ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಅಕ್ರಮವಾಗಿ ಶ್ರೀಗಂಧ ಮಾರಾಟಕ್ಕೆ ಯತ್ನಿಸಿದ್ದ ಮಹಿಳೆ ಸೇರಿದಂತೆ ಮೂವರನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ತುಮಕೂರು ಜಿಲ್ಲೆಯ ಕ್ಯಾತಸಂದ್ರದ ಗಂಗಸಂದ್ರ ರಸ್ತೆ ನಿವಾಸಿ ಮಧುಮಿತ, ಆಕೆಯ ಸಂಬಂಧಿ ಮರಳೂರಿನ ನವೀನ್ ಕುಮಾರ್ ಗೋವಿಂದನ್ ಹಾಗೂ ಆಂಧ್ರಪ್ರದೇಶದ ಚರಣ್ ಬಂಧಿತರಾಗಿದ್ದು, ಆರೋಪಿಗಳಿಂದ 11 ಲಕ್ಷ ರು ಮೌಲ್ಯದ 44.780 ಕೆಜಿ ಶ್ರೀಗಂಧ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಲಗ್ಗೆರೆ ಸಮೀಪ ಶ್ರೀಗಂಧ ಮಾರಾಟಕ್ಕೆ ಮಧುಮಿತ ಹಾಗೂ ಆಕೆಯ ಸಂಬಂಧಿ ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್ ಡಾ.ಶೇಖರ್ ನೇತೃತ್ವ ತಂಡ ಬಂಧಿಸಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಮಧುಮಿತ ಅವರು, ತಮ್ಮ ಕುಟುಂಬದ ಜತೆ ಕ್ಯಾತಸಂದ್ರದಲ್ಲಿ ನೆಲೆಸಿದ್ದಾರೆ. ಅವರ ಸಂಬಂಧಿ ನವೀನ್ ಕಾರು ಚಾಲಕನಾಗಿ ಜೀವನ ಸಾಗಿಸುತ್ತಿದ್ದ. ಹಣದಾಸೆಗೆ ಶ್ರೀಗಂಧ ಮಾರಾಟಕ್ಕಿಳಿದು ಈಗ ಜೈಲು ಸೇರುವಂತಾಗಿದೆ. ಕೆಲ ತಿಂಗಳ ಹಿಂದೆ ಸತ್ಸಂಗದ ಕಾರ್ಯಕ್ರಮದ ನಿಮಿತ್ತ ಆಂಧ್ರಪ್ರದೇಶಕ್ಕೆ ಮಧುಮಿತ ಹೋಗಿದ್ದರು. ಆ ವೇಳೆ ಆಕೆಗೆ ಚರಣ್ ಪರಿಚಯವಾಗಿದೆ. ಈತ ಶ್ರೀಗಂಧ ಮಾರಾಟದ ಬಗ್ಗೆ ಆಕೆ ಹೇಳಿದ್ದ. ಕೊನೆಗೆ ಚರಣ್ ಮೂಲಕ ಆಂಧ್ರಪ್ರದೇಶದ ಸ್ಮಗ್ಲರ್‌ಗಳಿಂದ ಶ್ರೀಗಂಧ ಖರೀದಿಸಿ ನಗರದಲ್ಲಿ ಮಾರಾಟಕ್ಕೆ ಮಧುಮಿತ ಯತ್ನಿಸಿದ್ದರು. ಅಂತೆಯೇ ತಮ್ಮ ಸಂಬಂಧಿ ಕಾರಿನಲ್ಲಿ ಹೋಗಿ ಶ್ರೀಗಂಧವನ್ನು ಅವರು ತಂದಿದ್ದರು.