ಕಾವೇರಿಗೆ ಸಿಗುವ ಆದ್ಯತೆ ಉಕ ಭಾಗದ ನೀರಾವರಿಗೇಕಿಲ್ಲ

| Published : Dec 17 2023, 01:45 AM IST

ಕಾವೇರಿಗೆ ಸಿಗುವ ಆದ್ಯತೆ ಉಕ ಭಾಗದ ನೀರಾವರಿಗೇಕಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕಳಸಾ ಬಂಡೂರಿಯ 5 ಟಿಎಂಸಿ ನೀರು ಬಳಕೆಗೆ ನ್ಯಾಯಾಲಯ ಆದೇಶ ನೀಡಿ 5 ವರ್ಷ ಕಳೆದರೂ ಸರ್ಕಾರಗಳು ಅನುಷ್ಠಾನಕ್ಕೆ ಮುಂದಾಗಿಲ್ಲ.

ಕನ್ನಡಪ್ರಭ ವಾರ್ತೆ ರಾಮದುರ್ಗ

ಕಾವೇರಿ ನೀರಿಗೆ ನೀಡಿದ ಆದ್ಯತೆಯನ್ನು ಉತ್ತರ ಕರ್ನಾಟಕದ ಕೃಷ್ಣಾನದಿ ಮತ್ತು ಮಲಪ್ರಭಾ, ಮಹಾದಾಯಿ ನದಿ ನೀರಿಗೆ ರಾಜ್ಯ ಸರ್ಕಾರಗಳು ನೀಡದೇ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿವೆ ಎಂದು ಮಹಾದಾಯಿ ಹೋರಾಟಗಾರ ವಿಜಯ ಕುಲಕರ್ಣಿ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿಯ 5 ಟಿಎಂಸಿ ನೀರು ಬಳಕೆಗೆ ನ್ಯಾಯಾಲಯ ಆದೇಶ ನೀಡಿ 5 ವರ್ಷ ಕಳೆದರೂ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ಅನುಷ್ಠಾನಕ್ಕೆ ಮುಂದಾಗಿಲ್ಲ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಮಧ್ಯಸ್ಥಿಕೆ ವಹಿಸುವ ಮೂಲಕ ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಈ ಭಾಗದ ಜನರಿಗೆ ಕುಡಿಯಲು ನೀರು ಪೂರೈಕೆ ಯೋಜನೆ ಕೈಗೊಂಡು ಈ ಭಾಗದ ಜನರಿಗೆ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಮಹಾದಾಯಿ ನದಿ ನೀರು ಕೇವಲ ವಿದ್ಯುತ್ ಉತ್ಪಾದನೆಗೆ ಸೀಮಿತವಾಗಿದೆ. ಕುಡಿಯುವ ನೀರಿನ ಯೋಜನೆಯಾದ ಕಳಸಾ, ಬಂಡೂರಿ ಸೇರಿದಂತೆ ವಿವಿಧ ಉಪನದಿಗಳ ಯೋಜನೆಯ ಅರ್ಧ ಕಾಮಗಾರಿ ಮುಗಿದಿದ್ದು, ಬಾಕಿ ಕಾಮಗಾರಿಗೆ ರಾಜ್ಯ ಸರ್ಕಾರ ಬೇಗನೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವಂತೆ ನೀರಾವರಿ ಸಚಿವರನ್ನು ಒತ್ತಾಯಿಸಿದರು.

ಶ್ರೀಧನಲಕ್ಷ್ಮೀ ಶುಗರ್ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯಾಗದೆ ಮಲಪ್ರಭಾ ನದಿತೀರದ ರೈತರು ಕಂಗಾಲಾಗಿದ್ದು, ಸರ್ಕಾರ ಕಳಸಾ-ಬಂಡೂರಿ ನದಿ ತಿರುವು ಯೋಜನೆಗೆ ಆದ್ಯತೆ ನೀಡಿ ಕಾಮಗಾರಿ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ ಕೋನನ್ನವರ, ರಾಜಶೇಖರ ತೋಟಗೇರ ಇದ್ದರು.