ಫೇವರಿಚ್ ಗ್ರೂಪ್‌ಗೆ ೪೦ ವರ್ಷದ ಇತಿಹಾಸವಿದೆ. ಸಣ್ಣ ಉದ್ಯಮದಿಂದ ದೊಡ್ಡ ಉದ್ಯಮವಾಗಿ ಗ್ರೂಪ್ ನ ಅಧ್ಯಕ್ಷ ಜಯದೇವ ನಾಯ್ಡು ಬೆಳೆಸಿದ್ದಾರೆ. ಮೊದಲಿಗೆ ಕೃಷಿ ಸರಕು ವ್ಯಾಪಾರ, ಆಮದು, ರಫ್ತು ಹಾಗೂ ತಯಾರಿಕಾ ಕ್ಷೇತ್ರಗಳಿಗೆ ವಿಸ್ತರಣೆ ಆಗಿದೆ. ಈಗ ಕೃಷಿ ಹಾಗೂ ಆಹಾರ ಸಂಬಂಧಿತ ಉದ್ಯಮಕ್ಕೂ ಪಾದಾರ್ಪಣೆ ಮಾಡಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ನೌಕರರು ಉತ್ತಮ ಆರೋಗ್ಯ ಕಾಪಾಡಿಕೊಂಡು ಉದ್ಯಮಗಳ ಬೆಳವಣಿಗೆಗೆ ಕೊಡುಗೆ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರ ಕೊಡಬೇಕು ಎಂದು ಫೇವರಿಚ್ ಗ್ರೂಪ್‌ನ ಉಪಾಧ್ಯಕ್ಷ ಆರ್.ದಯಾನಂದಕುಮಾರ್ ಅಭಿಪ್ರಾಯಪಟ್ಟರು.

ತಾಲೂಕಿನ ಬಣ್ಣೇನಹಳ್ಳಿ ಗ್ರಾಮದಲ್ಲಿರುವ ಫೇವರಿಚ್ ಗ್ರೂಪ್‌ನ ಮೆಗಾ ಫುಡ್‌ಪಾರ್ಕ್‌ನಲ್ಲಿ ಫೇವರಿಚ್ ಗ್ರೂಪ್ ಹಾಗೂ ರೋಟರಿ ಬೆಂಗಳೂರು ಮಹಾಲಕ್ಷ್ಮೀ ಸೆಂಟ್ರಲ್ ಸಹಯೋಗದಲ್ಲಿ ಫುಡ್‌ಪಾರ್ಕ್ ಆವರಣದಲ್ಲಿರುವ ಉದ್ಯಮಗಳ ನೌಕರರು, ಅವರ ಕುಟುಂಬ ಸದಸ್ಯರಿಗೆ ಮೆಗಾ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಫೇವರಿಚ್ ಗ್ರೂಪ್‌ಗೆ ೪೦ ವರ್ಷದ ಇತಿಹಾಸವಿದೆ. ಸಣ್ಣ ಉದ್ಯಮದಿಂದ ದೊಡ್ಡ ಉದ್ಯಮವಾಗಿ ಗ್ರೂಪ್ ನ ಅಧ್ಯಕ್ಷ ಜಯದೇವ ನಾಯ್ಡು ಬೆಳೆಸಿದ್ದಾರೆ. ಮೊದಲಿಗೆ ಕೃಷಿ ಸರಕು ವ್ಯಾಪಾರ, ಆಮದು, ರಫ್ತು ಹಾಗೂ ತಯಾರಿಕಾ ಕ್ಷೇತ್ರಗಳಿಗೆ ವಿಸ್ತರಣೆ ಆಗಿದೆ. ಈಗ ಕೃಷಿ ಹಾಗೂ ಆಹಾರ ಸಂಬಂಧಿತ ಉದ್ಯಮಕ್ಕೂ ಪಾದಾರ್ಪಣೆ ಮಾಡಿದೆ. ಫೇವರಿಚ್ ಗ್ರೂಪ್ ದೇಶದಲ್ಲಿ ಸ್ನ್ಯಾಕ್, ಆಹಾರ, ಕಚ್ಚಾ ವಸ್ತುಗಳ ತಯಾರಿಕೆ ಹಾಗೂ ಪೂರೈಕೆ ಮಾಡುತ್ತಿದ್ದಾರೆ. ಪೆಪ್ಸಿಕೋ, ಪಾರ್ಲೆ, ಐಟಿಸಿ ಸೇರಿದಂತೆ ಹಲವು ಜಾಗತಿಕ ಸಂಸ್ಥೆಗಳಿಗೆ ಪೂರೈಸುತ್ತಿದೆ ಎಂದು ಹೇಳಿದರು.

ಫೇವರಿಚ್ ಗ್ರೂಪ್ ಕರ್ನಾಟಕದ ವಿವಿಧ ಭಾಗಗಳಲ್ಲಿ ೫೦೦ ಎಕರೆ ವ್ಯಾಪ್ತಿಯ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಫೇವರಿಚ್ ಮೆಗಾ ಫುಡ್ ಪಾರ್ಕ್ ಮತ್ತು ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ಈಗಾಗಲೇ ೧೦ ದೊಡ್ಡ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಕೆ.ಆರ್. ಪೇಟೆ ತಾಲೂಕು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನೇರ ಮತ್ತು ಪರೋಕ್ಷವಾಗಿ ಸುಮಾರು ೧ ಸಾವಿರ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಮುಂದಿನ ದಿನಗಳಲ್ಲಿ ೨ ರಿಂದ ೩ ಸಾವಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭರವಸೆ ನೀಡಿದರು.

ರೋಟರಿ ಸಂಸ್ಥೆಯ ಪಿಡಿಜಿ ಡಾ.ನಾಗೇಂದ್ರ, ಬೆಂಗಳೂರಿನ ಮಹಾಲಕ್ಷ್ಮೀ ಸೆಂಟ್ರಲ್ ರೋಟರಿ ಅಧ್ಯಕ್ಷ ಪ್ರಶಾಂತ್ ರಾವ್, ಸಂಸ್ಥೆಯ ನಿರ್ದೇಶಕ ವಿಶಾಲ್ ನಾಯ್ಡು, ಸಂಸ್ಥೆಯ ಅಧ್ಯಕ್ಷ ಜಯದೇವ್, ಕಾರ್ಯದರ್ಶಿ ಚಿರುದೀಪ್ ಇದ್ದರು.