ದೈಹಿಕ ಶಿಕ್ಷಕರನ್ನು ವರ್ಗಾಯಿಸದಂತೆ ಗ್ರಾಮಸ್ಥರ ಆಗ್ರಹ

| Published : Nov 12 2025, 01:00 AM IST

ಸಾರಾಂಶ

ತಾಲೂಕಿನ ಮುಗುಳವಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕರನ್ನು ವರ್ಗಾವಣೆ ಮಾಡದಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಯ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ತಾಲೂಕಿನ ಮುಗುಳವಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕರನ್ನು ವರ್ಗಾವಣೆ ಮಾಡದಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಯ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಉಳಿಸಿ ಉಳಿಸಿ ನಮ್ಮ ಶಾಲೆ ಉಳಿಸಿ’ ಎಂಬ ಘೋಷಣೆಯೊಂದಿಗೆ ಆರಂಭವಾದ ಗ್ರಾಮಸ್ಥರ ಪ್ರತಿಭಟನೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಹೆಸರಿನಲ್ಲಿ ವರ್ಗಾವಣೆ ಮಾಡದೆ ಶಾಲೆಯ ದೈಹಿಕ ಶಿಕ್ಷಕ ಶೇಖರ್ ನಾಯ್ಕ ಅವರನ್ನು ಇಲ್ಲೇ ಮುಂದುವರಿಸುವಂತೆ ಒತ್ತಾಯಿಸಿದರು.

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಗುಳುವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಘುನಂದನ್, 1929ರಲ್ಲಿ ಪ್ರಾರಂಭವಾಗಿದ್ದ ಈ ಶಾಲೆ ಶೀಘ್ರದಲ್ಲೇ ಶತಮಾನೋತ್ಸವ ಆಚರಿಸಿಕೊಳ್ಳುವ ವಸ್ತಿಲಿನಲ್ಲಿರುವ ಇಂತಹ ಉನ್ನತ ಶಾಲೆಯ ಶಿಕ್ಷಕರನ್ನು ಶಿಕ್ಷಣ ನೀತಿ ಹೆಸರಿನಲ್ಲಿ ವರ್ಗಾವಣೆ ಮಾಡಿರುವುದನ್ನು ಖಂಡಿಸಿದರು.

ಶಿಕ್ಷಕರನ್ನು ಇಲ್ಲೇ ಉಳಿಸುವಂತೆ ಒತ್ತಾಯಿಸಿ ಕಳೆದ ೨ ತಿಂಗಳಿಂದ ಶಾಸಕರು, ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೈಹಿಕ ಶಿಕ್ಷಣ ಶೇಖರ್ ನಾಯ್ಕ ಅವರನ್ನು ವರ್ಗಾವಣೆ ಮಾಡದಂತೆ ಆಗ್ರಹಿಸಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಗೆ ದಾಖಲಾತಿ ಕಡಿಮೆ ಇದ್ದ ಸಂದರ್ಭದಲ್ಲಿ ಪ್ರಸ್ತುತ ಎಲ್‌ಕೆಜಿ, ಯುಕೆಜಿ ಸಹಿತ ೮೮ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.

ದೈಹಿಕ ಶಿಕ್ಷಕ ಶೇಖರ್ ನಾಯ್ಕ ಅವರು ಕಳೆದ ೨೨ ವರ್ಷಗಳಿಂದ ಶಾಲೆಯಲ್ಲಿ ಗ್ರಾಮಸ್ಥರೊಂದಿಗೆ ವಿಶ್ವಾಸವಿಟ್ಟುಕೊಂಡು ಶ್ರಮಿಸುತ್ತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಮೂವರು ಶಿಕ್ಷಕರು ನಿವೃತ್ತಿಯಾಗಿದ್ದಾರೆಂದು ವಿವರಿಸಿದರು.

ಶಿಕ್ಷಣ ನೀತಿಯ ಹೆಸರಿನಲ್ಲಿ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡುತ್ತಿರುವುದು ಶಾಲೆಯ ಉಳಿವಿಗೋ ಎಂಬುದು ತಿಳಿಯುತ್ತಿಲ್ಲ. ಹಾಲಿ ಇರುವ ಇಬ್ಬರು ಶಿಕ್ಷಕರಿಗೆ ಗ್ರಾಮಸ್ಥರ ಬಗ್ಗೆ ಸಂಪರ್ಕದ ಕೊರತೆ ಇದೆ. ಜತೆಗೆ ಎಲ್ಲಾ ರೀತಿಯಲ್ಲೂ ಶಾಲೆ ಉಳಿಸಲು ಶ್ರಮಿಸುತ್ತಿರುವ ಶೇಖರ್ ನಾಯ್ಕ ಅವರನ್ನು ಇಲ್ಲೇ ಉಳಿಸಬೇಕು ಎಂದು ಒತ್ತಾಯಿಸಿದರು.

ಮಾನವೀಯತೆಯ ಉದ್ದೇಶದೊಂದಿಗೆ ೩೨ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರ ವರ್ಗಾವಣೆಯನ್ನು ರದ್ದುಮಾಡಬೇಕು ಹಾಗೂ ಸರ್ಕಾರಿ ಶಾಲೆಯನ್ನು ಉಳಿಸಲು ಶಿಕ್ಷಣ ಸಚಿವ ಮಧುಬಂಗಾರಪ್ಪನವರು ಮುಂದಾಗಬೇಕೆಂದು ಮನವಿ ಮಾಡಿದರು.

ಗ್ರಾಮಸ್ಥರಾದ ಪರಮೇಶ್ವರಪ್ಪ ಮಾತನಾಡಿ, ಖಾಸಗಿ ಶಾಲೆಗಳೊಂದಿಗೆ ಶಿಕ್ಷಕರು ಶಾಮೀಲಾಗಿರುವ ಪರಿಣಾಮ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ನಮ್ಮ ಪೂರ್ವಿಕರು ಈ ಶಾಲೆಗೆ ನಿವೇಶನ ನೀಡಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೃತಿ ಉಮೇಶ್, ಉಪಾಧ್ಯಕ್ಷರಾದ ಮಲ್ಲೇಶ್, ಗ್ರಾಮಸ್ಥರಾದ ಉಮೇಶ್, ಆನಂದ್, ಪರಮೇಶ್, ರೇವಣ್ಣ, ವಿಜಯ್‌ಕುಮಾರ್, ವಾಸು, ರಂಗಸ್ವಾಮಿ, ಸಂತೋಷ್, ಬಸವರಾಜು, ರಂಗಣ್ಣ ಮತ್ತಿತರರು ಭಾಗವಹಿಸಿದ್ದರು.