ಕನ್ನಡಪ್ರಭ ವಾರ್ತೆ ಮಂಡ್ಯ
ರಾಮಾಯಣ ಎಂದರೆ ಕೇವಲ ಶ್ರೀರಾಮನ ಕಥೆಯಲ್ಲ, ಅದು ಕುಟುಂಬ, ಪ್ರೀತಿ, ತ್ಯಾಗ, ಕರ್ತವ್ಯ, ನಂಬಿಕೆ ಮತ್ತು ಮಾನವೀಯ ಸಂಬಂಧಗಳ ಮಹಾಕಾವ್ಯ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದರು.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ಜಯಂತಿ ಕೇವಲ ಒಬ್ಬ ಮಹರ್ಷಿಯ ಜಯಂತಿಯ ಆಚರಣೆಯಲ್ಲ. ನಮ್ಮ ಬದುಕಿಗೆ ದಾರಿ ತೋರಿಸುವ ರಾಮಾಯಣದ ಮೌಲ್ಯಗಳನ್ನು ನೆನಪಿಸಿಕೊಳ್ಳುವ ಮಹತ್ವದ ದಿನ. ಮಹರ್ಷಿ ವಾಲ್ಮೀಕಿಯವರು ರಾಮಾಯಣದ ಮೂಲಕ ಸಾವಿರಾರು ವರ್ಷಗಳ ಹಿಂದೆಯೇ ಮಾನವ ಸಂಬಂಧಗಳ ಮಹತ್ವವನ್ನು ಜಗತ್ತಿಗೆ ಸಾರಿದರು ಎಂದರು.
ತ್ರೇತಾಯುಗದಲ್ಲಿ ರಚಿಸಿದ ರಾಮಾಯಣ ಯುಗಯುಗಗಳಿಂದ ಯುಗಾಂತರವಾಗಿ ಮನೆ-ಮನದಲ್ಲಿ ಉಳಿದುಕೊಂಡಿದೆ. ನಾವು ಎಐ ಯುಗದಲ್ಲಿ ಬದುಕುತ್ತಿದ್ದೇವೆ. ತಂತ್ರಜ್ಞಾನದಲ್ಲಿ ಮುಂದುವರಿದಿದ್ದೇವೆ. ಆದರೆ, ನಮ್ನ ಕೌಟುಂಬಿಕ ಸಂಬಂಧಗಳು ಎಷ್ಟು ಗಟ್ಟಿಯಾಗಿದೆ? ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ 2.50 ಲಕ್ಷಕ್ಕೂ ಹೆಚ್ಚು ವಿಚ್ಚೇದನ ಅರ್ಜಿಗಳು ಸಲ್ಲಿಕೆಯಾಗಿವೆ. ಮಂಡ್ಯದಲ್ಲಿ 680ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದರೆ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.ಶ್ರೀರಾಮನ ಆದರ್ಶವನ್ನು ಹೇಳುವಾಗ ಕರ್ತವ್ಯ, ಸತ್ಯ, ನಿಷ್ಠೆ ಮತ್ತು ತ್ಯಾಗವನ್ನು ನೆನಪಿಸಿಕೊಳ್ಳಬೇಕು. ಉದ್ಯೋಗ, ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದುದು ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ. ಶಾಲಾ-ಕಾಲೇಜುಗಳಲ್ಲಿ ಜೀವನ ಕೌಶಲ್ಯ, ಭಾವನಾತ್ಮಕ ಪ್ರಬುದ್ಧತೆ, ವೈವಾಹಿಕ ಜೀವನದ ಜವಾಬ್ದಾರಿ ಮತ್ತು ಲಿಂಗ ಸಮಾನತೆಯ ಕುರಿತು ಅರಿವು ಮೂಡಿಸಬೇಕು ಎಂದರು.
ಜಯಂತಿ ಕೇವಲ ಮೆರವಣಿಗೆ, ಪೂಜೆ ಮತ್ತು ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಮಹರ್ಷಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾನತೆ, ಶಿಕ್ಷಣ, ಸತ್ಯ ಮತ್ತು ಮಾನವೀಯತೆಯ ಸಮಾಜ ನಿರ್ಮಿಸಲು ಸಂಕಲ್ಪ ಮಾಡಬೇಕು ಎಂದರು.
ಮಾನವನ ಜೀವನ ಸತ್ಯ, ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂಬುದನ್ನು ರಾಮ-ಸೀತೆಯಲ್ಲಿ ಕಾಣಬಹುದು. ಶಿಕ್ಷಕರು ಮಕ್ಕಳಿಗೆ ಬದುಕಿನ ಪಾಠ ಹೇಳಿಕೊಡಬೇಕು. ಸಂಸ್ಕಾರ ಕಲಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬ ನೀತಿ ಪಾಠ ರಾಮಾಯಣ, ಭಗವದ್ಗೀತೆಯಲ್ಲಿ ಅಡಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಪಿ.ಸಿ.ಶಿವಾನಂದಮೂರ್ತಿ, ಎಎಸ್ಪಿ ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ಕವಿ ಮೃತ್ಯುಂಜಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.