ಆರೋಗ್ಯ ಇಲಾಖೆ ಮೇಲೆ ಏಡ್ಸನ್ನು ಸಂಪೂರ್ಣವಾಗಿ ನಿರ್ಮೂಲನೆ ಹೊಣೆಗಾರಿಕೆ ನೀಡಲು ಸಾಧ್ಯವಿಲ್ಲ, ಇದರಲ್ಲಿ ಸಾರ್ವಜನಿಕರ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ದಿವಾಣಿ ನ್ಯಾಯಾಧೀಶ ಸುರೇಶ್‌ ವಗ್ಗನವರ ಹೇಳಿದರು.

ಬ್ಯಾಡಗಿ: ಆರೋಗ್ಯ ಇಲಾಖೆ ಮೇಲೆ ಏಡ್ಸನ್ನು ಸಂಪೂರ್ಣವಾಗಿ ನಿರ್ಮೂಲನೆ ಹೊಣೆಗಾರಿಕೆ ನೀಡಲು ಸಾಧ್ಯವಿಲ್ಲ, ಇದರಲ್ಲಿ ಸಾರ್ವಜನಿಕರ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ದಿವಾಣಿ ನ್ಯಾಯಾಧೀಶ ಸುರೇಶ್‌ ವಗ್ಗನವರ ಹೇಳಿದರು.

ಸ್ಥಳೀಯ ಕಾನೂನು ಸೇವೆಗಳ ಸಮಿತಿ ಹಾಗೂ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಹಾಗೂ ಬಿಇಎಸ್ಎಂ ಕಲಾ ಮತ್ತು ವಾಣಿಜ್ಯ ವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಹಾಗೂ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಏಡ್ಸ್ ಮುಕ್ತ ಸಮಾಜವನ್ನು ಎಲ್ಲರೂ ಸೇರಿ ನಿರ್ಮಿಸೋಣ, ಅದರಲ್ಲೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶರಾದ ರಾಜೇಶ್ವರಿ ಪುರಾಣಿಕ ಮಾತನಾಡಿ, ಅಸುರಕ್ಷಿತ ಲೈಂಗಿಕಕ್ರಿಯೆ ಇದಕ್ಕೆ ಮೂಲ ಕಾರಣವಾಗಿದ್ದು ಹದಿಹರೆಯದ ಯುವತಿಯರಲ್ಲಿ ಇದು ಹೆಚ್ಚಾಗಿ ಕಾಣುತ್ತಿದೆ, ಪ್ರಸಕ್ತ ಸನ್ನಿವೇಶದಲ್ಲಿ ಶೋಷಿತರಿಗೆ ತಿರಸ್ಕೃತರಿಗೆ ಆಶ್ರಯ ನೀಡಬೇಕಾಗಿದೆ, ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಶಿಕ್ಷೆ ನೀಡುವುದಕ್ಕಿಂತ ಅವರನ್ನು ಅಪ್ಪಿಕೊಳ್ಳುವಂತಹ ಕೆಲಸವಾಗಬೇಕಾಗಿದೆ ಎಂದರು.ಜೀವನಕ್ಕೆ ಭರವಸೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎನ್.ಎಸ್. ಪ್ರಶಾಂತ್ ಮಾತನಾಡಿ, ಏಡ್ಸ್ ಸೋಂಕಿತ ಮಹಿಳೆಯರ ಬದುಕನ್ನು ಕಟ್ಟಿಕೊಳ್ಳಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸೋಂಕಿತರು ಅತ್ಯುತ್ತಮ ಜೀವನ ನಡೆಸಲು ಅಗತ್ಯವಾದ ಕ್ರಮಗಳನ್ನು ಆರೋಗ್ಯ ಇಲಾಖೆಯು ಕ್ರಮ ಕೈಗೊಳ್ಳಬೇಕಾಗಿದೆ ಎಂದರು,

ಈ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ, ಸಿಪಿಐ ಮಾರ್ತಾಂಡಪ್ಪ ಚಿಕ್ಕಣ್ಣನವರ, ಪಿಎಸ್ಐ ಭಾರತಿ ಕುರಿ, ತಾಲೂಕು ವೈದ್ಯಾಧಿಕಾರಿ ಡಾ.ಕಾಂತೇಶ್ ಭಜಂತ್ರಿ, ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಡಾ.ಸಂತೋಷ್ ಹಾಲುಂಡಿ, ಆರೋಗ್ಯ ಶಿಕ್ಷಣಾಧಿಕಾರಿ ವಿ.ಮಮತಾ, ಹಿರಿಯ ಮೇಲ್ವಿಚಾರಕ ಪ್ರಶಾಂತ ನವಲೆ, ಆಪ್ತ ಸಮಾಲೋಚಕ ಡಿ.ಎನ್. ಚಂದ್ರಶೇಖರ, ಬಿಈಎಸ್ ಎಂ ಕಾಲೇಜು ಉಪನ್ಯಾಸಕರಾದ ಡಾ.ಸುರೇಶಕುಮಾರ ಪಾಂಗಿ, ಡಾ.ಪ್ರಭು ದೊಡ್ಮನಿ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.