ಮೀಸಲಾತಿಯಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಗಳು ದಲಿತರ ಮನೆ ಕಾಯಬೇಕೆಂದು ಹೇಳಿದ್ದರು. ಆದರೆ ಇಂದು ಅದಕ್ಕೆ ವಿರುದ್ಧವಾಗಿ ತಮ್ಮ ಆಸ್ತಿ ಹಾಗೂ ಕುರ್ಚಿ ರಕ್ಷಣೆಗಾಗಿ ಮಾತ್ರ ಆಯ್ಕೆಯಾಗುವಂತಾಗಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ನೀಡಿರುವ ಮೀಸಲಾತಿ ಅಡಿಯಲ್ಲಿ ಅನುಕೂಲ ಪಡೆದು ಡಾಕ್ಟರ್‌ಗಳು ಇಂಜಿನಿಯರ್‌ಗಳು, ವಕೀಲರು ಸೇರಿದಂತೆ ಸರ್ಕಾರಿ ಹುದ್ದೆಗಳಲ್ಲಿ ಅಲಂಕರಿಸಿರುವವರು ಸಮುದಾಯದ ಏಳಿಗೆಗಾಗಿ ಶ್ರಮಿಸದೆ ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಅಧಿಕಾರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದಲಿತ ಸಮಾಜ ಸೇವೆ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕು, ತಟ್ನಹಳ್ಳಿ ಮಜರಾಮಲಿಂಗಾಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಸಾವಿತ್ರಿ ಬಾಪುಲೆ, ಭಗತ್ ಸಿಂಗ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಿಸಿ ಮಾತನಾಡಿ, ಮೀಸಲಾತಿಯಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಗಳು ದಲಿತರ ಮನೆ ಕಾಯಬೇಕೆಂದು ಹೇಳಿದ್ದರು. ಆದರೆ ಇಂದು ಅದಕ್ಕೆ ವಿರುದ್ಧವಾಗಿ ತಮ್ಮ ಆಸ್ತಿ ಹಾಗೂ ಕುರ್ಚಿ ರಕ್ಷಣೆಗಾಗಿ ಮಾತ್ರ ಆಯ್ಕೆಯಾಗುವಂತಾಗಿದೆ ಎಂದು ಕಿಡಿಕಾರಿದರು.ಅಂಬೇಡ್ಕರ್ ಸಮಾಜದಲ್ಲಿ ಎಲ್ಲರೂ ಸಮಾನರಾಗಿ ಬದುಕಬೇಕೆಂದು ಸಂವಿಧಾನ ರಚಿಸಿದರು. ಆದರೆ ಇಂದು ಸಂವಿಧಾನ ರಕ್ಷಣೆಗಾಗಿ ಹೋರಾಡುವಂತಾಗಿದೆ. ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಿಲ್ಲ ಬದಲಾಗಿ ಸಂವಿಧಾನ ಎಲ್ಲಿ ಜಾರಿಯಾಯಿತೋ ಅಲ್ಲೆ ರಕ್ಷಣೆಗೆ ಮುಂದಾಗಬೇಕು. ಅದು ಬಿಟ್ಟು ರಸ್ತೆಗಳಲ್ಲಿ ಪ್ರತಿಭಟನೆ ಮಾಡಿದರೆ ಲಾಭವಿಲ್ಲ. ಸಮಾಜದಲ್ಲಿ ಇಂದು ಹೆಣ್ಣು ಮಕ್ಕಳು ಧೈರ್ಯವಾಗಿ ತಲೆ ಎತ್ತಿ ಬಾಳುವಂತಾಗಿದ್ದರೆ ಅದಕ್ಕೆ ಕಾರಣ ದೇಶದ ಮೊದಲ ಶಿಕ್ಷಕಿ ಬಾಫುಲೆ. ಅವರ ಆದರ್ಶಗುಣಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಚನ್ನದಾಸರ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ವಿ.ಚಲಪತಿ 40 ವರ್ಷಗಳ ಹಿಂದೆ ಈ ರಾಮಲಿಂಗಾಪುರ ಗ್ರಾಮ ಗುಡಿಸಲುಗಳಿಂದ ಕೂಡಿದ್ದ 50 ಕುಟುಂಬಗಳು ನೆಲೆಸಿದ್ದವು. ಕಡು ಬಡತನ ಅವರಿಸಿತ್ತು. ಇದೀಗ ಹಳ್ಳಿ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಆಗಿದೆ. ಶಿಕ್ಷಣದಲ್ಲೂ ಸುಧಾರಣೆ ಆಗಿದೆ. ಈಗಲೂ ನಮ್ಮ ಜನಾಂಗ ಮೀಸಲಾತಿಯಿಂದ ವಂಚಿತವಾಗಿದ್ದು, ಜಾತಿ ಪ್ರಮಾಣ ಪತ್ರ ಪಡೆಯುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲು ನಿರ್ಧಾರ ಮಾಡಲಾಗಿದ್ದು, ದಲಿತಪರ ಸಂಘಟನೆಗಳ ಮುಖಂಡರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಮುಖಂಡರುಗಳಾದ ಹೂವರಸನಹಳ್ಳಿ ರಾಜಪ್ಪ, ಐಪಲ್ಲಿ ನಾರಾಯಣಸ್ವಾಮಿ, ಹುಣಸನಹಳ್ಳಿ ವೆಂಕಟೇಶ್, ಸಿದ್ದನಹಳ್ಳಿ ಯಲ್ಲಪ್ಪ, ಲಕ್ಷ್ಮಮ್ಮ, ಕಲಾವಿದ ಯಲ್ಲಪ್ಪ ಚಿಕ್ಕವಲಗಮಾದಿ ಚಂದ್ರಪ್ಪ, ಗ್ರಾಮ ಪಂಚಾಯತಿ ಸದಸ್ಯ ವೆಂಕಟೇಶಪ್ಪ, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸೀನಪ್ಪ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ನಾರಾಯಣ ಸ್ವಾಮಿ, ನರಸಿಂಹಪ್ಪ, ವೇಣು ಇದ್ದರು.