ಸಾರಾಂಶ
ಯಾದಗಿರಿ : ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಚಿತ್ತಾಪುರ ಬಳಿಕ ಈಗ ಪಕ್ಕದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲೂ ಆರ್‌ಎಸ್‌ಎಸ್ ಪಥಸಂಚಲನ ಕುರಿತು ದಂಗಲ್ ಆರಂಭವಾಗಿದೆ. ಕೆಂಭಾವಿ ಪಟ್ಟಣದಲ್ಲಿ ನ.4ರಂದು ಆರ್‌ಎಸ್‌ಎಸ್ ನಡೆಸಲು ಉದ್ದೇಶಿಸಿರುವ ಪಥಸಂಚಲನಕ್ಕೆ ಅನುಮತಿ ಕುರಿತ ವಿಚಾರ ದಲಿತಪರ ಸಂಘಟನೆಗಳ ಆಕ್ಷೇಪಗಳಿಂದಾಗಿ ಜಿಲ್ಲಾಡಳಿತಕ್ಕೆ ಉಗುಳಲೂ ಆಗದ, ನುಂಗಲೂ ಆಗದ ಬಿಸಿ ತುಪ್ಪದಂತೆ ಪರಿಣಮಿಸಿದೆ. ಅಂದು ಆರ್‌ಎಸ್‌ಎಸ್ ಪಥಸಂಚಲನ ನಡೆಸಿದರೆ, ತಮಗೂ ಅಂದೇ ಪಥಸಂಚಲನಕ್ಕೆ ಅನುಮತಿ ಕೊಡಬೇಕು ಎಂದು ದಲಿತಪರ ಸಂಘಟನೆಗಳು ಪಟ್ಟು ಹಿಡಿದಿವೆ. ಇದರಿಂದಾಗಿ ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ.
ಸೋಮವಾರ ರಾತ್ರಿಯೊಳಗೆ ಆದೇಶ
ನ.4ರ ಪಥಸಂಚಲನಕ್ಕೆ ಅನುಮತಿ ಕೊಡುವ ಅಥವಾ ತಿರಸ್ಕರಿಸುವ ಬಗ್ಗೆ ಸೋಮವಾರ ರಾತ್ರಿಯೊಳಗೆ ಆದೇಶ ಹೊರಡಿಸಬೇಕಿದೆ. ಅಲ್ಲದೆ, ಅನುಮತಿ ಕೊಡದಿದ್ದರೂ ಕೌಂಟರ್ ಪಥಸಂಚಲನ ಮಾಡಿಯೇ ತೀರುವುದಾಗಿ ದಲಿತಪರ ಸಂಘಟನೆಗಳ ಹೇಳಿಕೆಯಿಂದಾಗಿ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಕ್ರಮಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಶನಿವಾರ ತಾಲೂಕು ಆಡಳಿತದ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತಾದರೂ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ. ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ನೀಡುವುದಾದರೆ ನನಗೂ ಒಪ್ಪಿಗೆ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಪಟ್ಟು ಹಿಡಿಯಿತು. ಅಲ್ಲದೆ ದಂಡ ಹಿಡಿದು ಆರ್‌ಎಸ್‌ಎಸ್ ಪಥ ಸಂಚಲನ ನಡೆಸಬಾರದು ಎಂದು ಷರತ್ತು ವಿಧಿಸಿತು. ಇದಕ್ಕೆ ಆರ್‌ಎಸ್‌ಎಸ್ ಒಪ್ಪಲಿಲ್ಲ. ಸಮವಸ್ತ್ರದ ಜೊತೆಗೆ ದಂಡ (ದೊಣ್ಣೆ)ಯೂ ಒಂದು ಭಾಗ ಆಗಿದೆ. ಹಾಗಾಗಿ ಅದನ್ನು ಬಿಟ್ಟು ಪಥ ಸಂಚಲನ ಅಸಾಧ್ಯ ಎಂದು ಸ್ಪಷ್ಟಪಡಿಸಿತು. ಇದರಿಂದ ಶಾಂತಿ ಸಭೆಯು ಒಮ್ಮತಕ್ಕೆ ಬಾರದೆ ಮುಕ್ತಾಯವಾಯಿತು.
ಮೊದಲು ಅರ್ಜಿ ಸಲ್ಲಿಸಿದವರಿಗೆ ಅನುಮತಿ ನೀಡುವಂತೆ, ಬೇರೆಯವರು ಬೇಕಿದ್ದರೆ ಮರುದಿನ ನಡೆಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಆರ್‌ಎಸ್‌ಎಸ್ ಅ.27ರಂದು ಮೊದಲು ಅರ್ಜಿ ಸಲ್ಲಿಸಿತ್ತು. ಇದೀಗ ಜಿಲ್ಲಾಡಳಿತಕ್ಕೆ ಹೊಸ ಸವಾಲು ಮೂಡಿಸಿದೆ. ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆದ ಆರ್‌ಎಸ್‌ಎಸ್ ಪಥಸಂಚಲನ ಸುಖಾಂತ್ಯವಾಗಿತ್ತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕರ್ಮಭೂಮಿ ಗುರುಮಠಕಲ್‌ನಲ್ಲೂ ಸಹ ಪಥಸಂಚಲನ ಭಾರೀ ವಿವಾದಕ್ಕೆ ತಿರುಗಿತ್ತು. ಬಳಿಕ ಸುಖಾಂತ್ಯ ಆಗಿತ್ತು. ನಿಟ್ಟುಸಿರು ಬಿಡುವಷ್ಟರಲ್ಲಿ ಕೆಂಭಾವಿ ವಿಷಯ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ತಲೆನೋವಾಗಿಸಿದೆ.
ಆರೆಸ್ಸೆಸ್‌ಗೇ ಅನುಮತಿ
ಆರ್‌ಎಸ್‌ಎಸ್ ಪಥ ಸಂಚಲನ ನಡೆಯುವ ದಿನವೇ ಬೇರೆಯವರು ಪಥಸಂಚಲನ ಮಾಡುವುದು ಅಥವಾ ಅನುಮತಿ ಕೇಳುವುದು ತಪ್ಪು. ಆರ್‌ಎಸ್‌ಎಸ್ ಪಥ ಸಂಚಲನದಿಂದ ಜಿಲ್ಲೆಯಲ್ಲಿ ಸಮಸ್ಯೆ ಆಗಿಲ್ಲ. ಮೊದಲು ಅರ್ಜಿ ಕೊಟ್ಟವರಿಗೇ ಅನುಮತಿ ಕೊಡಬೇಕು. ದಸಂಸದವರು ಬೇರೆ ದಿನ ಪಥಸಂಚಲನ ಮಾಡಲಿ.
ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಉಸ್ತುವಾರಿ ಸಚಿವ
ನಾವು ಆರೆಸ್ಸೆಸ್ ಆಳು ಮಕ್ಕಳಲ್ಲ
‘ಆರ್‌ಎಸ್‌ಎಸ್ ನೋಂದಣಿ ಆಗದ ಒಂದು ಎನ್‌ಜಿಒ ಮಾತ್ರ. ದೇಶ ಸೇವೆ ಸಲ್ಲಿಸುವುದಾಗಿ ಹೇಳಿ ತೆರಿಗೆ ತಪ್ಪಿಸಿಕೊಳ್ಳುವ ಇವರ ಮಾತು ಕೇಳಲು ನಾವೇನು ಆರ್‌ಎಸ್‌ಎಸ್ ಗುಲಾಮರಾ ಅಥವಾ ಸರ್ಕಾರದವರೇನು ಅವರ ಆಳು ಮಕ್ಕಳಾ?
- ಪ್ರಿಯಾಂಕ್ ಖರ್ಗೆ, ಸಚಿವ
)

;Resize=(128,128))
;Resize=(128,128))