ಸಾರಾಂಶ
ಸುಳ್ಯ: ಕರಾವಳಿಯುದ್ದಕ್ಕೂ ದಕ್ಷಿಣೋತ್ತರ ಜಿಲ್ಲೆಗಳಲ್ಲಿ, ಕಾಸರಗೋಡು ಜಿಲ್ಲೆಗಳಲ್ಲಿ ಕನ್ನಡ ಉಳಿಸಲು ಬೆಳೆಸಲು ಕಾರಣವಾಗಿರುವ ಯಕ್ಷಗಾನಕ್ಕೆ ಒಂದು ಜಾತ್ರೆಯ ಸ್ವರೂಪ ಕೊಟ್ಟಿರುವುದು ಸಂಪಾಜೆಯ ಯಕ್ಷೋತ್ಸವ. ಕನ್ನಡ ರಾಜ್ಯೋತ್ಸವದ ದಿನದಂದೇ ಯಕ್ಷೋತ್ಸವ ನಡೆಯುತ್ತಿರುವುದು ಚಿನ್ನಕ್ಕೆ ಪರಿಮಳ ಬಂದ ರೀತಿಯಲ್ಲಿ ಆಗಿದೆ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ನೇತೃತ್ವದಲ್ಲಿ ಶನಿವಾರ ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಸಂಪಾಜೆ ಯಕ್ಷೋತ್ಸವ-೨೦೨೫ ಹಾಗೂ ಬ್ರಹ್ಮೈಕ್ಯ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಎಡನೀರು ಶ್ರೀಗಳು ಹಾಗೂ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯ ಮಠ ವಿದ್ಯಾಪ್ರಸನ್ನ ತೀರ್ಥರು ದೀಪ ಪ್ರಜ್ವಲಿಸಿದರು.
ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಪ್ರಶಸ್ತಿ ಪ್ರದಾನ:
ಬೆಂಗಳೂರಿನಲ್ಲಿ ಹಿರಿಯ ವಕೀಲ ಹಾಗೂ ಮಾಜಿ ಅಡ್ವೇಕೇಟ್ ಜನರಲ್ ಉದಯ ಹೊಳ್ಳರಿಗೆ ಶ್ರೀ ಕೇಶವಾನಂದ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿ, ಪಿಟೀಲು ವಾದಕ ವಿಠಲ ರಾಮಮೂರ್ತಿ ಚೆನ್ನೈಗೆ ಶ್ರೀ ಕೇಶವಾನಂದ ಭಾರತೀ ಸಂಗೀತ ಪ್ರಶಸ್ತಿ, ಮೂಡಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್‌ಗೆ ಶ್ರೀ ಕೇಶವಾನಂದ ಭಾರತೀ ಶೈಕ್ಷಣಿಕ ಪ್ರಶಸ್ತಿ, ಉಜಿರೆ ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್‌ರಿಗೆ ಕೇಶವಾನಂದ ಭಾರತೀ ಯಕ್ಷಗಾನಾದ್ವರ್ಯು ಪ್ರಶಸ್ತಿ, ಕುಡುಪು ನರಸಿಂಹ ತಂತ್ರಿ ಮಂಗಳೂರು ಅವರಿಗೆ ಯಕ್ಷೋತ್ಸವ ವೈದಿಕ ಪ್ರಶಸ್ತಿ, ಬೆಂಗಳೂರು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯವಾದಿ ಸಿರಿಲ್ ಪ್ರಸಾದ್ ಪಾಸ್‌ರಿಗೆ ಯಕ್ಷೋತ್ಸವ ಕಲಾಪೋಷಕ ಪ್ರಶಸ್ತಿ, ಯಕ್ಷಗಾನ ಕಲಾವಿದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರಿಗೆ ಯಕ್ಷೋತ್ಸವ ಸಮ್ಮಾನ ನೀಡಲಾಯಿತು.ಜ್ಯೋತಿಷಿ ಹಾಗೂ ಆಗಮ ಶಾಸ್ತ್ರಜ್ಞರಾದ ಪಂಜ ಭಾಸ್ಕರ ಭಟ್ ಅವರಿಗೆ ಗುರುವಂದನೆ ಮಾಡಲಾಯಿತು. ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯವಾದಿ ಜಿ. ಲಕ್ಷ್ಮೀಶ ರಾವ್, ಯಕ್ಷಗಾನ ಅರ್ಥಧಾರಿಗಳಾದ ಡಾ.ಎಂ.ಪ್ರಭಾಕರ ಜೋಷಿ, ಯಕ್ಷಗಾನ ಕಲಾವಿದರಾದ ವಾಸುದೇವ ರಂಗಾಭಟ್ ಮಧೂರು, ಯಕ್ಷಗಾನ ಕಲಾವಿದ ಹರೀಶ ಭಟ್ ಬಳಂತಿಮೊಗರು ಅಭಿನಂದನಾ ನುಡಿಗಳನ್ನಾಡಿದರು.ಉಡುಪಿಯ ಜಾದೂಗಾರರಾದ ಪ್ರೊ.ಶಂಕರ್, ಡಾ.ಕೀಲಾರು ಸ್ಮರಣೆ ಮಾಡಿದರು. ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಟಿ. ಶ್ಯಾಮ್ ಭಟ್ ಹಾಗೂ ಅವರ ಮನೆಯವರು ಎಲ್ಲರನ್ನೂ ಬರಮಾಡಿಕೊಂಡರು.
ಯೋಗೀಶ್ ಶರ್ಮಾ ಬಳ್ಳಪದವು ಪ್ರಾರ್ಥಿಸಿದರು. ಗಣೇಶ್ ಭಟ್ ಬೆಂಗಳೂರು ಹಾಗೂ ಪ್ರಿಯಾಂಕ ಭಟ್ ಸನ್ಮಾನಿತರನ್ನು ಪರಿಚಯಿಸಿದರು. ಹಿರಣ್ಯ ವೆಂಕಟೇಶ್ವರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶನಿವಾರ ಮಧ್ಯಾಹ್ನ 1.30ಕ್ಕೆ ಆರಂಭಗೊಂಡ ಯಕ್ಷಗಾನ ಪ್ರದರ್ಶನ ಭಾನುವಾರ ಸಂಜೆ 4 ಗಂಟೆ ವರೆಗೂ ನಿರಂತರವಾಗಿ ನಡೆಯಿತು.;Resize=(128,128))
;Resize=(128,128))