ವಿಶ್ವಕರ್ಮ ನಮ್ಮ ನೆಲದ ಸಾಂಸ್ಕೃತಿಕ ನಾಯಕ. ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಸಮಾಜದ ಬಂಧುಗಳ ಬದುಕು ಇಂದಿಗೂ ಸಂಕಷ್ಟದಲ್ಲಿದೆ. ವಿಶ್ವಕರ್ಮ ಸಮಾಜಕ್ಕೆ ರಾಜಕೀಯವಾಗಿ ಪ್ರಾತಿನಿಧ್ಯ ಸಿಗಬೇಕಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಂಚ ಕಸುಬುಗಳ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ವಿಶ್ವಕರ್ಮ ಬಂಧುಗಳು ಈ ಜಗತ್ತಿನ ತಾಂತ್ರಿಕ ಶಿಲ್ಪಿಗಳು ಹಾಗೂ ನಾಗರಿಕ ಸಮಾಜ ನಿರ್ಮಾಣದ ರೂವಾರಿಗಳು ಎಂದು ಶಾಸಕ ಎಚ್.ಟಿ.ಮಂಜು ಬಣ್ಣಿಸಿದರು.ತಾಲೂಕಿನ ಸೋಮನಹಳ್ಳಿಯಲ್ಲಿ ತಾಲೂಕು ವಿಶ್ವಕರ್ಮ ಮಹಾಸಭಾ ಹಾಗೂ ಸಮಾಜದ ಮುಖಂಡರ ನೇತೃತ್ವದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಿಶ್ವಕರ್ಮ ಸಂಘದ ಉದ್ಘಾಟನೆ ವೇಳೆ ಮಾತನಾಡಿ, ವಿಶ್ವಕರ್ಮರು ಸಂಘಟಿತರಾಗಿ ಜ್ಞಾನದ ಬೆಳಕಿನ ಶಕ್ತಿಯನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು ಎಂದರು.
ವಿಶ್ವಕರ್ಮ ಸಮಾಜದ ಸಂಸ್ಥಾಪಕ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಕೆ.ಪಿ.ನಂಜುಂಡಿ ಮಾತನಾಡಿ, ವಿಶ್ವಕರ್ಮ ನಮ್ಮ ನೆಲದ ಸಾಂಸ್ಕೃತಿಕ ನಾಯಕ. ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಸಮಾಜದ ಬಂಧುಗಳ ಬದುಕು ಇಂದಿಗೂ ಸಂಕಷ್ಟದಲ್ಲಿದೆ. ವಿಶ್ವಕರ್ಮ ಸಮಾಜಕ್ಕೆ ರಾಜಕೀಯವಾಗಿ ಪ್ರಾತಿನಿಧ್ಯ ಸಿಗಬೇಕಿದೆ ಎಂದರು.ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸ್ಥಾನಮಾನ ಸಿಗಬೇಕಾದರೆ ಸಂವಿಧಾನ ಬದ್ಧವಾಗಿ ನೀಡುತ್ತಿರುವ ಮೀಸಲಾತಿ ಸೌಲಭ್ಯ ನಮ್ಮ ಸಮಾಜಕ್ಕೆ ಸಿಗಬೇಕು. ಈ ದಿಕ್ಕಿನಲ್ಲಿ ಯಾವುದೇ ಹೋರಾಟಕ್ಕೂ ನಾನು ಸದಾ ಸಿದ್ಧನಿದ್ದೇನೆ. ನಮ್ಮ ಸಮಾಜಕ್ಕೆ ಮೀಸಲಾತಿ ಬೇಡ ಎನ್ನುವವರು ಸಮಾಜದ ವಿರೋಧಿಗಳು, ಮುಂದಿನ ದಿನಗಳಲ್ಲಿ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಪ್ರಾಯಶ್ಚಿತವಾಗಲಿದೆ ಎಂದರು.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಮಾತನಾಡಿ, ಸರ್ಕಾರ ಶೋಷಿತರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಕುಶಲ ಕಲಾ ಕೆಲಸಗಳಿಗೆ ಹೆಸರಾದ ವಿಶ್ವಕರ್ಮ ಸಮಾಜ ಗುಡಿ ಕೈಗಾರಿಕೆಗಳ ಜೊತೆಗೆ ಉದ್ಯಮ ಶೀಲತಾ ಗುಣಗಳನ್ನು ಮೈಗೂಡಿಸಿಕೊಂಡು ಉದ್ಯಮಿಗಳಾಗಿ ಬೆಳೆಯಬೇಕೆಂದರು.ಕಾರ್ಯಕ್ರಮದಲ್ಲಿ ಅರಕಲಗೂಡಿನ ಅರೆ ಮಾದನಹಳ್ಳಿ ಸುಜ್ಞಾನಾನಂದ ತೀರ್ಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು. ವಿಚಾರವಾದಿ ಹಾಗೂ ಚಿಂತಕ ಸ್ನೇಹ ರಂಗಸ್ವಾಮಿ ವಿಶೇಷ ಉಪನ್ಯಾಸ ನೀಡಿದರು.
ತಾಲೂಕು ವಿಶ್ವಕರ್ಮ ಕರಕುಶಲ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಸ್ವಾಗತಿಸಿದರು. ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ರೂಪೇಶಾಚಾರ್ ವಂದಿಸಿದರು. ಶಿಕ್ಷಕರಾದ ಮಂಜು ಮತ್ತು ರಮೇಶ್ ಕಾರ್ಯಕ್ರಮ ನಿರೂಪಿಸಿದರು.