ಸಾರಾಂಶ
ನರಗುಂದ: ರಾಜ್ಯದ ಜನರ ಜೀವನಮಟ್ಟ ಸುಧಾರಣೆಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಹಕಾರವಾಗಿವೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿಯ ನೂತನ ಕೊಠಡಿ ಉದ್ಘಾಟನೆ ಮತ್ತು ಗ್ಯಾರಂಟಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದ ಮೇಲೆ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ತಾಲೂಕು ಗ್ಯಾರಂಟಿ ಸಮಿತಿ ಕಾರ್ಯಾಲಯ ಉದ್ಘಾಟಿಸಿದರು.
ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಬಗ್ಗೆ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವರದಿ ಮಂಡಿಸಿದರು. ಗೃಹಲಕ್ಷ್ಮಿ ಯೋಜನೆ ಶೇ. 98, ಶಕ್ತಿ ಯೋಜನೆ ಶೇ. 100, ಅನ್ನಭಾಗ್ಯ ಯೋಜನೆ ಶೇ. 76, ಗೃಹ ಜ್ಯೋತಿ ಶೇ. 99 ಮತ್ತು ಯುವ ನಿಧಿ ಯೋಜನೆ ಶೇ. 62 ಪ್ರಗತಿ ಸಾಧಿಸಿವೆ ಎಂದು ಅಧಿಕಾರಿಗಳು ತಿಳಿಸಿದರು.ಅನ್ನಭಾಗ್ಯ ಮತ್ತು ಯುವ ನಿಧಿ ಯೋಜನೆ ತಾಲೂಕಿನಲ್ಲಿ ಕಡಿಮೆ ಪ್ರಗತಿ ಸಾಧಿಸಿರುವುದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ವಿವರಣೆ ಕೇಳಿದರು. ಇದಕ್ಕೆ ವಿವರಣೆ ನೀಡಿದ ಸಂಬಂಧಿಸಿದ ಅಧಿಕಾರಿಗಳು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಒಟ್ಟು 27927 ಪಡಿತರ ಚೀಟಿದಾರರ ಪೈಕಿ 21197 ಪಡಿತರ ಚೀಟಿದಾರರಿಗೆ ಆಹಾರ ಸಾಮಗ್ರಿ ಜೋಡಣೆಗೆ ಡಿಬಿಟಿ ಮೂಲಕ ಸರ್ಕಾರದ ಆದೇಶದಂತೆ ಹಣ ಸಂದಾಯ ಮಾಡಲಾಗಿದೆ. ಬಾಕಿ ಇರುವ 593 ಪಡಿತರರಿಗೆ ಆಹಾರ ಸಾಮಗ್ರಿ ಮಾತ್ರ ವಿತರಿಸುವ ಬಗ್ಗೆ ವಿವರಣೆ ನೀಡಿದರು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಗಳು ತಾಲೂಕಿನ ಎಲ್ಲ ಪದವಿ ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಭೇಟಿ ನೀಡಿ ಯುವನಿಧಿ ಯೋಜನೆ ಕುರಿತಂತೆ ಮಾಹಿತಿ ನೀಡಲಾಗಿದೆ. 2023ರ ನಂತರದಲ್ಲಿ ಪದವಿ ಮತ್ತು ಡಿಪ್ಲೊಮಾ ವ್ಯಾಸಂಗ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಸಂಬಂಧಿಸಿದ ತಂತ್ರಾಂಶದಲ್ಲಿ ಅವರ ಶೈಕ್ಷಣಿಕ ಮಾಹಿತಿ ಅಳವಡಿಸಿ ನಮ್ಮ ಇಲಾಖೆಗೆ ಬಂದು, ತಮ್ಮ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಿ ಅನುಮೋದನೆ ಪಡೆದುಕೊಳ್ಳಬೇಕು. ಈ ಪ್ರಕ್ರಿಯೆ ಮುಕ್ತಾಯವಾದ ನಂತರ 180 ದಿನಗಳ ಬಳಿಕ ಯುವನಿಧಿ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆ ಕುರಿತಾದ ಹೆಚ್ಚಿನ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಮಾಹಿತಿ ಫಲಕ ಅಳವಡಿಸಿ, ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಗ್ಯಾರಂಟಿ ಸಮಿತಿ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು, ಸದಸ್ಯರು ಅಧಿಕಾರಿಗಳಿಗೆ ಸಲಹೆ ನೀಡಿದರು.
ನರಗುಂದ ವಿಧಾನಸಭೆ ಮತಕ್ಷೇತ್ರದ ಮಾಜಿ ಶಾಸಕ ಬಿ.ಆರ್. ಯಾವಗಲ್, ಎಂ.ಎಸ್. ಪಾಟೀಲ, ವಾಳದ, ಗ್ಯಾರಂಟಿ ಸಮಿತಿಯ ಸದಸ್ಯರು, ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.