ಸಾರಾಂಶ
ಮೈಸೂರು ವಿವಿ ವಿಜ್ಞಾನ ಭವನದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಪುಷ್ಪನಮನ ಸಲ್ಲಿಸಿದರು. ಪ್ರೊ.ಎಸ್.ಆರ್. ಕೇಶವ, ವಿ.ಆರ್. ಶೈಲಜಾ, ಎನ್.ಎಸ್ ಚಿದಾನಂದಮೂರ್ತಿ ಇದ್ದರು.ಕನ್ನಡಪ್ರಭ ವಾರ್ತೆ ಮೈಸೂರು
ಸ್ವಸ್ಥ ಭಾರತ ನಿರ್ಮಾಣ ಮಾಡುವಲ್ಲಿ ವಾಲ್ಮೀಕಿ ರಾಮಾಯಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿವಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕವು ಗುರುವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದಾದ್ಯಂತ ಹಲವಾರು ರಾಮಾಯಣಗಳು ರಚಿತವಾಗಿದೆ. ಹಾಗಿದ್ದರೂ ಶತ ಶತಮಾನಗಳ ಹಿಂದೆ ರಚಿತವಾದ ವಾಲ್ಮೀಕಿ ರಾಮಾಯಣ ಇಡೀ ಭಾರತವನ್ನೇ ಬದಲು ಮಾಡಿದೆ ಎಂದು ಹೇಳಿದರು.
ಮನುಷ್ಯರು ಹಾಗೂ ಪ್ರಾಣಿಗಳನ್ನೊಳಗೊಂಡ ಜೀವಸಂಕುಲ ಸಂಘ ಜೀವಿಯಾಗಿ ಬದುಕಿದ್ದನ್ನು ರಾಮಾಯಣ ಹೇಳುತ್ತದೆ. ರಾಮಾಯಣ ಕೇವಲ ಒಂದು ಕಥೆಯಲ್ಲ ಅದೊಂದು ಸುಂದರವಾದ ಜೀವನವಾಗಿದೆ. ಈ ನಿಟ್ಟಿನಲ್ಲಿ ವಾಲ್ಮೀಕಿ ಕೃತಿಗಳ ಸಾರ ಮತ್ತು ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ನಾವು ಅವರ ಪರಂಪರೆಯನ್ನು ಗೌರವಿಸೋಣ, ಅದರ ಜೊತೆಯಲ್ಲಿ ಸಮಗ್ರತೆ ಮತ್ತು ಸಮರ್ಪಣಾ ಜೀವನವನ್ನು ನಡೆಸಲು ಶ್ರಮಿಸೋಣ. ಅವರ ಜೀವನ ಪಾಠಗಳಿಂದ ಮತ್ತಷ್ಟು ಸ್ಫೂರ್ತಿ ಪಡೆಯೋಣ ಎಂದು ಅವರು ಕರೆ ನೀಡಿದರು.ರಾಮಾಯಣ ಧರ್ಮ, ಜಾತಿ, ಭಾಷೆ ಗಡಿ ಮೀರಿದ ಮಹಾಕಾವ್ಯ ಇದೇ ವೇಳೆ ವಿಶೇಷ ಉಪನ್ಯಾಸ ನೀಡಿದ ಬೆಂಗಳೂರು ವಿವಿ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಸ್.ಆರ್. ಕೇಶವ, ರಾಮಾಯಣವು ಧರ್ಮ ಜಾತಿ, ಭಾಷೆ ಗಡಿ ಮೀರಿದ ಮಹಾಕಾವ್ಯವಾಗಿದೆ. ಇಂದು ಪ್ರಪಂಚದ ಹಲವು ರಾಷ್ಟ್ರಗಳು ರಾಮಾಯಣವನ್ನು ತಮ್ಮ ಸಂಸ್ಕೃತಿಯಂತೆ ಆಚರಿಸಲು ಮೂಲ ಕಾರಣರಾದವರು ಮಹರ್ಷಿ ವಾಲ್ಮೀಕಿ ಎಂದು ತಿಳಿಸಿದರು.
ವಾಸ್ತವವಾಗಿ ವಾಲ್ಮೀಕಿ ಜಯಂತಿ ಆಚರಿಸುವುದೆಂದರೆ ನಮಗೆ ನಾವೇ ಗೌರವ ಕೊಟ್ಟುಕೊಂಡಂತೆ. ಇತಿಹಾಸದ ಪಿತಾಮಹ ಎರೋಡಟಸ್ ಅವರನ್ನು ಇತಿಹಾಸಕಾರ ಎಂದು ನೋಡುವ ನಾವು, ರಾಮಾಯಣದ ಮೂಲಕ ಅಂದಿನ ಕಾಲಘಟ್ಟದ ಇತಿಹಾಸವನ್ನು ಒಳಗೊಂಡಂತೆ ಕೃತಿಯೊಂದನ್ನು ರಚಿಸಿರುವುದನ್ನು ನಾವು ನೆನೆಯಬೇಕಿದೆ ಎಂದು ಅವರು ಹೇಳಿದರು.ವಾಲ್ಮೀಕಿ ರಾಮಾಯಣವು 300 ಹೆಚ್ಚಿನ ಭಾಷೆಯಲ್ಲಿದ್ದು, ಅದು ವಾಲ್ಮೀಕಿ ಅವರ ಭಾಷಾ ಪ್ರಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಮಾಯಣ ತನ್ನ ಸಂಸ್ಕೃತಿಯ ಮೂಲಕ ಇಡೀ ಪ್ರಪಂಚವನ್ನೇ ಆಕ್ರಮಿಸಿದೆ. ಪ್ರಪಂಚದ ನಾನಾ ಭಾಗಗಳಲ್ಲಿ ರಾಮಾಯಣವನ್ನು ಆಚರಿಸುತ್ತದೆ. ಆ ಮೂಲಕ ಇಡೀ ವಿಶ್ವ ಭಾರತದತ್ತ ದೃಷ್ಟಿ ನೆಡುತ್ತಿದೆ ಎಂದು ಅವರು ಹೇಳಿದರು.
ಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕದ ಉಪ ಕುಲಸಚಿವ ಎನ್.ಎಸ್ ಚಿದಾನಂದಮೂರ್ತಿ, ಸಿಂಡಿಕೇಟ್ ಸದಸ್ಯರಾದ ಗೋಕುಲ್ ಗೋವರ್ಧನ್, ಡಾ,ಜೆ. ಶಿಲ್ಪಾ, ಡಾ.ನಟರಾಜ್ ಶಿವಣ್ಣ ಮೊದಲಾದವರು ಇದ್ದರು.