ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಹೊಡೆಯುವ ಮೂಲಕ ಕೊಡಗು ತಂಡ 1 ಗೋಲಿನ ರೋಚಕ ಗೆಲುವು ಪಡೆಯಿತು.
ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಹಾಕಿ ಪಂದ್ಯಾವಳಿಯ ಫೈನಲ್‌ನ ಬಾಲಕಿಯರ ವಿಭಾಗದಲ್ಲಿ ಕೊಡಗು ತಂಡ ಹಾಗೂ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡಗಳು ಜಯಗಳಿಸಿ ವಿನ್ನರ್ ಟ್ರೋಫಿ ಪಡೆದವು.
ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಕೊಡಗು ಹಾಗೂ ಮೈಸೂರು ತಂಡಗಳ ನಡುವೆ ನಡೆದ ತೀವ್ರ ಹಣಾಹಣಿಯಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಹೊಡೆಯುವ ಮೂಲಕ ಕೊಡಗು ತಂಡ 1 ಗೋಲಿನ ರೋಚಕ ಗೆಲುವು ಪಡೆಯಿತು. ಕೊಡಗು ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರ್ತಿ ಪ್ರತೀಕಾ ಅವರು ಆಟವಿನ್ನು 10 ನಿಮಿಷ ಬಾಕಿಯಿರುವಾಗಲೇ ಮೊದಲ ಗೋಲು ಹೊಡೆದು ಗೆಲುವಿನ ದಡ ಮುಟ್ಟಿಸಿದರು.ಬಾಲಕರ ವಿಭಾಗದಲ್ಲಿ ಮೊದಲಾರ್ಧ ಆಟದಲ್ಲಿ ತೀವ್ರ ಸೆಣಸಾಟ ಕಂಡು ಬಂದರೂ ಬಳಿಕ ಬಳ್ಳಾರಿ ತಂಡ ಗೆಲುವು ಕೈ ಚೆಲ್ಲಿತು. ಬೆಂಗಳೂರು ದಕ್ಷಿಣ ತಂಡ 6 ಗೋಲು ಪಡೆದು ಭರ್ಜರಿ ಗೆಲುವು ಪಡೆದರೆ, ಬಳ್ಳಾರಿ ತಂಡ 1 ಗೋಲನ್ನಷ್ಟೇ ಪಡೆದು ಪರಾಭವಗೊಂಡಿತು. ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡದ ಎಂ.ಸಿ.ಜಷೀನ್ ಅವರು 4 ಗೋಲುಗಳನ್ನು ಹೊಡೆದು ಗೆಲುವು ಸುಲಭವಾಗಿಸಿಕೊಂಡರು.
ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡದ ಪಳಂಗಪ್ಪ ಬೆಸ್ಟ್ ಗೋಲ್‌ಕೀಪರ್, ಬಳ್ಳಾರಿ ತಂಡದ ಯಲ್ಲಪ್ಪ ಬೆಸ್ಟ್ ಡಿಫೆಂಡರ್ ಹಾಗೂ ಬೆಂಗಳೂರು ದಕ್ಷಿಣ ತಂಡದ ಎಂ.ಸಿ. ಜಷನ್ ಸ್ಕೋರರ್ ಬಹುಮಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಕೊಡಗು ತಂಡದ ಪ್ರತೀಕಾ ಅವರು ಬೆಸ್ಟ್ ಡಿಫೆಂಡರ್, ಮೈಸೂರು ತಂಡದ ಯುವಿಕಾ ಬೆಸ್ಟ್ ಗೋಲ್ ಕೀಪರ್ ಹಾಗೂ ಲಕ್ಷ್ಮಿ ಬೆಸ್ಟ್ ಸ್ಕೋರರ್ ಬಹುಮಾನ ಪಡೆದರು.ಟ್ರೋಫಿ ವಿತರಣೆ:
ಸಂಜೆ ಜರುಗಿದ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮಣ ಆರ್. ಹಳ್ಳದಮನಿ ಅವರು ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಗೆಲುವು ದಾಖಲಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತರುವಂತೆ ಹಾರೈಸಿದರು.ತೆಕ್ಕಲಕೋಟೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗೇಶ್ವರರಾವ್ ಅವರು ವಿದ್ಯಾರ್ಥಿಗಳ ಕ್ರೀಡಾಸ್ಫೂರ್ತಿಯನ್ನು ಪ್ರಶಂಸಿದರು. ಕಲ್ಯಾಣ ಕರ್ನಾಟಕ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸಂತೋಷ್ ರೆಡ್ಡಿ ಆರ್., ಪ್ರಾಂಶುಪಾರ ಸಂಘದ ಕಾರ್ಯಾಧ್ಯಕ್ಷ ಎಂ. ಶ್ರೀಶೈಲ, ಅಧ್ಯಕ್ಷ ಡಾ. ಎಂ. ರಾಜಣ್ಣ, ಮಧುಸೂದನ್ ಮಾಗಿ, ಮುನ್ಸಿಪಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಂಕಪ್ಪ ಉಪಸ್ಥಿತರಿದ್ದರು.
ಮೂರು ದಿನಗಳ ಪಂದ್ಯಾವಳಿಯಲ್ಲಿ ಮೈಸೂರು, ಬೆಂಗಳೂರು, ಕೊಡಗು, ಮಂಡ್ಯ ಸೇರಿದಂತೆ ಬಾಲಕರ 21 ಹಾಗೂ ಬಾಲಕಿಯರ 19 ತಂಡಗಳು ಭಾಗವಹಿಸಿದ್ದವು.