ಆಳವಾದ ಜ್ಞಾನವನ್ನು ಹೊಂದಿದ್ದ ಸವಿತಾ ಮಹರ್ಷಿಗಳ, ತತ್ವಾದರ್ಶಗಳನ್ನು ಇಂದಿನ ಯುವಜನರು ಪಾಲಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮುರುಳೀಧರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರುಆಳವಾದ ಜ್ಞಾನವನ್ನು ಹೊಂದಿದ್ದ ಸವಿತಾ ಮಹರ್ಷಿಗಳ, ತತ್ವಾದರ್ಶಗಳನ್ನು ಇಂದಿನ ಯುವಜನರು ಪಾಲಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮುರುಳೀಧರ್ ತಿಳಿಸಿದ್ದಾರೆ. ನಗರದ ಗಾರ್ಡನ್ ರಸ್ತೆಯಲ್ಲಿರುವ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತುಮಕೂರು ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಮತ್ತು ತಾಲೂಕು ಸವಿತಾ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿಗಳ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಪರವಾಗಿ ಪಾಲ್ಗೊಂಡು ಮಾತನಾಡಿದರು. ಸವಿತಾ ಮಹರ್ಷಿಗಳನ್ನು ಶಿವನ ಮೂರನೇ ಕಣ್ಣಿನಿಂದ ಉದ್ಬವಿಸಿದವರು ಎಂದು ಹೇಳಲಾಗುತ್ತಿದೆ. ಇಂತಹ ಸಮುದಾಯದಲ್ಲಿ ಇರುವ ಯುವಜನರು ತಾವು ಕೂಡ, ಸವಿತಾ ಮಹರ್ಷಿಗಳಂತೆ ದೊಡ್ಡ ವ್ಯಕ್ತಿಗಳಾಗಲು ಶ್ರಮಿಸಬೇಕೆಂದರು.
ಸವಿತಾ ಮಹರ್ಷಿಗಳ ಕುರಿತು ಉಪನ್ಯಾಸ ನೀಡಿದ ಪದವಿಧರ ಮುಖ್ಯ ಶಿಕ್ಷಕ ಗೋವಿಂದರಾಜು, ಸವಿತಾ ಮಹರ್ಷಿಗಳ ಹುಟ್ಟಿನ ಬಗ್ಗೆ ಅನೇಕ ಐತಿಹ್ಯಗಳಿವೆ. ಪಾರ್ವತಿ ದೇವಿಯ ಸಲಹೆಯಂತೆ ಸವಿತಾ ಮಹರ್ಷಿಗಳನ್ನು ಸೃಷ್ಟಿಸಿ, ತನ್ನ ಆಯುಷ್ಯ ಕರ್ಮದ ನಂತರ, ಲೋಕ ಕಲ್ಯಾಣಕ್ಕಾಗಿ ನೇಮಿಸಿದ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಒಂದು ಕೈಯಲ್ಲಿ ಕಮಂಡಲ, ಮತ್ತೊಂದು ಕೈಯಲ್ಲಿ ವೀಣೆಯ ಜೊತೆಗೆ, ಶಿವನೇ ಡಮರುಗವನ್ನು ಕೊಡುಗೆಯಾಗಿ ನೀಡಿದ ಎನ್ನಲಾಗುತ್ತದೆ.ಕಮಂಡಲ ಧನ್ವಂತರಿಯ ಸಂಕೇತವಾದರೆ, ವೀಣೆಜ್ಞಾನದ ಸಂಕೇತವಾಗಿದೆ. ಇಂತಹ ಮಹಾನ ಕುಲದಲ್ಲಿ ಹುಟ್ಟಿರುವ ನಾವುಗಳು ಇಂದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅರ್ಥಿಕವಾಗಿ, ಔದ್ಯೋಗಿಕವಾಗಿ, ರಾಜಕೀಯವಾಗಿ ಹಿಂದೆ ಉಳಿದಿದ್ದೇವೆ.ತನ್ನನ್ನು ಅನುಮೋದಿಸುವ ಮತ್ತೊಬ್ಬ ಶಾಸಕನಿಲ್ಲದಿದ್ದರೂ ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಗಳಾಗಿ ಹಲವಾರು ಕ್ರಾಂತಿ ಕಾರಕ ಕಾಯ್ದೆಗಳನ್ನು ತಂದು ತಳ ಸಮುದಾಯಗಳ ಏಳಿಗೆಗೆ ಶ್ರಮಿಸಿದ್ದಾರೆ. ಅವರಂತಯೇ ಇಂದಿನ ಯುವಜನರು ಸಮಾಜದ ಏಳಿಗೆಯ ಕಡೆಗೆಗಮನಹರಿಸಬೇಕೆಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿದರು. ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎಚ್.ವಿ.ಮಂಜೇಶ್ ಮಾತನಾಡಿ, ಜಿಲ್ಲೆಯ ಶಾಸಕರು, ಸಂಸದರುಗಳ ಸಹಕಾರದಿಂದ ಸವಿತಾ ಸಮಾಜದ ಸಮುದಾಯಭವನವನ್ನು ಹೊಂದಲು ಸಾಧ್ಯವಾಗಿದೆ. ಈ ಸಮುದಾಯ ಭವನದ ನಿರ್ಮಾಣಕ್ಕೆ ನಗರ ಶಾಸಕ ಜೋತಿಗಣೇಶ್ ಸುಮಾರು 26 ಲಕ್ಷ ರು.ಗಳನ್ನು ನೀಡಿದ್ದಾರೆ. ಇದುವರೆಗೂ 46 ಲಕ್ಷ ರುಗಳಿಗೂ ಹೆಚ್ಚಿನ ಹಣವನ್ನು ವಿನಿಯೋಗ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಂಸದ ವಿ. ಸೋಮಣ್ಣ ಅವರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಸುಮಾರು 20 ಲಕ್ಷ ರುಗಳಲ್ಲಿ ಹಾಸ್ಟಲ್‌ಕೊಠಡಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಮುಖಂಡರಾದಬಿ.ಎಸ್.ಪಾರ್ಥಸಾರಥಿ, ಟಿ.ಆರ್.ಮೈಲಾಕ್ಷಪ್ಪ, ಟಿ.ವಿ.ವೆಂಕಟೇಶ್, ಟಿ.ಎಸ್.ನಂಜರಾಜಯ್ಯ, ಜಿ.ಸಿ.ಶೇಖರ, ಟಿ.ವಿ.ಅನ್ನಪೂರ್ಣರಘುನಾಥ್ ಅವರುಗಳನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕೆ.ಮಿರ್ಜಿ, ಸುರೇಶಕುಮಾರ್, ಜಿಲ್ಲಾ ಪ್ರತಿನಿಧಿ ಕೆ.ವಿ.ನಾರಾಯಣ್, ತುಮಕೂರು ನಗರ ಹಾಗೂ ತಾಲೂಕು ಸಮಿತಿ ಅಧ್ಯಕ್ಷರಾದ ಕಟ್‌ವೆಲ್ ರಂಗನಾಥ್. ಬಿ, ಪ್ರತಿನಿಧಿ ಸುರೇಶ್.ಎ.ಎಸ್, ಜಿಲ್ಲಾ ವಾದ್ಯಗಾರರ ಸಂಘದ ಅಧ್ಯಕ್ಷ ಗಂಗಾಧರ್. ಬಿ, ಸಮುದಾಯದ ಮುಖಂಡರಾದ ಬಿ.ಎಸ್.ಪಾರ್ಥಸಾರಥಿ, ಟಿ.ಡಿ.ಪುನೀತ್, ಕೆ.ಸಿ.ವರದರಾಜು, ಮಹೇಶ್ವರ.ಕೆ.ಜಿ, ಟಿ.ಎನ್.ಗೋವಿಂದರಾಜು, ದಾಸರಾಜು.ಬಿ.ವಿ.,ಸ್ವದೇಶಿ ವಿಶ್ವನಾಥ್, ಎ.ಎಲ್.ಇಂದ್ರಕುಮಾರ್, ಆರ್.ರಘು, ಟಿ.ಸಿ.ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.