ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಬದ್ಧ

| Published : Oct 22 2023, 01:00 AM IST

ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಬದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಅಭಿವೃದ್ಧಿ ಕಾರ್ಯಗಳೊಂದಿಗೆ ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರ ಕ್ರಮವಹಿಸಲಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಅಭಿವೃದ್ಧಿ ಕಾರ್ಯಗಳೊಂದಿಗೆ ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರ ಕ್ರಮವಹಿಸಲಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಇಲ್ಲಿಯ ರಪಾಟಿ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘ ಶನಿವಾರ ಆಯೋಜಿಸಿದ್ದ ನೂತನ ಶಾಸಕರ ಮತ್ತು ಸಚಿವರ ಅಭಿನಂದನಾ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಾಮಾನ್ಯಸಭೆ ಉದ್ಘಾಟಿಸಿ ಮಾತನಾಡಿದರು.

ನೌಕರ ಸಂಘದ ಜಿಲ್ಲಾ ಘಟಕ ಸಲ್ಲಿಸಿರುವ ಬೇಡಿಕೆಗಳಿಗೆ ತಾವು ನೆರವು ನೀಡುವುದಾಗಿ ಮತ್ತು ಸಭಾಗಂಣ ನಿರ್ಮಾಣಕ್ಕೆ ಅನುದಾನ ಕಲ್ಪಿಸುವುದಾಗಿ ತಿಳಿಸಿದರು. ಎನ್‌ಪಿಎಸ್ ರದ್ಧತಿ ಬಗ್ಗೆ ಸರ್ಕಾರಕ್ಕೆ ತಮ್ಮ ಮನವಿ ತಲುಪಿಸುವುದಾಗಿ ಸಚಿವರು ಹೇಳಿದರು.

ಆಡಳಿತ ವ್ಯವಸ್ಥೆಯಲ್ಲಿನ ಲೋಪ-ದೋಷಗಳನ್ನು ಸರಿಪಡಿಸಲು ಸರ್ಕಾರಿ ನೌಕರರ ಸಹಕಾರ ಅಗತ್ಯವಿದೆ. ರಾಜ್ಯ ಸರ್ಕಾರ ರಾಷ್ಟ್ರಕ್ಕೆ ಮಾದರಿಯಾಗುವ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳ್ಳಿಸಿದೆ. ಶಕ್ತಿ ಯೋಜನೆ ಜಾರಿಯಾಗಿದ್ದರಿಂದ ಇಂದು 1.16 ಕೋಟಿ ಜನ ಪ್ರಯಾಣ ಮಾಡುತ್ತಿದ್ದಾರೆ. ಇಂತಹ ಸಾಧನೆಗೆ ಸರ್ವರ ಸಹಕಾರವೂ ಮುಖ್ಯ ಎಂದ ಅವರು, ಹಸಿವಿನ ಸೂಚ್ಯಂಕದಲ್ಲಿ ನಮ್ಮ ದೇಶ ಕೆಳಗೆ ಬರುತ್ತಿದೆ. ಜಿಡಿಪಿ ಬೆಳವಿಮೆಗೆ ಕಾಣುತ್ತಿದೆ. ಆದರೆ, ಅದು ಸಮಾಜದಲ್ಲಿ ಕಾಣುತ್ತಿಲ್ಲ. ಸರ್ಕಾರಿ ನೌಕರರು ಸೇರಿದಂತೆ ಎಲ್ಲರೂ ಬದ್ಧತೆ, ಪಾರದರ್ಶಕತೆಯಿಂದ ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದ್ದರಿಂದ ನೌಕರರು ಉದಾರತೆಯಿಂದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನೌಕರರ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಿ, ಕ್ರಮವಹಿಸಬೇಕು. ಹೊಸ ಪಿಂಚಣಿ ರದ್ದು ಪಡಿಸುವ ಕುರಿತು ಇಂದಿನ ಸರ್ಕಾರದ ಮುಖ್ಯಸ್ಥರು, ಸಚಿವರು ಈ ಹಿಂದೆ ತಮ್ಮ ಸಹಮತ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ. ಈಗ ಈಡೆರಿಸುವ ಕೆಲಸ ಆಗಬೇಕು ಎಂದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಎನ್.ಪಿ.ಎಸ್. ರದ್ದುಗೊಳೊಸುವ ಭರವಸೆಯನ್ನು ನೀಡಿದೆ. ಅದನ್ನು ಈಡೇರಿಸುವ ಕಾಲ ಬಂದಿದೆ. ಉಪ ಮುಖ್ಯಮಂತ್ರಿ ಸದನದಲ್ಲಿ ನೀಡಿದ ಮಾತು ನಿಜಗೊಳಿಸಬೇಕು ಎಂದರು.

ಧಾರವಾಡದಲ್ಲಿ ಸರ್ಕಾರಿ ನೌಕರ ಸಂಘದ ನೂತನ ಸಭಾಭವನ, ಅಡಿಟೋರಿಯಂ ನಿರ್ಮಾಣಕ್ಕೆ ಶಾಸಕರ ಅನುದಾನ ನೀಡುವದಾಗಿ ಭರವಸೆ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಸಂಘ ಸರ್ಕಾರಿ ನೌಕರ ಹಿತ ಕಾಯಲು ಅನೇಕ ಜನಪರ ಕಾರ್ಯಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿದೆ. ಸರ್ಕಾರದೊಂದಿಗೆ ಸಂಘರ್ಷ ಮಾಡುವ ಪ್ರಶ್ನೆ ಇಲ್ಲ. ಸರ್ಕಾರ ನೌಕರರ ನ್ಯಾಯಯುತ ಬೇಡಿಕೆಗಳನ್ನು ಸಹನೆಯಿಂದ ಪರಿಶೀಲಿಸಿ, ಈಡೇರಿಸಬೇಕು ಎಂದರು. ಎನ್.ಪಿ.ಎಸ್. ರದ್ದು ಮಾಡುವ ಕುರಿತು ಸಂಘ ಸರ್ಕಾರ ಮಟ್ಟದಲ್ಲಿ ಒತ್ತಾಯ ಮಾಡಿ, ಹೋರಾಟಕ್ಕೆ ಸಿದ್ಧವಾಗಿದೆ. ರಾಜ್ಯ ಸರ್ಕಾರ ಓಪಿಎಸ್ ಜಾರಿಗೊಳಿಸಬೇಕು. ನಗದು ರಹಿತ ಆರೋಗ್ಯ ವಿಮೆ ಜಾರಿ ಆಗಬೇಕು ಎಂದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಎನ್‌.ಎಚ್‌. ಕೋನರಡ್ಡಿ ಹಾಗೂ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಮಾತನಾಡಿದರು. ಕಾರ್ಯದರ್ಶಿ ಮಂಜುನಾಥ ಯಡಹಳ್ಳಿ ಸ್ವಾಗತಿಸಿದರು. ಮಾಹಿತಿ ಆಯೋಗದ ಮಾಜಿ ಮಾಹಿತಿ ಆಯುಕ್ತ ಡಾ. ಶೇಖರ ಡಿ. ಸಜ್ಜನರ, ಮಹಾನಗರ ಪಾಲಿಕೆ ಸದಸ್ಯ ಸುರೇಶ ಬೇದರೆ, ನೌಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಎಂ.ವಿ. ರುದ್ರಪ್ಪ, ಎಸ್. ಬಸವರಾಜು, ದೇವಿದಾಸ ಶಾಂತಿಕರ, ಮಲ್ಲಿಕಾರ್ಜುನ ಸೊಲಗಿ, ರಾಜಶೇಖರ ಬಾಣದ, ಗಿರೀಶ ಚೌಡಕಿ ಮತ್ತಿತರರು ಇದ್ದರು. ನಂತರ ಇಲಾಖಾ ವಿಚಾರಣೆಗಳ ಕಾನೂನು ಸಲಹೆಗಾರರಾದ ಬಿ.ನಾಗೇಂದ್ರ ಕುಮಾರ ಸಿಸಿಎ ನಿಯಮಾವಳಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.