ಸಾರಾಂಶ
ಬಂಗಾರಪೇಟೆ: ದೇವಸ್ಥಾನ ಮತ್ತು ಮನೆಗಳಲ್ಲಿ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಕಾಮಸಮುದ್ರ ಪೊಲೀಸರು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಕಾಮಸಮುದ್ರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ದೋಣಿಮಡಗು ಗ್ರಾಮದ ಸತೀಶ್ ರೆಡ್ಡಿ ಮತ್ತು ಸೀನಪ್ಪ ರವರ ಮನೆಗಳಲ್ಲಿ, ಕುಂದರಸನಹಳ್ಳಿ ಗ್ರಾಮದ ಶ್ರೀ ಕಾಳಿಕಾಂಭೆ ದೇವಸ್ಥಾನದಲ್ಲಿ, ಕೊಂಗರಹಳ್ಳಿ ಗ್ರಾಮದ ಮುಭಾರಕ್, ವೆಂಕಟೇಶಪ್ಪ, ಮುನಿಯಮ್ಮ, ಶೇಕ್ ಲಿಯಾಕತ್, ಗೌರಮ್ಮ ರವರ ಮನೆಗಳಲ್ಲಿ ಇತ್ತೀಚೆಗೆ ಕಳ್ಳತನವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆಮಾಡುವ ಸಲುವಾಗಿ, ಕೆ.ಜಿ.ಎಫ್ ಎಸ್ಪಿ ಮತ್ತು ಕಾಮಸಮುದ್ರ ವೃತ್ತ ನಿರೀಕ್ಷಕ ಜಿ.ಸಿ ನಾರಾಯಣಸ್ವಾಮಿ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು. ತಂಡವು ಕಾರ್ಯಾಚರಣೆ ನಡೆಸಿ ಆಂಧ್ರದ ನಿಮ್ಮಕಂಪಲ್ಲಿ ಗ್ರಾಮದ ಆರೋಪಿ ಕೆ.ಚಿನ್ನಸ್ವಾಮಿ (೫೭), ತಮಿಳುನಾಡಿನ ಮೆಟ್ಟೂರು ಗ್ರಾಮದ ಮಣಿ (೫೫)ರನ್ನು ದಸ್ತಗಿರಿ ಮಾಡಿ, ಅವರಿಂದ ಸುಮಾರು ೩.೪೦ ಲಕ್ಷ ಮೌಲ್ಯದ ೩೪ ಗ್ರಾಂ ತೂಕದ ಚಿನ್ನಾಭರಣಗಳು, ಸುಮಾರು ೩೮ ಸಾವಿರ ಮೌಲ್ಯದ ೩೮೦ ಗ್ರಾಂ ತೂಕದ ಬೆಳ್ಳಿ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪಿ.ಎಸ್.ಐ ಕಿರಣ್ ಕುಮಾರ್ ಬಿ.ವಿ., ಸಿಬ್ಬಂದಿ ಮಂಜುನಾಥರೆಡ್ಡಿ, ಮುನಾವರ್ ಪಾಷ, ರಾಮಕೃಷ್ಣರೆಡ್ಡಿ, ರಾಮರಾವ್, ಮಂಜುನಾಥ, ಮಾರ್ಕೋಂಡ, ಲಕ್ಷ್ಮಣ ತೇಲಿ ಹಾಗೂ ಚಾಲಕ ಗುರುಮೂರ್ತಿ ರವರ ಕಾರ್ಯವೈಖರಿಗೆ ಎಸ್ಪಿ ಶಿವಾಂಶು ರಜಪೂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.