ಹಾವೇರಿ: ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿನವರು ಡಿಎಂಕೆಯವರ ರಾಜಕೀಯ ಹುನ್ನಾರಕ್ಕೆ ನಮ್ಮ ರಾಜ್ಯದ ಹಿತಾಸಕ್ತಿ ಬಲಿಕೊಟ್ಟಿದ್ದಾರೆ. ಸಿಎಂ ತಜ್ಞರ ಜತೆ ಚರ್ಚಿಸಿ, ಸ್ಪಷ್ಟತೆಯಿಂದ ಮರು ಚಿಂತನೆ ಮಾಡಿ, ತಮ್ಮ ಪಕ್ಷದ ನಾಯಕರನ್ನು ಒಪ್ಪಿಸಿ, ಕ್ರಾಂತಿಕಾರಿ ಬದಲಾವಣೆಗೆ ದೊಡ್ಡ ಬೆಂಬಲ ನೀಡಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕರ್ನಾಟಕ ಮಹಿಳೆಯರಿಗೆ ಮೀಸಲಾತಿ ನೀಡುವ ಪ್ರಥಮ ರಾಜ್ಯಗಳಲ್ಲಿ ಒಂದು. ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ ಮಾಡಿರುವ ಅಧಿಕಾರ ವಿಕೇಂದ್ರೀಕರಣದೊಂದಿಗೆ ಮಹಿಳಾ ಮೀಸಲಾತಿಯನ್ನೂ ಜಾರಿ ಮಾಡಲಾಯಿತು. 1993ರಲ್ಲಿ ದೇವೇಗೌಡ ಅವರು ಮುಖ್ಯಮಂತ್ರಿ ಇದ್ದಾಗ ಅದನ್ನು ಮತ್ತೊಮ್ಮೆ ಜಾರಿ ಮಾಡಲಾಯಿತು. ಅದನ್ನು ನೋಡಿ 1994ರಲ್ಲಿ ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್ ಸಂವಿಧಾನದ 73ನೇ ತಿದ್ದುಪಡಿ ಮಾಡಿ ಮಹಿಳಾ ಮೀಸಲಾತಿ ಜಾರಿಗೆ ತಂದರು. ಸಿದ್ದರಾಮಯ್ಯ ಮಹಿಳಾ ಮೀಸಲಾತಿ ಮೊದಲು ಕಾಂಗ್ರೆಸ್ ತಂದಿದೆ ಎನ್ನುತ್ತಾರೆ. ಆದರೆ, ಕಾಂಗ್ರೆಸ್ಸೇತರ ಸರ್ಕಾರ ಮೊದಲು ಮಹಿಳಾ ಮೀಸಲಾತಿ ಜಾರಿಗೆ ತಂದಿದೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮೆಚ್ಚಿಸಲು ಹೀಗೆ ಹೇಳುತ್ತಾರೆ ಎಂದು ದೂರಿದರು.2029ಕ್ಕೆ ಜಾರಿ ಉದ್ದೇಶ:ಕ್ಷೇತ್ರ ಪುನರ್‌ವಿಂಗಡನೆ ಹಾಗೂ ಮಹಿಳಾ ಮೀಸಲಾತಿಯನ್ನು 2029ರಲ್ಲಿ ಜಾರಿ ಮಾಡಲು ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಒತ್ತಡವೂ ಇತ್ತು. ಅದಕ್ಕೆ ಕೇಂದ್ರ ಸರ್ಕಾರ ಮತ್ತೆ ತಿದ್ದುಪಡಿ ತಂದಿತು. ಶೇ. 50ರಷ್ಟು ಸೀಟು ಹೆಚ್ಚಳವಾಗಬೇಕೆಂದರೆ ಡಿಲಿಮಿಟೇಷನ್ ಆಗಬೇಕು. ಇದರ ಜತೆಗೆ ಮಹಿಳೆಯರಿಗೆ ಶೇ. 33 ಮೀಸಲಾತಿ 2029ಕ್ಕೆ ಜಾರಿಗೆ ಬರಬೇಕು ಎನ್ನುವ ಉದ್ದೇಶಿಸಿತ್ತು. ಆದರೀಗ ಪ್ರತಿಪಕ್ಷಗಳು ಡಿಲಿಮಿಟೇಷನ್ ಯಾವಾಗಲೂ ಆಗಿಯೇ ಇಲ್ಲ ಅನ್ನುವಂತೆ ಮಾತನಾಡುತ್ತಾರೆ ಎಂದರು.ದಕ್ಷಿಣಕ್ಕೆ ಅನ್ಯಾಯ: ಪ್ರತಿ ಜನಗಣತಿ ಆದ ನಂತರ ಕ್ಷೇತ್ರಗಳ ಡಿಲಿಮಿಟೇಷನ್ ಆಗಬೇಕು. 1971ರ ಜನಗಣತಿಯನ್ನು 1976ರಲ್ಲಿ ಇಂದಿರಾ ಗಾಂಧಿ ಅವರು ಎಮರ್ಜೆನ್ಸಿ ಸಂದರ್ಭದಲ್ಲಿ 2020ರ ವರೆಗೆ ಫ್ರೀಜ್ ಮಾಡಿದ್ದರು. ಆಗ ಕಾಂಗ್ರೆಸ್ ಮಾಡಿರುವ ನೀತಿಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ 2026ರ ಜನಸಂಖ್ಯೆ ಆಧಾರದ ಮೇಲೆ ಡಿಲಿಮಿಟೇಷನ್ ಆಗಲಿ ಎಂದು ಹೇಳಿದ್ದಾರೆ. ಹೊಸ ಜನಗಣತಿ ಆಧಾರದ ಮೇಲೆ ಡಿಲಿಮಿಟೇಷನ್ ಆಗಲಿ ಎಂದರೆ ದಕ್ಷಿಣ ಭಾರತಕ್ಕೆ ಮತ್ತೆ ಅನ್ಯಾಯವಾಗಲಿದೆ. ಇದರ ಅರಿವಿದೆಯೋ ಇಲ್ಲವೋ ಕೇವಲ ರಾಜಕಾರಣಕ್ಕಾಗಿಯೇ ವಿತಂಡವಾದ, ಸತ್ಯಕ್ಕೆ ದೂರ ಇರುವ ವಾದ ಮಾಡಿ ದಕ್ಷಿಣ ಭಾರತದ ಜನರು, ಜನಪ್ರತಿನಿಧಿಗಳ ಆಯ್ಕೆಗೆ ಮತ್ತು ಕ್ಷೇತ್ರಗಳ ಸಂಖ್ಯೆಗೆ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ದೊಡ್ಡ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.ಒಳ್ಳೆಯ ಅವಕಾಶ ತಪ್ಪಿತು: 2011ರಲ್ಲಿ ನಮ್ಮ ಕರ್ನಾಟಕದ ಜನಸಂಖ್ಯೆ 5 ಕೋಟಿ ಇತ್ತು. ಆ ಜನಸಂಖ್ಯೆಯನ್ನು 42 ಸೀಟುಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೆ ಕೇವಲ ರಾಜಕೀಯ ಕಾರಣಕ್ಕೆ, ಡಿಎಂಕೆಯವರ ರಾಜಕೀಯ ಹುನ್ನಾರಕ್ಕೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಮ್ಮ ರಾಜ್ಯದ ಹಿತಾಸಕ್ತಿ ಬಲಿಕೊಟ್ಟಿದೆ ಎಂದು ಆರೋಪಿಸಿದರು.ಸಿದ್ದರಾಮಯ್ಯ ಅವರು ಸ್ಪಷ್ಟತೆಯಿಂದ ಚಿಂತನೆ ಮಾಡಿ ಬರುವ ದಿನಗಳಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಿದರೆ ಮತ್ತು ಅವರ ಪಕ್ಷದ ನಾಯಕರು ಒಪ್ಪಿಗೆ ಸೂಚಿಸಿದರೆ ದೊಡ್ಡ ಕ್ರಾಂತಿಕಾರಿಯಾಗುತ್ತದೆ ಎಂದರು.