ಫಿಟ್ ಇಂಡಿಯಾದಡಿ ದೇಸಿ ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಕ್ರೀಡಾ ಮಹೋತ್ಸವ ಆಯೋಜಿಸಲಾಗಿದೆ. ಗುಂಪು ಆಟದಲ್ಲಿ ಖೋಖೋ, ಕಬಡ್ಡಿ, ವಾಲಿಬಾಲ್ ಹಾಗೂ ವೈಯಕ್ತಿಕ ಆಟಗಳಲ್ಲಿ 100 ಮೀಟರ್‌, 800 ಮೀಟರ್‌ ಓಟ, ಎತ್ತರ ಹಾಗೂ ಉದ್ದ ಜಿಗಿತ, ಗುಂಡು ಎಸೆತ ಕ್ರೀಡೆಗಳಿವೆ.

ಧಾರವಾಡ:

ಹು-ಧಾ ಪಶ್ಚಿಮ ಕ್ಷೇತ್ರದ ಬಿಜೆಪಿ ಮಂಡಲ ವತಿಯಿಂದ ಸಂಸದರ ಕ್ರೀಡಾ ಉತ್ಸವ ಜ. 23 ಮತ್ತು 24ರಂದು ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಮೇಯರ್ ಜ್ಯೋತಿ ಪಾಟೀಲ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫಿಟ್ ಇಂಡಿಯಾದಡಿ ದೇಸಿ ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಕ್ರೀಡಾ ಮಹೋತ್ಸವ ಆಯೋಜಿಸಲಾಗಿದೆ. ಗುಂಪು ಆಟದಲ್ಲಿ ಖೋಖೋ, ಕಬಡ್ಡಿ, ವಾಲಿಬಾಲ್ ಹಾಗೂ ವೈಯಕ್ತಿಕ ಆಟಗಳಲ್ಲಿ 100 ಮೀಟರ್‌, 800 ಮೀಟರ್‌ ಓಟ, ಎತ್ತರ ಹಾಗೂ ಉದ್ದ ಜಿಗಿತ, ಗುಂಡು ಎಸೆತ ಕ್ರೀಡೆಗಳಿವೆ. ಈಗಾಗಲೇ 500ಕ್ಕೂ ಅಧಿಕ ಕ್ರೀಡಾಪಟುಗಳು ಹೆಸರು ನೋಂದಾಯಿಸಿದ್ದಾರೆ ಎಂದರು.

ಜ. 23 ಬೆಳಗ್ಗೆ 10ಕ್ಕೆ ಕ್ರೀಡೆಗಳು ಪ್ರಾರಂಭಗೊಳ್ಳಿದ್ದು, ಕಬಡ್ಡಿ-ವಾಲಿಬಾಲ್ 16 ವರ್ಷ ಮೇಲ್ಪಟ್ಟವರಿಗೆ ಅವಕಾಶವಿದೆ. ವೈಯಕ್ತಿಕ ವಿಭಾಗದಲ್ಲಿ 17 ವರ್ಷ ಒಳಪಟ್ಟ ಜೂನಿಯರ್ ಹಾಗೂ 17 ವರ್ಷ ಮೇಲ್ಪಟ್ಟ ಸಿನೀಯರ್ ವಿಭಾಗದ ಕ್ರೀಡೆ ನಡೆಯಲಿವೆ. ಗುಂಪು ಆಟದ ವಿಜೇತರಿಗೆ ಪ್ರಥಮ ₹30 ಸಾವಿರ, ದ್ವಿತೀಯ ₹20 ಸಾವಿರ, ತೃತೀಯ ₹10 ಸಾವಿರ ಮೊತ್ತದ ನಗದು ಬಹುಮಾನವಿದೆ. ವೈಯಕ್ತಿಕ ಆಟಗಳ ವಿಜೇತರಿಗೆ ಪ್ರಥಮ ಏಳು, ದ್ವಿತೀಯ ಐದು, ತೃತೀಯ ಮೂರು ಸಾವಿರ ನಗದು ಬಹುಮಾನವಿದೆ ಎಂದರು.

ಪ್ರಥಮ-ದ್ವಿತೀಯ ಸ್ಥಾನದ ಕ್ರೀಡಾಪಟು ಲೋಕಸಭಾ ಹಂತಕ್ಕೆ ಅರ್ಹತೆ ಪಡೆಯಲಿದ್ದು, ಮಾದಕ ವಸ್ತುಗಳ ಸೇವಿಸಿದ ಆಟಗಾರ ಮತ್ತು ತಂಡವನ್ನು ನಿಷೇಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಮಹಾನಗರ ವ್ಯಾಪ್ತಿಯ ಕ್ರೀಡಾಪಟುಗಳು ಪಾಲ್ಗೊಳ್ಳುವ ಅವಕಾಶ ಇದೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಆಡಿದ ಕ್ರೀಡಾಪಟು ಮತ್ತೊಂದು ವಿಧಾನಸಭಾ ಕ್ಷೇತ್ರದಲ್ಲಿ ಆಡುವಂತಿಲ್ಲ. ಕ್ರೀಡಾಪಟುಗಳು ತಮ್ಮ ಆಧಾರ್ ಕಾರ್ಡ್ ತರಬೇಕು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯ ಶಿವು ಹಿರೇಮಠ, ಶಂಕರ ಶೇಳಕೆ, ಪಿ.ಎಚ್.ನೀರಲಕೇರಿ, ಮಂಜುನಾಥ ಮಲ್ಲಿಗವಾಡ, ಬಸವರಾಜ ಗರಗ, ಸುನೀಲ ಮೋರೆ, ಕರಿಯಪ್ಪ ಸುಣಗಾರ ಇದ್ದರು.