ಸಾರಾಂಶ
- ಅನುದಾನ ರಹಿತ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ 2ನೇ ರಾಜ್ಯ ಸಮಾವೇಶ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಉತ್ತರ ಭಾರತದ ಟ್ಯೂಷನ್ ಕಂಪನಿಗಳು ಕರ್ನಾಟಕಕ್ಕೂ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ನಾಡಿನ ಶೈಕ್ಷಣಿಕ ಸಂಸ್ಥೆಗಳು ಜಾಗ್ರತೆ ವಹಿಸಬೇಕಲ್ಲದೇ, ಸರ್ಕಾರವೂ ಇಂತಹ ಕಂಪನಿಗಳಿಗೆ ಕಡಿವಾಣ ಹಾಕಲಿ ಎಂದು ಕರ್ನಾಟಕ ಅನುದಾನ ರಹಿತ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ ರಾಜ್ಯಾಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು.ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಶುಕ್ರವಾರ ಕರ್ನಾಟಕ ಅನುದಾನ ರಹಿತ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ 2ನೇ ರಾಜ್ಯಮಟ್ಟದ ಪಿಯು ಶಿಕ್ಷಣ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಭಾರತದ ಟ್ಯೂಷನ್ ಕಂಪನಿಗಳಿಗೆ ಸರ್ಕಾರ ಮೊದಲು ಕಡಿವಾಣ ಹಾಕಲಿ ಎಂದರು.
ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸುವ ಯೋಜನೆ ಮಾಡುವಾಗಲೇ ಹೊರ ರಾಜ್ಯಗಳು ಅದರಲ್ಲೂ ಉತ್ತರ ಭಾರತದ ಟ್ಯೂಷನ್ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಕಾಲಿಡುತ್ತಿವೆ. ಇಂತಹ ಕಂಪನಿಗಳು ಎಲ್ಲಿಯೋ ದಾಖಲಾತಿ, ಮತ್ತೆಲ್ಲೋ ತರಗತಿಗಳನ್ನು, ಮತ್ತೆ ಇನ್ನೆಲ್ಲಾ ಪರೀಕ್ಷೆಗಳನ್ನು ನಡೆಸುತ್ತವೆ. ಇವೆಲ್ಲವೂ ನಮ್ಮಂತಹ ಶಿಕ್ಷಣ ಸಂಸ್ಥೆಗಳಿಗೂ ಆತಂಕ ತಂದೊಡ್ಡುತ್ತಿರುವ ಸಂಗತಿಗಳಾಗಿವೆ ಎಂದು ದೂರಿದರು.ಟ್ಯೂಷನ್ ಕಂಪನಿಗಳ ಜೊತೆಗೆ ಡಮ್ಮಿ ಕಾಲೇಜುಗಳ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಇಂತಹ ಹಲವಾರು ಸಮಸ್ಯೆಗಳ ಕಾಲಚಕ್ರದಲ್ಲಿ ಅವುಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಸರ್ಕಾರಗಳು ಸಹ ಇಂತಹ ವಿಚಾರದಲ್ಲಿ ಜಾಗ್ರತೆ ವಹಿಸಿ, ಅವುಗಳಿಗೆ ಕಡಿವಾಣ ಹಾಕಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕೈಗೊಳ್ಳುವ ಯಾವುದೇ ಕಾರ್ಯ, ಕ್ರಮಗಳಿಗೆ ಕುಪ್ಮಾ ಸಂಪೂರ್ಣವಾಗಿ ಕೈಜೋಡಿಸಲಿದೆ ಎಂದು ಅವರು ಘೋಷಿಸಿದರು.
ಶೈಕ್ಷಣಿಕ ಕ್ಷೇತ್ರಕ್ಕೆ ಹೊರ ರಾಜ್ಯ, ವಿದೇಶಗಳಿಂದಲೂ ಸಂಸ್ಥೆಗಳು ಬರುತ್ತಿವೆ. ಅಂತಹ ಸಂಸ್ಥೆಗಳ ಪೈಕಿ ವ್ಯಾಪಾರ ಮನೋಧರ್ಮದವರೇ ಹೆಚ್ಚಾಗಿ ಬರುತ್ತಿದ್ದಾರೆ. ಇದರಿಂದಾಗಿ ಬಹಳಷ್ಟು ಹೂಡಿಕೆಗಳು ಈ ಕ್ಷೇತ್ರದಲ್ಲಿ ಆಗುತ್ತಿವೆ. ಇದು ವಿದ್ಯಾಕ್ಷೇತ್ರದಲ್ಲಿ ಪಾವಿತ್ರ್ಯತೆ, ಮೌಲ್ಯಗಳೇ ಇಲ್ಲವಾಗುತ್ತಿರುವುದೂ ಒಂದು ಕಾರಣವಾಗಿದೆ. ಇಂತಹ ಕಾಲಘಟ್ಟದಲ್ಲಿ ಪಿಯು ಕಾಲೇಜಿನ ಶಿಕ್ಷಣ ಸಂಸ್ಥೆಗಳು ಸಹ ಸದಾ ಜಾಗೃತವಾಗಿ ಇರಬೇಕು ಎಂದು ತಿಳಿಸಿದರು.ಕುಪ್ಮಾ ಗೌರವಾಧ್ಯಕ್ಷ ಎಂ.ಬಿ. ಪುರಾಣಿಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರೊ. ಎಲ್.ನರೇಂದ್ರ ನಾಯಕ್, ಸಂಸ್ಥೆ ಪದಾಧಿಕಾರಿಗಳಾದ ಸುಧಾಕರ ಶೆಟ್ಟಿ, ಯುವರಾಜ ಜೈನ್, ಡಾ.ಮಂಜುನಾಥ ರೇವಣಕರ್, ಸುಬ್ರಹ್ಮಣ್ಯ ನಾಡೋಜ, ವಿಶ್ವನಾಥ ಶೇಷಾಚಲ, ವಿಸ್ಟೆಂಟ್ ಕಾಸ್ಟಾ, ಎಂ.ಬಿ.ಸತೀಶ, ಡಾ.ಬಿ.ಕೆ.ದೇವರಾಜ, ಡಾ.ಜಯಂತ್ ಶೆಟ್ಟಿ, ಪಿ.ವಿಶ್ವನಾಥ ಇತರರು ಇದ್ದರು. ಕುಪ್ಮಾದ ದಾವಣಗೆರೆ ಜಿಲ್ಲಾಧ್ಯಕ್ಷ, ಸರ್ ಎಂ.ವಿ. ಕಾಲೇಜಿನ ಎಸ್.ಜೆ.ಶ್ರೀಧರ್ ಸ್ವಾಗತಿಸಿದರೆ, ಜಂಟಿ ಕಾರ್ಯದರ್ಶಿ ವೈ.ಯು.ವಿನಯ್ ವಂದಿಸಿದರು.
ಸಂಸ್ಥೆ ಜಿಲ್ಲಾ ಘಟಕ ಪದಾಧಿಕಾರಿಗಳಾದ ದವನ- ನೂತನ ಕಾಲೇಜಿನ ವೀರೇಶ ಪಟೇಲ್ ಕಕ್ಕರಗೊಳ್ಳ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಡಾ. ಡಿ.ಎಸ್.ಜಯಂತ್, ಮಾಗನೂರು ಬಸಪ್ಪ ಪಿಯು ಕಾಲೇಜಿನ ಕುಮಾರ, ಪ್ರಾಚಾರ್ಯ ಪ್ರಸಾದ ಎಸ್.ಬಂಗೇರಾ, ಸೈನ್ಸ್ ಅಕಾಡೆಮಿ ಕಾಲೇಜಿನ ವೈ.ವಿ. ವಿನಯ್, ಆನಂದ್ ಕಾಲೇಜಿನ ಆನಂದ್, ಪ್ರಶಾಂತ್ ಇತರರು ಇದ್ದರು.- - -
(ಕೋಟ್)ನಮ್ಮಲ್ಲಿ ಎಲ್ಲ ವಿಧದಲ್ಲೂ ಸ್ಪರ್ಧೆಗಳಿವೆ. ಇಂತಹ ಸ್ಪರ್ಧೆ ಜೊತೆ ಜೊತೆಗೆ ಅನ್ಯೂನವಾದ ಸಂಬಂಧ, ಪ್ರೀತಿ ಇರಬೇಕಾದುದೂ ನಮ್ಮ ಕರ್ತವ್ಯವಾಗಿದೆ. ಕುಪ್ಮಾ ಸಂಘಟನೆಯಡಿ ನಾವೆಲ್ಲರೂ ಒಂದಾಗಿದ್ದರೆ ಮಾತ್ರವೇ ಸರ್ಕಾರಗಳ ಬಳಿ ನಮ್ಮ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು, ನ್ಯಾಯ ಕೇಳುವುದಕ್ಕೆ ಸಾಧ್ಯ ಎಂಬುದನ್ನು ರಾಜ್ಯದ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳೂ ಅರ್ಥ ಮಾಡಿಕೊಳ್ಳಬೇಕು.
- ಡಾ. ಎಂ.ಮೋಹನ ಆಳ್ವ, ರಾಜ್ಯಾಧ್ಯಕ್ಷ.- - -
-12ಕೆಡಿವಿಜಿ8, 9, 10.ಜೆಪಿಜಿ:ದಾವಣಗೆರೆಯಲ್ಲಿ ಶುಕ್ರವಾರ ಕರ್ನಾಟಕ ಅನುದಾನ ರಹಿತ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ 2ನೇ ರಾಜ್ಯಮಟ್ಟದ ಪಿಯು ಶಿಕ್ಷಣ ಸಮಾವೇಶವನ್ನು ಕುಪ್ಮಾ ರಾಜ್ಯಾಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. -12ಕೆಡಿವಿಜಿ11.ಜೆಪಿಜಿ:
ದಾವಣಗೆರೆಯಲ್ಲಿ ಶುಕ್ರವಾರ ಕರ್ನಾಟಕ ಅನುದಾನ ರಹಿತ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ 2ನೇ ರಾಜ್ಯಮಟ್ಟದ ಪಿಯು ಶಿಕ್ಷಣ ಸಮಾವೇಶದಲ್ಲಿ ಕುಪ್ಮಾ ರಾಜ್ಯಾಧ್ಯಕ್ಷ ಡಾ.ಎಂ.ಮೋಹನ ಆಳ್ವ ಇತರರು ಭಾಗವಹಿಸಿದ್ದರು.