ಸಾರಾಂಶ
ಅಶೋಕ ಡಿ. ಸೊರಟೂರ ಲಕ್ಷ್ಮೇಶ್ವರ
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಅಪಾಯ ಸಂಭವಿಸುವ ಮೊದಲು ಪುರಸಭೆ ಅಧಿಕಾರಿಗಳು ಬೀದಿ ನಾಯಿ ನಿಯಂತ್ರಣಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ತಾಲೂಕಿನಲ್ಲಿ ಕಳೆದ ತಿಂಗಳು ಸಮೀಪದ ಬಟ್ಟೂರ ಹಾಗೂ ಕುಂದ್ರಳ್ಳಿ ಗ್ರಾಮದಲ್ಲಿ ಬೀದಿ ನಾಯಿಯ ಕಡಿತದಿಂದ ಬಾಲಕಿಯೋರ್ವವಳು ರೇಬೀಸ್ ರೋಗಕ್ಕೆ ತುತ್ತಾಗಿ ಬಲಿಯಾದ ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ. ತಾಲೂಕಿನಲ್ಲಿ ಮತ್ತೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ಪುರಸಭೆಯ ಅಧಿಕಾರಿಗಳು ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಬೇಕಿದೆ.
ಪಟ್ಟಣದ ಬಸ್ ನಿಲ್ದಾಣ, ಮಟನ್ ಮಾರ್ಕೆಟ್, ಸವಣೂರು ರಸ್ತೆ, ದೂದಪೀರಾಂ ದುರ್ಗಾ, ಹುಬ್ಬಳ್ಳಿ ರಸ್ತೆ, ಮಹಾಕವಿ ಪಂಪ ವೃತ್ತ, ಗದಗ ಅಗಸಿ, ಪುರಸಭೆ ಕಸ ವಿಲೇವಾರಿ ಘಟಕದ ಹತ್ತಿರ ಬೀದಿ ನಾಯಿಗಳು ಹೆಚ್ಚಾಗಿವೆ.ಬೀದಿ ನಾಯಿಗಳ ದಾಳಿಯಿಂದ ರಾಜ್ಯದಲ್ಲಿ ನೂರಾರು ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಅಧಿಕಾರಿಗಳು ಮಾತ್ರ ಏನೂ ನಡೆದೆ ಇಲ್ಲ ಎಂಬಂತೆ ಮೌನಕ್ಕೆ ಶರಣಾಗಿರುವುದು ಸೋಜಿಗದ ಸಂಗತಿಯಾಗಿದೆ.
ಬೀದಿ ನಾಯಿಗಳು ಚಿಕ್ಕ ಮಕ್ಕಳು ಹಾಗೂ ಮಹಿಳೆಯರ ಮೇಲೆ ದಾಳಿ ಮಾಡಿ ಅನೇಕರನ್ನು ಗಾಯಗೊಳಿಸಿರುವ ಘಟನೆ ನಡೆದರೂ ಪುರಸಭೆಯ ಅಧಿಕಾರಿಗಳು ಮಾತ್ರ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ವಿಫಲವಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.ಬೀದಿ ನಾಯಿಗಳು ಬೈಕ್ ಸವಾರರ ಮೈಮೇಲೆ ಎರಗುವ ಹಾಗೂ ಮೇಲೆ ಏಕಾಏಕಿ ದಾಳಿ ಮಾಡುವ ಮೂಲಕ ಬೈಕ್ ಸವಾರರು ಬಿದ್ದು ಪ್ರಾಣಾಂತಿಕವಾಗಿ ಗಾಯಗೊಂಡ ಘಟನೆಗಳು ನಡೆದಿವೆ. ಪಟ್ಟಣದಲ್ಲಿ 200ಕ್ಕೂ ಹೆಚ್ಚು ಬೀದಿ ನಾಯಿಗಳು ಇದ್ದು, ಪುರಸಭೆಯ ಅಧಿಕಾರಿಗಳು ಬೀದಿ ನಾಯಿ ಹಿಡಿದು ಬೇರೆಡೆಗೆ ಸಾಗಿಸುವ ಕಾರ್ಯ ಮಾಡಬೇಕು ಎಂಬುದು ಸಾರ್ವಜನಿಕರ ಅಹವಾಲು ಆಗಿದೆ.
ಪಟ್ಟಣದ ಮಟನ್ ಮಾರ್ಕೆಟ್ ಹಾಗೂ ದೂದಪೀರಾಂ ದರ್ಗಾದ ಸುತ್ತಲೂ ಚಿಕ್ಕ ಮಕ್ಕಳು ಒಬ್ಬಂಟಿಯಾಗಿ ಸಂಚಾರ ಮಾಡುವುದು ಪ್ರಾಣಕ್ಕೆ ಸಂಚಕಾರ ತಂದುಕೊಂಡಂತಾಗಿದೆ.ಬೀದಿ ನಾಯಿಗಳ ಉಪಟಳ ಹೆಚ್ಚಾಗಲು ಮಾಂಸ ಮಾರಾಟಗಾರರು ಕಸಾಯಿ ಖಜಾನೆಯ ತ್ಯಾಜ್ಯವನ್ನು ಬೇಕಾಬಿಟ್ಟಿ ವಿಲೇವಾರಿ ಮಾಡುವುದರಿಂದ ಬೀದಿ ನಾಯಿಗಳು ಮಾಂಸದ ಆಸೆಗೆ ಒಂದೆಡೆ ಸೇರುತ್ತವೆ. ಇಂತಹ ನಾಯಿಗಳು ಒಂಟಿಯಾಗಿ ಸಂಚಾರ ಮಾಡುವವರನ್ನು ಗುರಿಯಾಗಿಸಿ ದಾಳಿ ಮಾಡುತ್ತವೆ ಎಂಬುದು ಅಲ್ಲಿನ ನಿವಾಸಿಗಳ ಅಳಲಾಗಿದೆ.
ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು. ಪುರಸಭೆಯ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುವತ್ತ ಗಮನ ಹರಿಸಬೇಕು, ಬೀದಿ ನಾಯಿಗಳನ್ನು ಹಿಡಿದು ಬೇರೆ ಕಡೆಗೆ ಸಾಗಿಸುವ ಕಾರ್ಯ ಮಾಡಬೇಕು ಎಂದು ವಕೀಲ ಬಸವರಾಜ ಬಾಳೇಶ್ವರಮಠ ಹೇಳಿದ್ದಾರೆ.ಬೀದಿ ನಾಯಿಗಳನ್ನು ಹಿಡಿದು ಸಾಗಿಸುವ ಕಾರ್ಯವನ್ನು ಪುರಸಭೆ ವತಿಯಿಂದ ಮಾಡಲಾಗುವುದು. ನಾಯಿ ಹಿಡಿದು ಬೇರೆಡೆಗೆ ಸಾಗಿಸುವ ತಜ್ಞರನ್ನು ಸಂಪರ್ಕಿಸುವ ಕಾರ್ಯ ಮಾಡುತ್ತಿದ್ದೇವೆ. ಶೀಘ್ರದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ತಿಳಿಸಿದ್ದಾರೆ.