ಸಾರಾಂಶ
ಬಿಜೆಪಿಯ ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿದೆ. ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭಾನುವಾರ ರಾತ್ರಿ ನೇಮಕ ಮಾಡಿ ಪ್ರಕಟಣೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಾಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್, ಸಿ.ಕೆ.ರಾಮಮೂರ್ತಿ, ಮಾಜಿ ಶಾಸಕರಾದ ಎಲ್.ನಾಗೇಂದ್ರ, ಸಿ.ಎಸ್.ನಿರಂಜನ್‌ಕುಮಾರ್, ಅರುಣ್ ಕುಮಾರ್ ಪೂಜಾರ್ ಮತ್ತಿತರರು ಸೇರಿದಂತೆ ಬಿಜೆಪಿಯ ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿದೆ. ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭಾನುವಾರ ರಾತ್ರಿ ನೇಮಕ ಮಾಡಿ ಪ್ರಕಟಣೆ ನೀಡಿದ್ದಾರೆ.ಹಲವು ಜಿಲ್ಲೆಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಿಜಯೇಂದ್ರ ಅವರು ತಮ್ಮ ಬೆಂಬಲಿಗರಿಗಷ್ಟೇ ಜಿಲ್ಲಾಧ್ಯಕ್ಷ ಸ್ಥಾನ ನೀಡುತ್ತಾರೆ ಎಂಬ ಪಕ್ಷದ ಮುಖಂಡರ ಅನುಮಾನಗಳನ್ನು ಹುಸಿಗೊಳಿಸಿ ಪಕ್ಷದ ನಿಷ್ಠಾವಂತರನ್ನೂ ಗುರುತಿಸಿ ಜವಾಬ್ದಾರಿ ವಹಿಸಿದ್ದಾರೆ.ಹಾಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್ ಅವರಿಗೆ ರಾಯಚೂರು ಜಿಲ್ಲಾಧ್ಯಕ್ಷ, ಸಿ.ಕೆ.ರಾಮಮೂರ್ತಿ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ, ಮಾಜಿ ಶಾಸಕರಾದ ಎಲ್.ನಾಗೇಂದ್ರ ಅವರಿಗೆ ಮೈಸೂರು ನಗರ ಜಿಲ್ಲಾಧ್ಯಕ್ಷ, ಸಿ.ಎಸ್.ನಿರಂಜನ್‌ಕುಮಾರ್ ಅವರಿಗೆ ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಗೂ ಅರುಣ್ ಕುಮಾರ್ ಪೂಜಾರ್ ಅವರಿಗೆ ಹಾವೇರಿ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ.ಒಟ್ಟು 39 ಜಿಲ್ಲಾಧ್ಯಕ್ಷರ ಪೈಕಿ ಕೇವಲ ಒಬ್ಬರು ಮಾತ್ರ ಮಹಿಳೆಗೆ ಪ್ರಾತಿನಿಧ್ಯ ಸಿಕ್ಕಿದೆ. ಬೆಳಗಾವಿ ನಗರ ಘಟಕದ ಅಧ್ಯಕ್ಷರನ್ನಾಗಿ ಗೀತಾ ಸುತಾರ್ ಅವರನ್ನು ನೇಮಿಸಲಾಗಿದೆ.ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರ ಪರಮಾಪ್ತನಾಗಿರುವ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದ ತಮ್ಮೇಶ್‌ಗೌಡ ಅವರಿಗೆ ಅವಕಾಶ ಸಿಗಲಿಲ್ಲ.ತಮ್ಮೇಶ್‌ಗೌಡ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸುವ ವದಂತಿ ಹಬ್ಬಿದ್ದ ಬೆನ್ನಲ್ಲೇ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಮಣಿದ ವಿಜಯೇಂದ್ರ ಅವರು ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮಾಜಿ ಉಪಮೇಯರ್ ಎಸ್.ಹರೀಶ್ ಅವರನ್ನು ನೇಮಿಸಿದ್ದಾರೆ.