ಫೆಬ್ರವರಿ 13ರಂದು ಜೋಯಿಡಾ ತಾಲೂಕಿನ ಉಳವಿ ಮಹಾರಥೋತ್ಸವ

| Published : Jan 25 2025, 01:01 AM IST

ಫೆಬ್ರವರಿ 13ರಂದು ಜೋಯಿಡಾ ತಾಲೂಕಿನ ಉಳವಿ ಮಹಾರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ರೆಗೆ ಎತ್ತಿನಗಾಡಿ ಮಾತ್ರ ಅನುಮತಿ ಇದ್ದು, ಕುದುರೆ ಗಾಡಿಗಳಿಗೆ ಅನುಮತಿ ಇಲ್ಲ.

ಜೋಯಿಡಾ: ತಾಲೂಕಿನ ಪುಣ್ಯ ಕ್ಷೇತ್ರ ಉಳವಿ ಚೆನ್ನಬಸವೇಶ್ವರ ಜಾತ್ರೆಯ ಪ್ರಯುಕ್ತ ಮಹಾರಥೋತ್ಸವ ಫೆ. 13ರಂದು ನಡೆಯಲಿದೆ. ಎಲ್ಲರ ಸಹಕಾರದಿಂದ ಜಾತ್ರೆ ಉತ್ತಮವಾಗಿ ನಡೆಸೋಣ ಎಂದು ತಹಸೀಲ್ದಾರ್‌ ಮಂಜುನಾಥ ಮುನ್ನೊಳಿ ತಿಳಿಸಿದರು.

ಉಳವಿಯಲ್ಲಿ ಜಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಕೆಲಸ, ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಕಾರ್ಯಪಡೆ ರಚಿಸಿಕೊಂಡು ಕೆಲಸ ನಿರ್ವಹಿಸಬೇಕು. ಜಾತ್ರೆಗೆ ಎತ್ತಿನಗಾಡಿ ಮಾತ್ರ ಅನುಮತಿ ಇದ್ದು, ಕುದುರೆ ಗಾಡಿಗಳಿಗೆ ಅನುಮತಿ ಇಲ್ಲ. ವಾಹನಗಳಿಗೆ ರೇಡಿಯೋ ಕಾಲರ್ ಅಳವಡಿಸಿಕೊಂಡು ಅಪಘಾತಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ನೀರಿನಲ್ಲಿ ಬೇಕಾಬಿಟ್ಟಿ ಹೋಗಿ ಜೀವಹಾನಿ ಆಗಬಾರದು. ಏನೇ ಆಗಲಿ ಎಲ್ಲರೂ ನಿಯಮದಂತೆ ನಡೆದು ಜಾತ್ರೆ ಚಂದಗಾಣಿಸಿ ಕೊಡಬೇಕು ಎಂದರು.

ಸಿಪಿಐ ಚಂದ್ರಶೇಖರ ಹರಿಹರ ಮಾತನಾಡಿ, ಕುಡಿದು ಬಂದು ಜಾತ್ರೆಯಲ್ಲಿ ಗಲಾಟೆ ಮಾಡುವವರಿಗೆ, ಲೈಸೆನ್ಸ್ ಇಲ್ಲದೆ, ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಬರುವವರಿಗೆ, ಮೂರು ನಾಲ್ಕು ಜನರನ್ನು ಬೈಕ್ ಮೇಲೆ ತರುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

ಕೆಎಸ್ಆರ್‌ಟಿಸಿಯ ಧಾರವಾಡ ಸಂಚಾರಿ ವಿಭಾಗದ ಪರಶುರಾಮ ಕಾಂಬಳೆ ಮಾತನಾಡಿ, ಜನರ ಬೇಡಿಕೆಯಂತೆ ಕಿತ್ತೂರಿನಿಂದಲೂ ಬಸ್ ಬಿಡಲಾಗುವುದು ಎಂದರು.

ಅಬಕಾರಿ ಇಲಾಖೆಯ ಸಿಬ್ಬಂದಿ ಗೈರುಹಾಜರಿ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಲೋಕೋಪಯೋಗಿ ಇಲಾಖೆಯ ಅಧಿಕಾರಿ ಶಿವಪ್ರಸಾದ್ ಎಸ್. ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮೊಕಾಶಿ ಸಭೆ ನಡೆಯಲು ಸಹಕರಿಸಿದರು. ವ್ಯವಸ್ಥಾಪಕ ಶಂಕರಯ್ಯ ಶಾಸ್ತ್ರಿ ಸಲಹೆ ನೀಡಿದರು. ಅಧ್ಯಕ್ಷ ಸಂಜಯ ಕಿತ್ತೂರ, ಉಪಾಧ್ಯಕ್ಷ ಪ್ರಕಾಶ ಕಿತ್ತೂರ, ಗಂಗಾಧರ ಕಿತ್ತೂರ ಇತರ ಗಣ್ಯರು ಉಪಸ್ಥಿತರಿದ್ದರು.ಸೋಡಿಗದ್ದೆ ಮಹಾಸತಿ ದೇವಿ ದರ್ಶನಕ್ಕೆ ಭಕ್ತಸಾಗರ

ಭಟ್ಕಳ: ಇಲ್ಲಿಯ ಸುಪ್ರಸಿದ್ಧ ಸೋಡಿಗದ್ದೆ ಮಹಾಸತಿ ದೇವಿಯ ಜಾತ್ರೆಯಲ್ಲಿ ಶುಕ್ರವಾರ ನೂರಾರು ಭಕ್ತರು ಕೆಂಡ ಹಾಯುವ ಮೂಲಕ ದೇವಿಗೆ ಕೆಂಡ ಸೇವೆ ಹರಕೆ ಸಲ್ಲಿಸಿದರು.ಜಾತ್ರೆಯ ಎರಡನೇ ದಿನವಾದ ಶುಕ್ರವಾರ ಬೆಳಗ್ಗೆ ಆರಂಭವಾದ ಕೆಂಡ ಸೇವೆಯಲ್ಲಿ ಶ್ರದ್ಧಾ ಭಕ್ತಿಯಿಂದ ಮಹಿಳೆಯರು, ಮಕ್ಕಳು, ಪುರುಷರು ಕೆಂಡ ಹಾಯುವ ಮೂಲಕ ತಮಗೆ ಕಷ್ಟ ಬಂದ ಸಂದರ್ಭದಲ್ಲಿ ಹೇಳಿಕೊಂಡ ತಮ್ಮ ಹರಕೆಯನ್ನು ಸಲ್ಲಿಸಿದರು.

ಚಿಕ್ಕಮಕ್ಕಳನ್ನು ತಾಯಂದಿರು ಹಾಗೂ ಪೂಜಾರಿಗಳು ಎತ್ತಿಕೊಂಡು ಕೆಂಡ ಹಾಯ್ದರು. ಜಾತ್ರೆಯ ಎರಡನೇ ದಿನವೂ ಕೂಡಾ ಜನರ ಉದ್ದನೆಯ ಸರತಿಯ ಸಾಲು ನೆರೆದಿದ್ದು ಸುಮಾರು ಹತ್ತು ಸಾವಿಕ್ಕೂ ಅಧಿಕ ಭಕ್ತರು ಮಹಾಸತಿ ದೇವಿಗೆ ಪೂಜೆ ಪುನಸ್ಕಾರ ಸಲ್ಲಿಸಿ ದರ್ಶನ ಪಡೆದರು.

ಉಡುಪಿ ಜಿಲ್ಲೆಯಿಂದಲೂ ಭಕ್ತರು ಆಗಮಿಸಿ ದೇವಿಗೆ ಶ್ರದ್ಧಾ ಭಕ್ತಿಪೂರ್ವಕವಾಗಿ ಪೂಜೆ, ಹರಕೆ ಸಲ್ಲಿಸಿದರು. ಕೆಲವರು ಗೊಂಬೆ ಒಪ್ಪಿಸುವುದರ ಮೂಲಕ ಹರಕೆ ಸಲ್ಲಿಸಿದರು. ಜಾತ್ರೆಯಲ್ಲಿ ಮುಂಜಾಗ್ರತಾಕ್ರಮವಾಗಿ ನೂಕುನುಗ್ಗಲು ತಡೆಯಲು ದೇವಸ್ಥಾನ ಅಭಿವೃದ್ಧಿ ಸಮಿತಿಯ ಸ್ವಯಂ ಸೇವಕರು, ಕಂದಾಯ ಇಲಾಖಾ ಸಿಬ್ಬಂದಿ, ಗ್ರಾಮಸ್ಥರು ಹಾಗೂ ಪೊಲೀಸರು ಸುಸಜ್ಜಿತ ಭದ್ರತಾ ವ್ಯವಸ್ಥೆ ಕಲಿಸಿದ್ದರು.

ದೇವಿಯ ದರ್ಶನವನ್ನು ಪಡೆದ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಆಡಳಿತ ಕಮಿಟಿಯ ಅಧ್ಯಕ್ಷ ದೇವಿಸಾದ ಮೊಗೇರ,ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಭಾಸ್ಕರ ಮೊಗೇರ ಸೇರಿದಂತೆ ಕಮಿಟಿಯ ಪದಾಧಿಕಾರಿಗಳು, ಸದಸ್ಯರು, ಹಲವು ಪ್ರಮುಖರು ಭಕ್ತರಿಗೆ ದೇವಿ ದರ್ಶನ ಮತ್ತು ಸುಸೂತ್ರ ಪೂಜೆಗೆ ಸಹಕರಿಸಿದರು.ಕಳೆದ ವರ್ಷಕ್ಕಿಂತ ಈ ಬಾರಿ ಸೋಡಿಗದ್ದೆ ಜಾತ್ರೆಗೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಸೋಡಿಗದ್ದೆಯ ದೇವಸ್ಥಾನದ ಸುತ್ತಮುತ್ತ ಅಂಗಡಿಗಳ ಭರಾಟೆ ಹೆಚ್ಚಿದ್ದು, ಜಾತ್ರೆಗೆ ಮೆರುಗು ತಂದಿತ್ತು. ಶನಿವಾರ, ಭಾನುವಾರ, ಸೋಮವಾರ ತುಲಾಭಾರ ಸೇವೆ ನಡೆಯಲಿದ್ದು, ಈಗಾಗಲೇ ನೂರಾರು ಭಕ್ತರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಜಾನುವಾರು ಕಳ್ಳತನ ಮಾಡಿದ್ದ ಮೂವರು ಆರೋಪಿಗಳ ಸೆರೆಹೊನ್ನಾವರ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳಿಗೆ ಕುಮಟಾ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.ತಾಲೂಕಿನ ಹೆರಂಗಡಿಯ ಅಲ್ತಾಪ್ ಅಹಮ್ಮದ್, ಮತೀನ್ ಅಹಮ್ಮದ್, ಹೆರಂಗಡಿ, ಕುರ್ವಾದ ಮಹಮ್ಮದ್ ಹುಸೇನ್ ಅಬ್ಬಾಸ ಎಂಬವರೇ ಬಂಧಿತ ಆರೋಪಿಗಳು.ತಾಲೂಕಿನ ಸಾಲ್ಕೋಡ, ಕೊಂಡಾಕುಳಿ, ಹೊಸಾಕುಳಿ ಮತ್ತು ಕವಲಕ್ಕಿ ಭಾಗಗಳಲ್ಲಿ ಜಾನುವಾರುಗಳ ಕಳ್ಳತನ ಆಗಿರುವ ಬಗ್ಗೆ ಜ. 22ರಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದರು. ಮೂವರು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಎಸ್‌ಪಿ ನಾರಾಯಣ ಎಂ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ಜಗದೀಶ್, ಭಟ್ಕಳ ಡಿವೈಎಸ್‌ಪಿ ಮಹೇಶ ಕೆ. ಅವರ ಮಾರ್ಗದರ್ಶನದಲ್ಲಿ ಹೊನ್ನಾವರ ಸಿಪಿಐ ಸಿದ್ದರಾಮೇಶ್ವರ ಎಸ್., ಹೊನ್ನಾವರ ಪಿಎಸ್ಐ ಮಂಜುನಾಥ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.