ಸಾರಾಂಶ
ಪ್ರಸ್ತುತ ಸಮಾಜದಲ್ಲಿ ಕಾನೂನು ಆಳುವ ವರ್ಗದ ಅಸ್ತ್ರವಾಗಿದ್ದು, ಇದರಿಂದಾಗಿ ಕಾನೂನು ಚೌಕಟ್ಟಿನಲ್ಲಿ ದುಡಿಯುತ್ತಿರುವ ಜನಸಾಮಾನ್ಯರು ನ್ಯಾಯ ಪಡೆಯುತ್ತೇವೆ ಎನ್ನುವುದು ಕಷ್ಟ ಸಾಧ್ಯವಾಗಿದೆ.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಪ್ರಸ್ತುತ ಸಮಾಜದಲ್ಲಿ ಕಾನೂನು ಆಳುವ ವರ್ಗದ ಅಸ್ತ್ರವಾಗಿದ್ದು, ಇದರಿಂದಾಗಿ ಕಾನೂನು ಚೌಕಟ್ಟಿನಲ್ಲಿ ದುಡಿಯುತ್ತಿರುವ ಜನಸಾಮಾನ್ಯರು ನ್ಯಾಯ ಪಡೆಯುತ್ತೇವೆ ಎನ್ನುವುದು ಕಷ್ಟ ಸಾಧ್ಯವಾಗಿದೆ ಎಂದು ವಕೀಲ ಎ. ಕರುಣಾನಿಧಿ ಹೇಳಿದರು.ಕಾರ್ಲ್ ಮಾರ್ಕ್ಸ್ ಜನ್ಮದಿನಾಚರಣೆ ನಿಮಿತ್ತ ಅಖಿಲ ಭಾರತ ವಕೀಲರ ಒಕ್ಕೂಟ (ಎಐಎಲ್ ಯು) ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ, ಮಾರ್ಕ್ಸ್ ವಾದಿ ನೆಲೆಯಲ್ಲಿ ಕಾನೂನು ಶಾಸ್ತ್ರ ಎಂಬ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರು ಅನ್ಯಾಯದ ತಳಹದಿಯ ಮೇಲೆ ರಚಿತವಾದ ಸಮಾಜದಲ್ಲಿ ಬದುಕುತ್ತಿರುವುದರಿಂದ ನ್ಯಾಯವನ್ನು ಪಡೆಯಲು ಕಾನೂನಿನ ಮೊರೆ ಹೋಗುತ್ತಾರೆ. ಆದರೆ ಕಾನೂನಿನ ಸ್ವರೂಪ ಮತ್ತು ಅದರ ಆಸಕ್ತಿಗಳನ್ನು ತಿಳಿಯಲು ವಿಫಲರಾಗಿದ್ದಾರೆ. ಆದ್ದರಿಂದಲೇ ಕಾನೂನು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿದೆ ಎಂದರು.ಮಾರ್ಕ್ಸ್ ಕಾರ್ಮಿಕ ವರ್ಗದ ಸರ್ವಾಧಿಕಾರ ಬಯಸುತ್ತಾರೆ. ಆದರೆ ಇದು ಕೇವಲ ತಾತ್ಕಾಲಿಕವಾಗಿ ಮಾತ್ರ, ಕಾರಣ ಇದರ ಉದ್ದೇಶ ಕಾರ್ಮಿಕ ಸರ್ವಾಧಿಕಾರವನ್ನು ಸ್ಥಿರೀಕರಿಸುವುದಲ್ಲ, ಬದಲಿಗೆ ಅಸಮಾನತೆಗೆ ಕಾರಣವಾದ ಆಳುವ ವರ್ಗವನ್ನು ನಾಶಗೊಳಿಸಿ ವರ್ಗರಹಿತ ಸಮಾಜವನ್ನು ನಿರ್ಮಾಣ ಮಾಡಿದಾಗ ಖಾಸಗಿ ಒಡೆತನ ನಾಶವಾಗಿ ಕಾನೂನು ಮತ್ತು ಪ್ರಭುತ್ವ ತನ್ನಷ್ಟಕ್ಕೆ ತಾನೇ ಕರಗಿ ಹೋಗುತ್ತದೆ. ಈ ಕಾರಣಕ್ಕಾಗಿಯೇ ಜನರು ರಾಜಕೀಯ ಹೋರಾಟಕ್ಕೆ ಮುಂದಾಗಬೇಕು ಮತ್ತು ಅದು ಜನರಿಗೆ ಅನಿವಾರ್ಯವೂ ಆಗುತ್ತದೆ ಎಂದರು.
ಹಿರಿಯ ವಕೀಲ ಕೆ. ಪ್ರಹ್ಲಾದ್ ಅಧ್ಯಕ್ಷತೆ ವಹಿಸಿದ್ದರು.ವಕೀಲರಾದ ಬಿಸಾಟಿ ಮಹೇಶ್, ಮರಿಯಪ್ಪ, ಮುನೀರ್ ಬಾಷಾ, ಕಟಿಗಿ ಜಂಬಯ್ಯ ನಾಯಕ, ವೆಂಕಟೇಶಲು, ಕಲ್ಯಾಣಯ್ಯ ಮತ್ತಿತರರಿದ್ದರು.