ಶಿರಾ ಜಿಲ್ಲಾ ಕೇಂದ್ರವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ

| Published : Jul 30 2024, 12:43 AM IST

ಶಿರಾ ಜಿಲ್ಲಾ ಕೇಂದ್ರವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಟಿ.ಬಿ.ಜಯಚಂದ್ರರ ೭೫ ವರ್ಷಗಳ ಸಾರ್ಥಕ ಸೇವೆಗೆ ಅಭಿಮಾನಿಗಳಿಂದ ಅದ್ಧೂರಿ ಜನ್ಮದಿನ ಆಚರಣೆ

ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿ ಮಾಡುತ್ತಿದ್ದೇನೆ. ಶಿರಾ ಇಂದು ಅಭಿವೃದ್ಧಿಯಲ್ಲಿ ನಾಗಾಲೋಟದಲ್ಲಿ ಸಾಗುತ್ತಿದೆ. ಶಿರಾ ಜಿಲ್ಲಾ ಕೇಂದ್ರ ಆಗುವುದಕ್ಕೆ ಎಲ್ಲಾ ರೀತಿಯ ಅರ್ಹತೆ ಇದ್ದು, ಜಿಲ್ಲಾ ಕೇಂದ್ರ ಮಾಡುವವರೆಗೂ ನಾನು ವಿಶ್ರಮಿಸುವುದಿಲ್ಲ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ.ಜಯಚಂದ್ರ ಹೇಳಿದರು. ಅವರು ನಗರದ ಅನ್ನಪೂಣೇಶ್ವರಿ ಕಲ್ಯಾಣ ಮಂಟಪದಲ್ಲಿ ಟಿಬಿಜೆ ಅಭಿಮಾನಿಗಳ ಬಳಗದ ವತಿಯಿಂದ ಡಾ.ಟಿ.ಬಿ.ಜಯಚಂದ್ರ ಅವರ ೭೫ನೇ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡು ಮಾತನಾಡಿದರು. ನನ್ನ ೫೦ ವರ್ಷದ ರಾಜಕೀಯ ಜೀವನದಲ್ಲಿ ಜನಸೇವೆಯೇ ಜನಾರ್ಧನಸೇವೆ ಎಂದು ನಂಬಿ ಕೆಲಸ ಮಾಡಿದ್ದೇನೆ. ಆದ್ದರಿಂದ ಜನ ನನ್ನನ್ನು ೭ನೇ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಜನರ ಅಭಿಮಾನಿಗಳ ಅಭಿಮಾನಕ್ಕೆ ಶರಣಾಗಿದ್ದೇನೆ. ಮುಂದೆ ಶಿರಾ ತಾಲೂಕು ನಾಗಲೋಟದಲ್ಲಿ ಅಭಿವೃದ್ಧಿಯಾಗಲಿದೆ. ಕರ್ನಾಟಕದ ಭೂಪಟದಲ್ಲಿ ಶಿರಾ ತಾಲೂಕನ್ನು ಮಿಂಚುವಂತೆ ಮಾಡುತ್ತೇನೆ. ನನ್ನ ೭೫ ವರ್ಷದ ಜೀವನದಲ್ಲಿ ಎಂದು ಕಾಂಗ್ರೆಸ್ ಪಕ್ಷ ಸೇರಿದೇನೋ ಅಂದಿನಿಂದ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ ಇನ್ನೊಂದು ಪಕ್ಷಕ್ಕೆ ಹೋಗಿಲ್ಲ. ಗೆಲ್ಲಲಿ ಸೋಲಲಿ ಒಂದೇ ಸಿದ್ದಾಂತದಲ್ಲಿ ಬಂದಿದ್ದೇನೆ. ಜನರ ಮಧ್ಯೆ ಇದ್ದು ಅವರ ಸೇವೆ ಮಾಡುವುದರಲ್ಲೇ ನನಗೆ ತೃಪ್ತಿ ಇದೆ ಎಂದರು. ತ್ರಿವೇಣ ಸಂಗಮ ಮಾಡಿಯೇ ತೀರುತ್ತೇನೆ

ಶಿರಾ ತಾಲ್ಲೂಗೆ ಈಗಾಗಲೇ ಹೇಮಾವತಿ ನೀರು ೨೩ ವರ್ಷದಿಂದ ತಾಲೂಕಿಗೆ ಹರಿಯುತ್ತಿದೆ. ಭದ್ರಾ ಮೇಲ್ದಂಡೆ ಕಾಮಗಾರಿ ನಡೆಯುತ್ತಿದೆ. ಎತ್ತಿನ ಹೊಳೆ ಕಾಮಗಾರಿಯೂ ನಡೆಯುತ್ತಿದೆ. ಶೀಘ್ರದಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಜೊತೆಗೆ ಕೂಡಿಕೊಂಡು ದೆಹಲಿಗೆ ತೆರಳಿ ಕೇಂದ್ರ ಭದ್ರಾ ಮೇಲ್ದಂಡೆ ಯೋಜನೆಗೆ ಸರ್ಕಾರದಿಂದ ಬರಬೇಕಾದ ಅನುದಾನವನ್ನು ಕೇಳಲು ಹೋಗುತ್ತಿದ್ದೇವೆ. ನನ್ನ ಮುಂದಿನ ಅಧಿಕಾರದ ಅವಧಿಯಲ್ಲಿ ಭದ್ರ ಹಾಗೂ ಎತ್ತಿನ ಹೊಳೆ ಕಾಮಗಾರಿಗಳನ್ನು ಮುಗಿಸಿ ತಾಲೂಕಿಗೆ ನೀರು ಹರಿಸಿ ಶಿರಾ ತಾಲೂಕನ್ನು ತ್ರಿವೇಣಿ ಸಂಗಮ ಮಾಡಿಯೇ ತೀರುತ್ತೇನೆ ಎಂದು ಡಾ. ಟಿ.ಬಿ.ಜಯಚಂದ್ರ ಹೇಳಿದರು.ಅದ್ಧೂರಿ ಹುಟ್ಟುಹಬ್ಬ ಆಚರಣೆ

ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ.ಜಯಚಂದ್ರ ಅವರ ಹುಟ್ಟು ಹಬ್ಬವನ್ನು ಟಿಬಿಜೆ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡಿದರು. ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ವಿತರಿಸಿದರು. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್ ಬೇಗಂಮೊಹಲ್ಲಾ ಉರ್ದು ಶಾಲೆಯ ಆವರಣದಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ನೀರಿನ ಕ್ಯಾನ್ಗಳ ವಿತರಣೆ ಹಾಗೂ ಶಾಲೆಯ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ರಕ್ತದಾನ ಶಿಬಿರ ಏರ್ಪಡಿಸಿದ್ದರು. ಕನಕ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ರಂಗನಾಥ್ ಅವರು ಜಿಕೆಎಂಎಚ್ಪಿಬಿಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಬುಕ್‌ ವಿತರಿಸಿದರು. ವಿದ್ಯಾನಗರದಲ್ಲಿ ಕುವೆಂಪು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಯಿತು. ನಗರದ ಅಂಬೇಡ್ಕರ್ ಸರ್ಕಲ್‌ ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದರು. ಅಭಿಮಾನಿಗಳು ಡಾ.ಟಿಬಿ ಜಯಚಂದ್ರ ಅವರಿಗೆ ಹೂವಿನ ಮಳೆ ಸುರಿದರು.

ಈ ಸಂದರ್ಭದಲ್ಲಿ ನಿರ್ಮಲ ಟಿ.ಬಿ.ಜಯಚಂದ್ರ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಪಿ.ಶಿವಶಂಕರಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಧಾನ್ ನಾಗರಾಜ್, ಕನಕ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ರಂಗನಾಥ್, ಮಾಜಿ ಎಪಿಎಂಸಿ ಅಧ್ಯಕ್ಷ ಎಂ.ಆರ್.ಶಶಿಧರ ಗೌಡ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ಉಪಾಧ್ಯಕ್ಷ ರೂಪೇಶ್ ಕೃಷ್ಣಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಎನ್.ಸುನಿಲ್, ಮಹೇಂದ್ರ ಗೌಡ, ನಗರಸಭೆ ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ನೂರುದ್ದೀನ್, ಮಂಜುನಾಥ್, ಜಯಲಕ್ಷ್ಮಿ, ನಗರಸಭೆ ಸದಸ್ಯರಾದ ಬಿ.ಎಂ.ರಾಧಾಕೃಷ್ಣ, ಮಹೇಶ್, ದೃವಕುಮಾರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಗುರುಮೂರ್ತಿ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮಣಿ, ಮುಖಂಡರಾದ ಕೊಟ್ಟ ಶಂಕರ್, ಕೋಟೆ ಲೋಕೇಶ್, ಅಜಯ ಕುಮಾರ್ ಗಾಲಿ ಸೇರಿದಂತೆ ಹಲವರು ಹಾಜರಿದ್ದರು.