ಸಮೀಕ್ಷೆಗೆ ಮನೆಗೆ ಬರ್ತಾರೆ, 60 ಪ್ರಶ್ನೆ ಕೇಳ್ತಾರೆ

| Published : Sep 20 2025, 01:00 AM IST

ಸಾರಾಂಶ

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ.22 ರಿಂದಲೇ ರಾಜ್ಯಾದ್ಯಂತ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಲಿದ್ದು, ಅ.7 ರವರೆಗೆ ನಡೆಯಲಿರುವ ಸಮೀಕ್ಷೆಯಲ್ಲಿ ಪ್ರತಿಯೊಂದು ಕುಟುಂಬವೂ ಭಾಗವಹಿಸಿ ಸರಿಯಾದ ಮಾಹಿತಿ ಒದಗಿಸುವಂತೆ ಮನವಿ ಮಾಡಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ.22 ರಿಂದಲೇ ರಾಜ್ಯಾದ್ಯಂತ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಲಿದ್ದು, ಅ.7 ರವರೆಗೆ ನಡೆಯಲಿರುವ ಸಮೀಕ್ಷೆಯಲ್ಲಿ ಪ್ರತಿಯೊಂದು ಕುಟುಂಬವೂ ಭಾಗವಹಿಸಿ ಸರಿಯಾದ ಮಾಹಿತಿ ಒದಗಿಸುವಂತೆ ಮನವಿ ಮಾಡಿದೆ.

ಈಗಾಗಲೇ ಸಮೀಕ್ಷೆ ಮಾಡುವ ಮನೆಗಳಿಗೆ ಸ್ಟಿಕ್ಕರ್‌ ಅಂಟಿಸುವಿಕೆ ಹಾಗೂ ಗಣತಿದಾರರಿಗೆ ಯಾವ ಮನೆಗಳ ಸಮೀಕ್ಷೆ ಮಾಡಬೇಕೆಂಬ ಹೊಣೆಗಾರಿಕೆ ನಿಗದಿ ಮಾಡಲಾಗಿದೆ. ಜತೆಗೆ ತರಬೇತಿಯನ್ನೂ ನೀಡಲಾಗಿದೆ.

ಹೀಗಾಗಿ ಆಕ್ಷೇಪ, ಅಸಮಾಧಾನಗಳ ನಡುವೆಯೇ ಶುರುವಾಗುತ್ತಿರುವ ಸಮೀಕ್ಷೆ ನಮೂನೆ, ಸಮೀಕ್ಷೆ ನಡೆಸುವ ವಿಧಾನ ಹಾಗೂ ಸಾರ್ವಜನಿಕರ ನಿರ್ವಹಿಸಬೇಕಾಗಿರುವ ಜವಾಬ್ದಾರಿಗಳ ಕುರಿತ ಮಾಹಿತಿ ಇಲ್ಲಿದೆ.

ಆಧಾರ್‌ ಅಥವಾ ಪಡಿತರ ಚೀಟಿ ಕಡ್ಡಾಯ:

ಸಮೀಕ್ಷೆದಾರರು ಮನೆಗಳಿಗೆ ಬಂದಾಗ ಕುಟುಂಬದ ಮುಖ್ಯಸ್ಥರು ಮನೆಯ ಎಲ್ಲ ಸದಸ್ಯರ ಆಧಾರ್‌ ಕಾರ್ಡ್‌ಗಳನ್ನು ತೋರಿಸಿ ವಿವರ ದಾಖಲಿಸಬೇಕಾಗುತ್ತದೆ. ಪಡಿತರ ಚೀಟಿ ಇದ್ದರೆ ಅದರಲ್ಲಿರುವ ಸಂಖ್ಯೆಯನ್ನು ಆ್ಯಪ್‌ನಲ್ಲಿ ನಮೂದಿಸಿದರೆ ಇಡೀ ಕುಟುಂಬದ ಸದಸ್ಯರ ವಿವರಗಳು ಸ್ವಯಂ ಆಗಿ ದಾಖಲು ಆಗುತ್ತದೆ. ಪಡಿತರ ಚೀಟಿ ಇಲ್ಲದಿದ್ದರೆ ಆಧಾರ್‌ ಕಾರ್ಡ್‌ ಕಡ್ಡಾಯ.

ಒಂದು ಬಾರಿ ಸದಸ್ಯರ ಎಲ್ಲ ವಿವರ ಸಂಗ್ರಹಿಸಿ ಕುಟುಂಬದ ಮುಖ್ಯಸ್ಥರ ಒಪ್ಪಿಗೆ ಪಡೆಯಲಾಗುವುದು. ಒಂದು ವೇಳೆ ತಪ್ಪಾಗಿದ್ದಾರೆ ಅದನ್ನು ಆಗಲೇ ಸರಿಪಡಿಸಿಕೊಳ್ಳಬೇಕು, ಒಂದು ಬಾರಿ ಅಪ್‌ಡೇಟ್‌ ಮಾಡಿದ ನಂತರ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ಇರುವುದಿಲ್ಲ. ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿದ್ದಲ್ಲಿ, ಪಡಿತರ ಚೀಟಿವಾರು ಪ್ರತ್ಯೇಕ ಕುಟುಂಬವೆಂದು ಪರಿಗಣಿಸಿ ಸಮೀಕ್ಷೆ ನಡೆಸಲಾಗುವುದು.

ಕರ್ನಾಟಕದ ಆಧಾರ್‌ ಮಾತ್ರ ಪರಿಗಣನೆ:

ರಾಜ್ಯದಲ್ಲಿ ನೋಂದಣಿಯಾದ ಆಧಾರ್‌ ವಿವರಗಳನ್ನು ಮಾತ್ರ ಉಪಯೋಗಿಸಲು ಅವಕಾಶವಿರುತ್ತದೆ. ಅಂತರ್‌ಜಾತಿ ವಿವಾಹವಾದ ಸಂದರ್ಭದಲ್ಲಿ ಮಕ್ಕಳ ಜಾತಿ ತಂದೆಯ ಜಾತಿಯನ್ನು ಅವಲಂಬಿಸಿ ನಿರ್ಧರಿತವಾಗುತ್ತದೆ. ಆದ ಕಾರಣ ಪತ್ನಿಯ ಜಾತಿ ಆಧಾರದ ಮೇಲೆ ಮಕ್ಕಳ ಜಾತಿ ಪರಿಗಣಿಸಲು ಅವಕಾಶವಿರುವುದಿಲ್ಲ. ಕುಟುಂಬದ ವಿವರಗಳನ್ನು ಕನ್ನಡ ಅಥವಾ ಇಂಗ್ಲಿಷ್‌ ಭಾಷೆಯಲ್ಲಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ.

7 ಕೋಟಿ ಜನರ ಸಮೀಕ್ಷೆ:

ರಾಜ್ಯದಲ್ಲಿನ ಸುಮಾರು 2.25 ಕೋಟಿ ಕುಟುಂಬಗಳ ಏಳು ಕೋಟಿ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿ ಜೊತೆಗೆ ಆಳುವ ಸರ್ಕಾರಗಳಿಗೆ ಮೂಲ ಸೌಲಭ್ಯ ವಂಚಿತ ಜನ ಹಾಗೂ ಪ್ರದೇಶಗಳ ಅಭಿವೃದ್ಧಿಗೆ ಕಾರ್ಯಕ್ರಮ ಜಾರಿಗೆ ತರಲು ಅನುಕೂಲವಾಗುವಂತಹ ಹಲವು ಮಾಹಿತಿಗಳನ್ನು ಸಂಗ್ರಹಿಸಲಾಗವುದು.

ಒಬ್ಬ ಸಮೀಕ್ಷೆದಾರ ಗರಿಷ್ಠ 150 ಕುಟುಂಬಗಳಿಗೆ ಭೇಟಿ ನೀಡಿ ಮಾಹಿತಿ ದಾಖಲು ಮಾಡಲಿದ್ದಾರೆ. ಸೆ.22ರಿಂದ ಅ.7ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಆದರೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಎರಡ್ಮೂರು ದಿನ ಹೆಚ್ಚುವರಿಯಾಗಿ ಸಮೀಕ್ಷೆ ನಡೆಯುವ ಸಾಧ್ಯತೆ ಇದೆ. ಸಮೀಕ್ಷೆ ವೇಳೆ 60 ಪ್ರಶ್ನೆಗಳ ಬಗ್ಗೆ ವಿವರಗಳನ್ನು ಕೇಳಲಿದ್ದು, ತಮ್ಮ ಊರಿನಲ್ಲಿ ಶಾಲೆ, ಆಸ್ಪತ್ರೆ, ಸ್ಮಶಾನ, ಸಾರಿಗೆ ಸೌಲಭ್ಯ ಸೇರಿ ಹಲವು ಮಾಹಿತಿಗಳನ್ನು ಸಂಗ್ರಹಿಸಲಾಗುವುದು.

ವಿದ್ಯುತ್ ಮೀಟರ್‌ ಆಧರಿಸಿ ಸಮೀಕ್ಷೆ:

ಸಮೀಕ್ಷೆ ತ್ವರಿತವಾಗಿ ನಡೆಯಲು ವಿಶೇಷ ಆ್ಯಪ್‌ ಅಭಿವೃದ್ದಿಪಡಿಸಿದ್ದು, ಗಣತಿದಾರರು ವಿದ್ಯುಚ್ಛಕ್ತಿ ಮೀಟರ್‌ಗಳನ್ನು ಆಧರಿಸಿ ಸಿದ್ಧಪಡಿಸಿದ ಮನೆಗಳ ಸಂಖ್ಯೆಗಳ ಆಧಾರದ ಮೇಲೆ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಕುಟುಂಬಕ್ಕೆ ಸಂಬಂಧಿಸಿ ಎರಡು ಭಾಗಗಳಲ್ಲಿ ಮಾಹಿತಿ ಸಂಗ್ರಹಿಸಲಾಗುವುದು. ಕಾಲಂ 1ರಿಂದ 40ರವರೆಗೆ ಪ್ರತಿ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಮಾಹಿತಿ ಹಾಗೂ ಕಾಲಂ 40ರಿಂದ 60ರವರೆಗೆ ಕುಟುಂಬಕ್ಕೆ ಸಂಬಂಧಿಸಿದ ಒಟ್ಟಾರೆ ಮಾಹಿತಿ ದಾಖಲು ಮಾಡಲಾಗುವುದು.

‘ಗೃಹಲಕ್ಷ್ಮೀ’ ಆದಾಯ ಪರಿಗಣಿಸಲ್ಲ

ಸರ್ಕಾರದ ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ನೀಡುತ್ತಿರುವ ಮಾಸಿಕ ಎರಡು ಸಾವಿರ ರು.ಗಳನ್ನು ವಾರ್ಷಿಕ 24 ಸಾವಿರ ರು.ಗಳನ್ನು ವಾರ್ಷಿಕ ಆದಾಯ ಎಂದು ಪರಿಗಣಿಸುವುದಿಲ್ಲ.

ಸಹಾಯವಾಣಿ

ಸಮೀಕ್ಷೆ ಸಂದರ್ಭಗಳಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಸಾರ್ವಜನಿಕರು ರಾಜ್ಯಮಟ್ಟದ ಸಹಾಯವಾಣಿ (ರಾಜ್ಯ ಹಿಂದುಳಿದ ವರ್ಗಗಳ ಆಯೋಗ) 8050770004 ಸಂಪರ್ಕಿಸಬಹುದು.

ಡಿಸೆಂಬರ್‌ನಲ್ಲಿ ವರದಿ ಸಲ್ಲಿಕೆ

ಸಮೀಕ್ಷೆ ಪೂರ್ಣಗೊಂಡ ನಂತರ ಒಂದು ತಿಂಗಳ ಸಂಗ್ರಹಿಸಿರುವ ಮಾಹಿತಿ ಆಧರಿಸಿ, ತಜ್ಞರ ಸಮಿತಿ ವಿಶ್ಲೇಷಣೆ ಮಾಡಲಿದೆ. ಡಿಸೆಂಬರ್‌ ಒಳಗಾಗಿ ವರದಿ ನೀಡಲು ಆಯೋಗ ಉದ್ದೇಶಿಸಿದೆ.