿಬಾಬಾ ದೇವಸ್ಥಾನ ಸೇರಿದಂತೆ ತಾಲೂಕಿನ ಪ್ರಮುಖ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಭಕ್ತರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪುನೀತರಾದರು.
ಹಬ್ಬದ ಅಂಗವಾಗಿ ಮನೆಗಳಿಗೆ ಸಂಕ್ರಮಣ ಭಿಕ್ಷೆಗೆ ಬರುವ ಜಂಗಮರಿಗೆ ರೈತರು ಹೊಸದಾಗಿ ಬೆಳೆದ ದವಸ-ಧಾನ್ಯ ಮತ್ತು ತರಕಾರಿ ದಾನಮಾಡಿ ಭಕ್ತಿ ಮೆರೆದರು.ಬೆಳೆದ ಬೆಳೆ ರೈತರ ಕೈಸೇರುವ ಸಂದರ್ಭದಲ್ಲಿ ಬರುವ ಈ ಹಬ್ಬದಲ್ಲಿ ಹೊಸ ದವಸ-ಧಾನ್ಯಗಳನ್ನು ಬಳಸಿ ತಯಾರಿಸಿದ ಅಡುಗೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ನಂತರ ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಕೂತು ಊಟ ಸವಿಯುವುದು ಹಬ್ಬದ ವಿಶೇಷ. ಮನೆಗಳಲ್ಲಿ ಚಿಕ್ಕಮಕ್ಕಳಿಗೆ ಹೂ ಮತ್ತು ಹಣ್ಣಿನಿಂದ ಎರೆದು ಆಯಸ್ಸು, ಆರೋಗ್ಯ ದೊರೆಯಲಿ ಎಂದು ಹಾರೈಸುವ ಆಚರಣೆಗಳು ಜರುಗಿದವು. ಸಂಜೆ ಹೊಸ ದಿರಿಸು ಧರಿಸಿ ನೆಂಟರು, ಇಷ್ಟರ ಮನೆಗಳಿಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಎಳ್ಳು-ಬೆಲ್ಲ ಬೀರಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯ ಎಲ್ಲೆಡೆ ಕಂಡುಬ೦ತು.ಕಂಪ್ಲಿಯಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ
ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಸಂಕ್ರಾಂತಿ ಹಬ್ಬ ಮಂಗಳವಾರ ಸಂಭ್ರಮದಿಂದ ಜರುಗಿತು. ಸಂಕ್ರಾಂತಿಯ ಅಂಗವಾಗಿ ಮಹಿಳೆಯರು ಮನೆಗಳ ಅಂಗಳದಲ್ಲಿ ಸೆಗಣಿ ಸಾರಿಸಿ ಚಿತ್ತಾರವಾದ ರಂಗೋಲಿಯನ್ನು ಹಾಕಿ ಪಾಂಡವರನ್ನು ಕೂರಿಸಿದ್ದರು. ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ನವ ಧಾನ್ಯಗಳು, ತರಕಾರಿ ದಕ್ಷಿಣೆಯನ್ನು ಜಂಗಮ ವಟುಗಳಿಗೆ ದಾನ ನೀಡಲಾಯಿತು. ಎಳ್ಳು ಹೋಳಿಗೆ, ಕೊಬರಿ ಹೋಳಿಗೆ ಸೇರಿ ಅನೇಕ ರೀತಿಯ ಸಿಹಿ ತಿನಿಸುಗಳು, ಸಜ್ಜೆ ರೊಟ್ಟಿಯ ಜೊತೆಗೆ ವಿವಿಧ ರೀತಿಯ ತರಕಾರಿಗಳಿಂದ ಸಿದ್ದಪಡಿಸಿದಂತಹ ಪಲ್ಯೆಯನ್ನು ನೈವೇದ್ಯ ನೀಡಿ ಭಕ್ತಿ ಸಮರ್ಪಿಸಿದರು. ಜನರು ಸಂಜೆ ಎಳ್ಳು ಬೆಲ್ಲವನ್ನು ನೀಡಿ ಪರಸ್ಪರ ಖುಷಿ ಹಂಚಿಕೊಳ್ಳುವ ಮೂಲಕ ಎಲ್ಲೆಡೆ ಸಂಭ್ರಮದ ಸಂಕ್ರಾಂತಿ ಆಚರಣೆ ಮಾಡಿದರು. ಹಬ್ಬದ ನಿಮಿತ್ತ ಪಟ್ಟಣದ ಆರಾಧ್ಯ ದೈವ ಶ್ರೀ ಪೇಟೆ ಬಸವೇಶ್ವರ ಸ್ವಾಮಿ, ಐತಿಹಾಸಿಕ ಶ್ರೀ ಸೋಮಪ್ಪ ದೇವಸ್ಥಾನ, ಶ್ರೀ ನಾಗರೇಶ್ವರ ದೇವಸ್ಥಾನ, ಮಾರೆಮ್ಮ ದೇವಸ್ಥಾನ ಸೇರಿದಂತೆ ತಾಲೂಕಿನ ಎಲ್ಲೆಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.