ಸಾರಾಂಶ
ರಾಣಿಬೆನ್ನೂರು: ಮಣ್ಣು ಸಜೀವ ಜೀವಿಯಾಗಿದ್ದು ರಾಸಾಯನಿಕ ಬಳಸಿ ವಿಷಮಿಶ್ರಿತ ಆಹಾರ ಬೆಳೆಯುವಿಕೆ ಹಾಗೂ ಕಳೆನಾಶಕ ಬಳಕೆಯಿಂದ ಮಣ್ಣಿನ ಸತ್ವ ನಾಶವಾಗುತ್ತಿದೆ ಎಂದು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಹಾಗೂ ಸಾವಯವ ಕೃಷಿ ಅನುಭವಿ ಡಾ. ಎಚ್.ಎನ್. ಬಬಲಾದ ತಿಳಿಸಿದರು.ತಾಲೂಕಿನ ಅಸುಂಡಿ ಗ್ರಾಮದ ಹನುಮವ್ವ ಸಿದ್ದಪ್ಪನವರ ಜಮೀನಿನಲ್ಲಿ ಸ್ಥಳೀಯ ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಇಕೊವಾ ಸಂಸ್ಥೆಯ ಡಾ. ಎಸ್.ವಿ. ಪಾಟೀಲ ಫೌಂಡೇಶನ್ ಸಹಯೋಗದಲ್ಲಿ ಅಕ್ಕಡಿಸಾಲು ಪದ್ಧತಿಯಲ್ಲಿ ಅಗಸೆ, ಬಿಳಿಜೋಳ, ಅಲಸಂದಿ, ಕಡಲೆ ನಾಲ್ಕು ಸಾಲಿನಲ್ಲಿ ಸಾವಯವ ಕೃಷಿ ಪದ್ಧತಿ ಮೂಲಕ ಬೆಳೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ತರಹದ ನಿರಂತರ ಏಕಬೆಳೆ ಕೃಷಿ ಹಾಗೂ ಕಳೆನಾಶಕ ಬಳಸಿದಲ್ಲಿ ಮಣ್ಣು ಬರಡಾಗುತ್ತದೆ. ಮುಂದಿನ ದಿನದ ಬೆಳೆಗಳಲ್ಲಿ ವೈವಿಧ್ಯತೆ ಹಾಗೂ ಸಂಪ್ರದಾಯ ಸಾವಯವ ಕೃಷಿಯಡಿ ಅಕ್ಕಡಿ ಸಾಲು ಪದ್ಧತಿ ಮೂಲಕ ಎಲ್ಲ ದವಸ ಧಾನ್ಯ ಬೆಳೆದು ವಿಷಮುಕ್ತ ಆಹಾರ ಪಡೆಯುವ ಹಾಗೆ ಮಾಡಬೇಕು ಎಂದರು. ವನಸಿರಿ ಸಂಸ್ಥೆಯ ಸಿಇಒ ಎಸ್.ಡಿ. ಬಳಿಗಾರ ಮಾತನಾಡಿ, ರೈತರು ಒಂದೇ ತರಹದ ಬೆಳೆಗಳನ್ನು ಬೆಳೆಯುವುದರಿಂದ ಭೂಮಿ ತನ್ನ ಸತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ ಮಿಶ್ರ ಬೆಳೆ ಪದ್ಧತಿಯಿಂದ ದೇಶಿ ಬೀಜ, ಸಿರಿಧಾನ್ಯದ ಸಾವಯವ ಕೀಟನಾಶಕ ಬಳಸಿ ಬೆಳೆ ಬೆಳೆದರೆ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆದುಕೊಳ್ಳಬಹುದು ಎಂದರು.ಇಕೊವಾ ಕಂಪನಿ ಉಪನಿರ್ದೇಶ ಡಾ. ಶ್ರೀದೇವಿ ಮಾತನಾಡಿ, ಮಿಶ್ರಬೆಳೆ ಪದ್ದತಿಯು ಹಾಗೂ ಸಾವಯವ ಕೃಷಿಯಿಂದ ಭೂಮಿಯ ಫಲವತ್ತೆಯನ್ನು ಕಾಪಾಡಲು ಸಾಧ್ಯ. ಮಣ್ಣಿನಲ್ಲಿ ಜೀವಾಣುಗಳು ಸತ್ತರೆ ಮುಂದೆ ನಮಗೆ ಬೆಳೆ ಬುರುವುದಿಲ್ಲ. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿದರೆ ಭೂಮಿಗೆ ವಿಷ ಉಣಿಸಿದಂತಾಗುತ್ತದೆ. ಆದ್ದರಿಂದ ಸಿರಿಧಾನ್ಯ ಮತ್ತು ದ್ವಿದಳ ಧಾನ್ಯಗಳಾದ ಅಲಸಂದಿ, ಉದ್ದು, ಮುಂತಾದ ಬೆಳೆಗಳನ್ನು ಬೆಳೆದರೆ ಇವುಗಳ ಬೇರುಗಳಿಂದ ಭೂಮಿಗೆ ಇಂಗಾಲ ಸಿಗುತ್ತದೆ ಹಾಗೂ ಮಣ್ಣಿನಲ್ಲಿ ಪೋಷಕಾಂಶಗಳನ್ನು ರಕ್ಷಣೆ ಮಾಡಿದಂತಾಗುತ್ತದೆ ಎಂದರು. ಗ್ರಾಮದ ಬಸವರಾಜಪ್ಪ ಹುಲ್ಮನಿ, ಮಾದೇವಪ್ಪ ನೆಗಳೂರು, ವನಸಿರಿ ಸಂಸ್ಥೆಯ ಹನುಮಂತಪ್ಪ ಮಣ್ಣಮ್ಮನವರ, ಫಕ್ಕೀರಪ್ಪ ಕಡೆಮನಿ, ಇಕೊವಾ ಕಂಪನಿಯ ಡಾ. ಸುಮಿತ್ರಾ ಬಿ.ಎಸ್. ಹಾಗೂ 32 ರೈತರು ಉಪಸ್ಥಿತರಿದ್ದರು.21ರಂದು ಹಾವೇರಿಯಲ್ಲಿ ಜಾಗೃತಿ ಕಾರ್ಯಾಗಾರಹಾವೇರಿ: ಫೆ. 21ರಂದು ಮೈಕ್ರೋ ಫೈನಾನ್ಸ್‌ನವರಿಗೆ ಆಧ್ಯಾದೇಶದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ ಆಯೋಜಿಸಲಾಗಿದೆ.ಜಿಲ್ಲೆಯ ಎಲ್ಲ ಲೇವಾದೇವಿಗಾರರು, ಗಿರವಿದಾರರು, ಹಣಕಾಸು ಸಂಸ್ಥೆಗಳು, ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಆಧ್ಯಾದೇಶದ ಬಗ್ಗೆ ಕಾನೂನು ಜಾಗೃತಿ ಅರಿವು ಮೂಡಿಸಲು ಕಾರ್ಯಾಗಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಗ್ಗೆ 9.30 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಲಿದೆ ಎಂದು ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಲೇವಾದೇವಿಗಾರರ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.