ಸಾರಾಂಶ
ಹುಬ್ಬಳ್ಳಿ: ನೇರ ಹಾಗೂ ಸ್ಪಷ್ಟ ನಿಲುವಿನ ಚುಟುಕು ಸಾಹಿತ್ಯದಿಂದ ಮಾತ್ರ ಮುರಿದ ಮನಸುಗಳ ಕಟ್ಟುವ ಕಾರ್ಯ ಸಾಧ್ಯವೆಂದು ಮೂರುಸಾವಿರಮಠ ಡಾ. ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಹೇಳಿದರು.
ಸ್ಥಳೀಯ ಮೂರುಸಾವಿರಮಠ ಡಾ. ಮೂಜಗಂ ಸಭಾಂಗಣದಲ್ಲಿ ಭಾನುವಾರ ಜರುಗಿದ ಲೇಖಕಿಯರ ರಾಜ್ಯದ ಮಟ್ಟದ 9ನೇ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಬಸವಾದಿ ಶರಣರು ಕಂಡ ಕನಸನ್ನು ಕಚುಸಾಪ ಅಕ್ಷರಶಃ ಪಾಲಿಸುತ್ತಿದ್ದು ಕಳೆದ ಮೂರುವರ್ಷಗಳಲ್ಲಿ ಅದು ಅಂತರ್‌ರಾಜ್ಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ ಎಂದರು.
ಹಿರಿಯ ಸಂಶೋಧಕರಾದ ಹನುಮಾಕ್ಷಿ ಗೋಗಿ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆಮಾಡಿ ಸಮಸ್ತ ಮಹಿಳಾ ಕುಲವನ್ನು ಗೌರವಿಸಿದೆ. ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಮಹತ್ಕಾರ್ಯವನ್ನು ಡಾ. ಗೋಗಿ ಮಾಡಿದ್ದಾರೆಂದು ಅಭಿನಂದಿಸಿದರು.ತಮಗೆ ಕಚುಸಾಪ ಪ್ರೀತಿ, ಗೌರವದಿಂದ ನೀಡಿದ "ಭಾವೈಕ್ಯತಾ ಮೂರ್ತಿ " ಪ್ರಶಸ್ತಿಯನ್ನು ಹೃದಯತುಂಬಿ ಸ್ವೀಕರಿಸುವುದಾಗಿ ತಿಳಿಸಿದರು.
ಸರ್ವಾಧ್ಯಕ್ಷರಾದ ಡಾ. ಹನುಮಾಕ್ಷಿ ಗೋಗಿ ಮಾತನಾಡಿ, ಬೃಹತ್ ಗೃಂಥಗಳ ಸಾರವನ್ನು ಚುಟುಕು ಸಾಹಿತ್ಯ ನಾಲ್ಕು ಸಾಲುಗಳಲ್ಲಿ ಬಿಂಬಿಸುವ ಮೂಲಕ ಜನಪರ ವಿಶ್ವಾಸವನ್ನು ಗಳಿಸಿದೆ. ಮಹಿಳೆಯರ ಸ್ಥಾನಮಾನ ಕಾಪಾಡುವ ಕಾರ್ಯ ಸಮಾಜ ಹಾಗೂ ಸರ್ಕಾರದಿಂದ ನಡೆಯಬೇಕಿದೆ ಎಂದರು.ಶಿಕ್ಷಣ ತಜ್ಞ ಡಾ. ಆರ್.ಎಂ. ಕುಬೇರಪ್ಪ ಮಾತನಾಡಿ, ಸಾಹಿತ್ಯ ಜನಸಾಮಾನ್ಯರ ಧ್ವನಿಯಾಗಿ ಕಾರ್ಯ ಮಾಡುವ ಅಗತ್ಯವಿದೆ. ಅಂದು ಧಾರವಾಡದ ಗೆಳೆಯರ ಬಳಗ ಜನಮಾನಸದಲ್ಲಿ ಸಾಹಿತ್ಯದ ಬೇರು ನಾಟುವಂತೆ ಮಾಡಿತು. ಅದೇ ಹಾದಿಯಲ್ಲಿ ಕಚುಸಾಪ ದಿಟ್ಟ ಹೆಜ್ಜೆ ಇರಿಸಿ ಮುನ್ನಡೆಯುತ್ತಿದೆ ಎಂದರು.
ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಅಭಿನಂದನಾ ಭಾಷಣ ಮಾಡಿ, ಹನುಮಾಕ್ಷಿ ಗೋಗಿ ಅವರ ಸಾಧನೆಯನ್ನು ಗುರುತಿಸಿ ಕಚುಸಾಪ ಸರ್ವಾಧ್ಯಕ್ಷರನ್ನಾಗಿ ಗೌರವಿಸಿದ್ದು ಸ್ವಾಗತಾರ್ಹ ಎಂದರು.ಗಣ್ಯರಾದ ಡಾ. ಶಾಂತಣ್ಣ ಕಡಿವಾಲ, ಡಾ. ಶರಣಪ್ಪ ಕೊಟಗಿ, ವಿ.ಜಿ. ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ "ಜಯಶ್ರೀ ಗೌರವ ಸಮ್ಮಾನ " ಕ್ಕೆ ಭಾಜನರಾದ ಮಂಜುಳಾ ಕುಲಕರ್ಣಿ, "ವಿಶಾಲಾಕ್ಷಿ ಪ್ರಶಸ್ತಿ ಗಳಿಸಿದ ಪ್ರಭಾವತಿ ಮುತ್ತಿನ ಅವರನ್ನು ಸರ್ವಾಧ್ಯಕ್ಷ ಡಾ. ಗೋಗಿ ದಂಪತಿಯನ್ನು "ಚುಟುಕು ಚಿನ್ಮಯಿ " ಪ್ರಶಸ್ತಿ ನೀಡಿ ಗೌರವಿಸಿತು.
ಮಹಿಳಾ ಘಟಕದ ವಂದನಾ ರಮೇಶ ನಾಡಗೀತೆ ಹಾಡಿದರು. ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಸ್ವಾಗತಿಸಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಮಂಗಳೂರು ಘಟಕದ ರೇಖಾ ಸುದೇಶರಾವ್ ಹಾಗೂ ಭುವನೇಶ್ವರಿ ಅಂಗಡಿ ನಿರೂಪಿಸಿದರು.ಜನಪದ ಹಿರಿಮೆ ಮೆರೆದ ತಂಡಗಳು: ಕಾರ್ಯಕ್ರಮದಲ್ಲಿ ಪಂಚಮಿ ಹಾಡಿನ ಸ್ಫರ್ಧೆ ಜರುಗಿತು. ಏಳು ತಂಡಗಳು ಪಾಲ್ಗೊಂಡು ಜನಪದ ಹಿರಿಮೆ ಮೆರೆದವು. ಡಾ. ವೆಂಕಟೇಶ್ ಕುಲಕರ್ಣಿ, ರೇಖಾ ಸುದೇಶರಾವ್, ಎಸ್.ಐ. ನೇಕಾರ ನಿರ್ಣಾಯಕರಾಗಿದ್ದರು. ನಂತರ ಪದ್ಮಜಾ ಉಮರ್ಜಿ ಅಧ್ಯಕ್ಷತೆಯಲ್ಲಿ ಹಿರಿಯ ಚಿಂತಕಿ ರೂಪಾ ಜೋಶಿ, ಮಹಿಳಾ ಶೋಷಣೆ- ಜಾಗೃತಿ, ಶಿರಸಿಯ ದಾಕ್ಷಾಯಿಣಿ ಪಿ.ಸಿ. ಮಹಿಳಾ ಆಂದೋಲನ, ಡಾ. ರತ್ನಾ ಐರಸಂಗ ಕನ್ನಡ ಮಾಧ್ಯಮ ಹೊಣೆಗಾರಿಕೆ ಕುರಿತು ಉಪನ್ಯಾಸ ನೀಡಿದರು. ಉಡುಪಿಯ ಪ್ರೇಮಾ ಬಿರಾದಾರ ನಿರೂಪಿಸಿದರು.
ಸಂಜೆ ಶಿರಸಿಯ ಗಣಪತಿ ಭಟ್ ವರ್ಗಾಸರ ಅಧ್ಯಕ್ಷತೆಯಲ್ಲಿ ಚುಟುಕು ಗೋಷ್ಠಿ ಜರುಗಿತು. ಹಾಸನದ ಕವಿ ಕುಮಾರ ಚಲುವಾದಿ ಆಶಯ ಭಾಷಣ ಮಾಡಿದರು. ಕುಮುದಾ ದೇಶಪಾಂಡೆ, ವಿಜಯಲಕ್ಷ್ಮೀ ಕೊಳ್ಳಿ, ರೇಣುಕಾ ದೇಶಪಾಂಡೆ, ಶ್ರೀಮತಿ ಚಲುವಾದಿ ಸೇರಿದಂತೆ ಹತ್ತುಜನ ಕವನ ವಾಚಿಸಿದರು. ವಂದನಾ ರಮೇಶ ನಿರೂಪಿಸಿದರು.