ಸಾರಾಂಶ
ಪ್ರವೀಣ ಹೆಗಡೆ, ಕರ್ಜಗಿ
ಶಿರಸಿ: ನಗರದ ನೀಲೇಕಣಿಯ ಮೀನು ಮಾರುಕಟ್ಟೆ ಎದುರು ವಾಹನ ನಿಲುಗಡೆಗೆ ಮೀಸಲಿಟ್ಟ ಜಾಗದಲ್ಲಿ ತರಕಾರಿ, ಹಣ್ಣಿನ ಅಂಗಡಿಗಳು ಆವರಿಸಿಕೊಳ್ಳುತ್ತಿದ್ದು, ವಸ್ತುಗಳ ಖರೀದಿಗೆ ಬರುವವರು ಮುಖ್ಯ ರಸ್ತೆಯ ಮೇಲೆ ವಾಹನಗಳನ್ನು ಪಾರ್ಕಿಂಗ್ ಮಾಡಬೇಕಾದ ಅನಿವಾರ್ಯತೆ ಇದೆ. ಇದರಿಂದ ರಸ್ತೆಯಲ್ಲಿ ವಾಹನ ಸವಾರರಿಗೆ ತೊಡಕಾಗಿದೆ. ಮಾತ್ರವಲ್ಲ ಅಪಘಾತಗಳು ಸಂಭವಿಸುವ ಅಪಾಯ ಹೆಚ್ಚಿದೆ.ಮೀನು ಮಾರುಕಟ್ಟೆಯ ಪ್ರಾಂಗಣದಲ್ಲಿ ತರಕಾರಿ ಹಾಗೂ ಹಣ್ಣುಗಳ ಅಂಗಡಿಗಳೇ ತುಂಬಿಕೊಂಡಿರುವುದರಿಂದ ಮೀನು ಖರೀದಿಗೆ ಬರುವವರು ರಸ್ತೆಯ ಮೇಲೆ ಬೈಕ್ ಹಾಗೂ ಕಾರುಗಳನ್ನು ನಿಲ್ಲಿಸಿ ಮಾರುಕಟ್ಟೆಗೆ ಸಾಗುವ ಸ್ಥಿತಿ ಇದೆ. ಭಾನುವಾರ ಸಂಚಾರ ದಟ್ಟಣೆಯಿಂದ ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕುಮಟಾ ಹಾಗೂ ಸಿದ್ದಾಪುರ ತಾಲೂಕನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿ ಇದಾಗಿದ್ದು, ನಿತ್ಯ ನೂರಾರು ವಾಹನಗಳ ಸುಲಲಿತ ಸಂಚಾರಕ್ಕೆ ತೊಡಕಾಗಿದೆ.
ಮೀನು ವ್ಯಾಪಾರಕ್ಕೆ ಆಗಮಿಸುವ ಗ್ರಾಹಕರು ಮಾರುಕಟ್ಟೆ ಪ್ರಾಂಗಣದ ಹೊರಭಾಗದಲ್ಲಿ ಬೈಕ್ ಹಾಗೂ ಕಾರುಗಳನ್ನು ನಿಲ್ಲಿಸುವಂತೆ ನೋಡಿಕೊಳ್ಳಲು ನಗರಸಭೆ ಸಿಬ್ಬಂದಿ ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.ಸ್ವಚ್ಛತೆಗೆ ಒತ್ತು ನೀಡಲಿ: ಈ ಮಾರುಕಟ್ಟೆಯಲ್ಲಿ ಉಳಿದ ದಿನಗಳಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಮೀನು ವ್ಯಾಪಾರ ಇರದಿದ್ದರೂ ಭಾನುವಾರ ಮತ್ತು ಮಂಗಳವಾರ ಮಾರುಕಟ್ಟೆಯ ಪ್ರಾಂಗಣ ತುಂಬಿ ತುಳುಕುತ್ತದೆ. ನೈರ್ಮಲ್ಯ ನಿರ್ವಹಣೆಯೂ ಇಲ್ಲವಾಗಿದ್ದು, ಕೊಳೆತ ಮೀನು ಮತ್ತು ಮಾಂಸವನ್ನು ಆ ದಿನಗಳಂದೇ ವಿಲೇವಾರಿ ಮಾಡದ ಕಾರಣ ಗಬ್ಬೆದ್ದು ನಾರುತ್ತದೆ. ಮೀನು ಮಾರುಕಟ್ಟೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಮೀನು ಮಾರುಕಟ್ಟೆಯಲ್ಲಿ ಮೀನು ಹೊರತಾಗಿ ಬೇರೆ ವಸ್ತುಗಳ ಮಾರಾಟಕ್ಕೆ ಅವಕಾಶವಿಲ್ಲ ಎಂದು ನಗರಸಭೆಯಿಂದ ಒಂದೆರಡು ಬಾರಿ ಕಾಟಾಚಾರಕ್ಕೆ ತೆರವುಗೊಳಿಸಿದ್ದರು. ನಂತರದ ದಿನಗಳಲ್ಲಿ ಯಥಾಪ್ರಕಾರವಾಗಿ ಹಣ್ಣು, ತರಕಾರಿ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಕಾಟಾಚಾರಕ್ಕೆ ತೆರವುಗೊಳಿಸುವುದನ್ನು ಬಿಟ್ಟು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂಬ ಒತ್ತಾಯ ಜನತೆಯದು.ಸಿಬ್ಬಂದಿ ನೇಮಿಸಿ ಪ್ರತಿ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತುಂಬಿ ತುಳುಕುತ್ತಿರುವ ಮೀನು ಮಾರುಕಟ್ಟೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಇಲ್ಲದ ಕಾರಣ ರಸ್ತೆಯ ಮೇಲೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದಾರೆ. ಸಾವಿರಾರು ಜನರು ಆಗಮಿಸಿ, ಜನದಟ್ಟಣೆಯಿಂದ ಕೂಡಿರುವ ಮೀನು ಮಾರುಕಟ್ಟೆಯಲ್ಲಿ ಪೊಲೀಸ್ ಇಲಾಖೆಯು ಭಾನುವಾರವಾದರೂ ಓರ್ವ ಸಿಬ್ಬಂದಿಯನ್ನು ನೇಮಿಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಿದೆ.
ವಾಹನ ನಿಲುಗಡೆ ಸಮಸ್ಯೆನಗರಸಭೆಯ ಆಡಳಿತ ವ್ಯವಸ್ಥೆ ವಿಫಲವಾದ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ವಾಹನಗಳ ಪಾರ್ಕಿಂಗ್ ಸ್ಥಳಗಳೆಲ್ಲವನ್ನೂ ತರಕಾರಿ, ಹಣ್ಣು ವ್ಯಾಪಾರಸ್ಥರು ಅತಿಕ್ರಮಿಸಿಕೊಂಡಿದ್ದಾರೆ. ವಾಹನಗಳ ನಿಲುಗಡೆಯು ನಗರದಲ್ಲಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದ್ದು, ಕಳೆದ ಸಾಮಾನ್ಯ ಸಭೆಯಲ್ಲಿ ರಸ್ತೆ ಮೇಲೆ ಹಣ್ಣು, ತರಕಾರಿ, ಮೀನು ಮಾರಾಟಕ್ಕೆ ಅವಕಾಶ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆಲವು ಸದಸ್ಯರು ಆಗ್ರಹಿಸಿದರೆ, ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣದಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈಚೆಲ್ಲಿ ಕುಳಿತುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಕಂಡ ಕಂಡಲ್ಲಿ ಬೀದಿಬದಿ ಅಂಗಡಿಗಳು ಹೆಚ್ಚುತ್ತಿವೆ. ಈ ಕುರಿತು ನಗರಸಭೆ ಕ್ರಮ ಕೈಗೊಳ್ಳಬೇಕಿದೆ ಎಂಬುದು ನಗರವಾಸಿಗಳ ಆಗ್ರಹವಾಗಿದೆ.
ಸೂಕ್ತ ಕ್ರಮ: ಮೀನು ಮಾರುಕಟ್ಟೆಯಲ್ಲಿ ಬೆಳಗ್ಗೆ ಬಂದು ತರಕಾರಿ, ಹಣ್ಣಿನ ಅಂಗಡಿ ಹಾಕಿಕೊಳ್ಳುತ್ತಾರೆ. ಆಗ ಮಾನವೀಯತೆ ದೃಷ್ಟಿಯಿಂದ ಹಾಗೆಯೇ ಬಿಡುತ್ತಿದ್ದೇವು. ಮುಂದಿನ ದಿನಗಳಲ್ಲಿ ಸಿಬ್ಬಂದಿ ನೇಮಿಸಿ, ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ನಗರಸಭೆ ಆರೋಗ್ಯ ನಿರೀಕ್ಷಕ ಆರ್.ಎಂ. ವೆರ್ಣೇಕರ ತಿಳಿಸಿದರು.ಪಾರ್ಕಿಂಗ್ ವ್ಯವಸ್ಥೆ: ನೀಲೇಕಣಿ ಮೀನು ಮಾರುಕಟ್ಟೆಯ ಆವಾರದಲ್ಲಿ ಹಣ್ಣು, ತರಕಾರಿ ಅಂಗಡಿ ಹಾಕದಂತೆ ನೋಡಿಕೊಳ್ಳುವುದರ ಜತೆ ಆವಾರದಲ್ಲಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಎಚ್. ಕಾಂತರಾಜು ತಿಳಿಸಿದರು.