ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಗಿರಿ
ಸಮಾಜಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದ ಮಹ್ಮದ್ ಪೈಗಂಬರರು ಮುಸ್ಲಿಂ ಧರ್ಮಕ್ಕೆ ನೀಡಿದ ಕೊಡುಗೆ ಅಪಾರ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ಪಟ್ಟಣದ ಅಗಸಿ ಹನುಮಪ್ಪ ದೇವಸ್ಥಾನದ ಮುಂಭಾಗದಲ್ಲಿ ಮುಸ್ಲಿಂ ಸಮಾಜದಿಂದ ಪ್ರವಾದಿ ಮಹ್ಮದ್ ಪೈಗಂಬರರ ಜಯಂತಿ ಭಾಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಅಂದು ಮುಸ್ಲಿಂ ಸಮಾಜದ ಮಹಿಳೆಯರು ಶೋಷಿತ, ತುಳಿತಕ್ಕೊಳಗಾಗಿದ್ದರು. ಶಾಂತಿಧೂತರಾಗಿದ್ದ ಪೈಗಂಬರರು ತತ್ವಾದರ್ಶಗಳ ಮೂಲಕ ಶೋಷಿತ ಮಹಿಳೆಯರನ್ನು ಮುನ್ನೆಲೆಗೆ ತಂದರು. ಇಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆದಾಗ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದರು. ಹಿಂದೂ-ಮುಸ್ಲಿಂ ಧರ್ಮಗಳಲ್ಲಿ ಬಿರುಕು ಮುಡಿಸುವ ಶಕ್ತಿಗಳನ್ನು ಹೊಡೆದೊಡಿಸುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಮ್ಮ ಸರ್ಕಾರ ಕಂಕಣ ಬದ್ಧವಾಗಿದೆ. ಸಂವಿಧಾನದ ಮುಂದೆ ಯಾರೂ ಮೇಲಲ್ಲ, ಕೀಳಲ್ಲ. ಎಲ್ಲ ಧರ್ಮಗಳು ಒಂದೇ ಆಗಿವೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಸುವರ್ಣಗಿರಿ ಸಂಸ್ಥಾನ ಮಠದ ಡಾ. ಚನ್ನಮಲ್ಲಶ್ರೀ ಮಾತನಾಡಿ, ಇಸ್ಲಾಂ ಧರ್ಮಕ್ಕೆ ಪೈಗಂಬರರು ತಮ್ಮದೇ ಆದ ವಿಚಾರಗಳನ್ನು ನೀಡಿ ಸಮಾಜದ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಹೀಗಾಗಿ ಪೈಗಂಬರರ ವಿಚಾರಗಳು ಎಂದಿಗೂ ಪ್ರಸ್ತುತ.ಇಂತಹ ದಾರ್ಶನಿಕರ ವಿಚಾರಗಳು ಸ್ಪೂರ್ತಿಯಾಗಿವೆ ಎಂದು ತಿಳಿಸಿದರು.ಮೆಲುಗಡೆ ಅಗಸಿ ಹನುಮಪ್ಪ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ರಾಜಬೀದಿಯ ಮಾರ್ಗವಾಗಿ ವಾಲ್ಮೀಕಿ ವೃತ್ತದಿಂದ ಶಾದಿಮಹಲ್ ವರೆಗೆ ನಡೆಯಿತು. ಜಯಂತಿಯಲ್ಲಿ ಪಾಲ್ಗೊಂಡಿದ್ದ ಜನತೆಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಜಿಪಂ ಮಾಜಿ ಸದಸ್ಯರಾದ ವೀರೇಶ ಸಮಗಂಡಿ, ಅಮರೇಶ ಗೋನಾಳ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವೀರೇಶಪ್ಪ ಶೆಟ್ಟರ್, ಪ್ರಮುಖರಾದ ಗಂಗಾಧರಸ್ವಾಮಿ, ಶರಣಪ್ಪ ಭತ್ತದ, ಇಮಾಮಸಾಬ ಎಲಿಗಾರ, ಶಾಮೀದಸಾಬ ಲಯನ್ದಾರ, ಹೊನ್ನೂರುಸಾಬ ಚಿನ್ನೂರು, ರಾಜಸಾಬ ನಂದಾಪೂರ, ಖಾಜಸಾಬ ಗುರಿಕಾರ, ಹೊನ್ನೂರುಸಾಬ ಉಪ್ಪು, ಹಜರತಹುಸೇನ ಮುಜಾವರ, ಮಹ್ಮದ್, ಪಾಷಸಾಬ ಮುಲ್ಲಾರ ಇತರರಿದ್ದರು.